ಮಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾ. 20 ಮತ್ತು 21ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ’ಸೋಜಾ ತಿಳಿಸಿದ್ದಾರೆ.
ಅವರ ಪ್ರವಾಸ ಕಾರ್ಯಕ್ರಮಗಳ ವಿವರ ತಿಳಿದುಬಂದಿಲ್ಲ, ಮುಂದೆ ಅದನ್ನು ತಿಳಿಸಲಾಗುವುದು ಎಂದವರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಹೈದರಾಬಾದ್ ಕರ್ನಾಟಕ ಮತ್ತು ಮುಂಬಯಿ ಕರ್ನಾಟಕ ಪ್ರದೇಶಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯಕ್ರಮಗಳಿಗೆ ಅಪೂರ್ವ ಜನ ಬೆಂಬಲ ವ್ಯಕ್ತವಾಗಿದೆ. ಇದರಿಂದ ಬಿಜೆಪಿ ನಾಯಕರಿಗೆ ನಿರಾಶೆಯಾಗಿದ್ದು, ಹಾಗಾಗಿ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಬೆಂಗಳೂರು ಮತ್ತು ದಾವಣಗೆರೆ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಾಲ್ಗೊಂಡ ಕಾರ್ಯಕ್ರಮಗಳಿಗೆ ನಿರೀಕ್ಷಿತ ಪ್ರತಿಕ್ರಿಯೆ ಕಂಡುಬಂದಿಲ್ಲದ ಕಾರಣ ಬಿಜೆಪಿ ನಾಯಕರು ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದವರು ಆರೋಪಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಾಗೂ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬರುವುದಿಲ್ಲ, ಕಾಂಗ್ರೆಸ್ ಗೆಲ್ಲುತ್ತದೆ ಎಂದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ಈ ರೀತಿಯ ರಾಜಕಾರಣ ಮಾಡುತ್ತಿದ್ದಾರೆ. “ಟೆನ್ ಪರ್ಸಂಟೇಜ್ ಸರಕಾರ’, “ಸಿದ್ದಾ ರುಪಯ್ಯ ಸರಕಾರ’ ಎಂಬುದಾಗಿ ಪ್ರಧಾನಿ ಮೋದಿ ಅವರು ಟೀಕಿಸಿರುವುದು ಪ್ರಧಾನಿ ಹುದ್ದೆಯ ಘನತೆ ಮತ್ತು ಗೌರವಕ್ಕೆ ತಕ್ಕುದಲ್ಲ ಎಂದು ಐವನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಜೆ. ನಾಗೇಂದ್ರ ಕುಮಾರ್, ಪುನೀತ್ ಶೆಟ್ಟಿ, ಗುರುರಾಜ್, ಮುದಸ್ಸಿರ್ ಕುದ್ರೋಳಿ, ಲಾಯ್ಡ ಡಿ’ಸೋಜಾ, ನಝೀರ್ ಬಜಾಲ್ ಉಪಸ್ಥಿತರಿದ್ದರು.