Advertisement

ಸೋರುತ್ತಿದೆ ಗಂಗೊಳ್ಳಿ ಮೀನುಗಾರಿಕೆ ಬಂದರಿನ ಕಟ್ಟಡ

06:00 AM Jul 06, 2018 | |

ಗಂಗೊಳ್ಳಿ: ಉಡುಪಿ ಜಿಲ್ಲೆಯ ಎರಡನೇ ಅತಿ ದೊಡ್ಡ ಮೀನುಗಾರಿಕೆ ನೆಲೆಯಾಗಿರುವ ಗಂಗೊಳ್ಳಿಯ ಮೀನುಗಾರಿಕೆ ಬಂದರಿನ ಕಟ್ಟಡದ ಶೀಟು ಹಾರಿ ಹೋಗಿ 2 ತಿಂಗಳಾಗಿದೆ. ಮಳೆಗೆ ನೀರು ಸೋರುತ್ತಿದ್ದರೂ, ಇಲಾಖೆ ಮಾತ್ರ ಇನ್ನೂ ನಿದ್ರಾವಸ್ಥೆಯಲ್ಲಿದೆ. 

Advertisement

ಗಂಗೊಳ್ಳಿ ಮೀನುಗಾರಿಕೆ 
ಬಂದರಿನಲ್ಲಿ  2 ಕಟ್ಟಡಗಳಿದ್ದು, ಅದನ್ನು ಬೇರೆ ಮೀನುಗಾರ ಸಂಘ ಗಳು, ಸಹಕಾರಿ ಸಂಸ್ಥೆಗಳಿಗೆ ಬಾಡಿಗೆ ನೀಡಲಾಗಿದೆ. ತಿಂಗಳಿಗೆ 12 ಸಾವಿರ ರೂ. ಮಾಸಿಕ ಬಾಡಿಗೆ ಹಾಗೂ ಪ್ರತ್ಯೇಕವಾಗಿ ವಿದ್ಯುತ್‌ ಬಿಲ್‌ನ್ನು ಸಂಗ್ರಹಿಸುತ್ತಿದೆ. ತಲಾ 9ರಂತೆ ಒಟ್ಟು 18 ಕೋಣೆಗಳನ್ನು ಬಾಡಿಗೆಗೆ ನೀಡಲಾಗಿದೆ. 

2 ತಿಂಗಳಾಯಿತು…
ಮೇ ಪ್ರಾರಂಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬಂದ ಒಂದೆರಡು ಗಾಳಿ- ಮಳೆಗೆ ಇಲ್ಲಿನ ಶೀಟುಗಳು ಹಾರಿ ಹೋಗಿದ್ದು,ಕೆಲವು ಶೀಟುಗಳಿಗೆ ಹಾನಿಯಾಗಿವೆ. ಆಗಲೇ ಇದನ್ನು ಸರಿ ಮಾಡಲು ಮೀನುಗಾರಿಕೆ ಇಲಾಖೆ ಮುಂದಾಗುತ್ತಿದ್ದರೆ, ಈಗ ಈ ಸೋರುವ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಿನ್ನು ಮಳೆಗಾಲ  ಆರಂಭಗೊಂಡಿದ್ದು, ದುರಸ್ತಿ ಮಾಡುವುದು ಅಸಾಧ್ಯ. 

ಈಗ ಮೀನುಗಾರಿಕೆ  ರಜೆ ಇರುವುದ ರಿಂದ ಅಷ್ಟೇನೂ ಸಮಸ್ಯೆ ಆಗುತ್ತಿಲ್ಲ. ಆದರೆ ಇನ್ನೊಂದು ತಿಂಗಳಲ್ಲಿ ಅಂದರೆ ಆಗಸ್ಟ್‌ ಮೊದಲ ವಾರದಲ್ಲಿ ಮತ್ತೆ ಮೀನುಗಾರಿಕೆ ಋತು ಆರಂಭವಾಗಲಿದ್ದು, ಆಗ ಮೀನುಗಾರರಿಗೆ ಸಮಸ್ಯೆಯಾಗಲಿದೆ. 

381 ಕೋ.ರೂ. ಆದಾಯ
ಕಳೆದ ಮೀನುಗಾರಿಕೆ  ಋತುವಿನಲ್ಲಿ 31,115 ಮೆಟ್ರಿಕ್‌ ಟನ್‌ ಮೀನು ಸಂಗ್ರಹ, 381 ಕೋ. ರೂ. ಆದಾಯ ಬಂದಿದೆ. ಆದರೂ ಈ ಬಂದರನ್ನು ಮೇಲ್ದರ್ಜೆಗೇರಿಸಲು ಸಂಬಂಧಪಟ್ಟ ಜನಪ್ರತಿನಿಧಿ ಗಳಾಗಿ, ಇಲಾಖೆಯಾಗಲಿ ಮುಂದಾಗುತ್ತಿಲ್ಲ. ಈ ಬಂದರಿನ ಕಟ್ಟಡಗಳ ನಿರ್ಮಾಣವಾಗಿ ಸುಮಾರು 15 ವರ್ಷಗಳು ಕಳೆದರೂ, ಇನ್ನೂ ಛಾವಣಿಗಳ ದುರಸ್ತಿ ಕಾರ್ಯ ಒಮ್ಮೆಯೂ ಆಗಿಲ್ಲ. 

Advertisement

 ಕಿಂಚಿತ್ತೂ ಕಾಳಜಿಯಿಲ್ಲ
ತಿಂಗಳಿಗೆ ಸಾವಿರಾರು ರೂ. ಬಾಡಿಗೆ ಪಡೆಯುತ್ತಿದ್ದರೂ, ಗಂಗೊಳ್ಳಿಯ ಬಂದರಿನ ಅಭಿವೃದ್ಧಿ ಬಗ್ಗೆ ಮೀನುಗಾರಿಕಾ ಇಲಾಖೆಗೆ ಕಿಂಚಿತ್ತೂ ಕಾಳಜಿಯಿಲ್ಲ.  ಆ ಶೀಟುಗಳಿಗೆ ಹಾನಿಯಾಗಿ ತಿಂಗಳುಗಳೇ ಕಳೆದಿವೆ. ಆದರೂ ಇನ್ನೂ ದುರಸ್ತಿ ಪಡಿಸಲು ಮುಂದಾಗುತ್ತಿಲ್ಲ. ಇಲ್ಲಿನ ಸಮಸ್ಯೆಗಳ ಕುರಿತು ಸರಕಾರದ ಗಮನಕ್ಕೂ ತರುತ್ತಿಲ್ಲ. ಆದರೆ ಮೀನುಗಾರರಿಗೆ ಮಾತ್ರ ತೊಂದರೆ ಕೊಡುತ್ತಾರೆ. 
– ರವೀಂದ್ರ ಪಟೇಲ್‌
ಮೀನುಗಾರ ಮುಖಂಡರು, ಗಂಗೊಳ್ಳಿ

ದೂರು ಕೊಟ್ಟರೂ ಪ್ರಯೋಜನವಿಲ್ಲ
ಗಂಗೊಳ್ಳಿ ಬಂದರಿನ ದುಃಸ್ಥಿತಿಯ ಬಗ್ಗೆ ಇಲಾಖೆಗೆ  ಸಾಕಷ್ಟು ಬಾರಿ ದೂರು ನೀಡಿದ್ದೇವೆ. 
-ಮೋಹನ್‌ ಖಾರ್ವಿ
ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷ

ಇಲಾಖೆಗೆ ಪ್ರಸ್ತಾವನೆ 
ಸಲ್ಲಿಸಲಾಗಿದೆ
ಬಂದರಿನಲ್ಲಿರುವ ಕಟ್ಟಡದ ಛಾವಣಿ ದುರಸ್ತಿಗೆ ಬಂದರು ಮತ್ತು ಮೀನುಗಾರಿಕೆ  ಇಲಾಖೆಗೆ ಹಾನಿಯಾದ ಮರುದಿನವೇ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರು ಬಂದರಿನ  ಹಾನಿಯ ಪ್ರಮಾಣವನ್ನು ತಿಳಿದು, ಆ ಬಳಿಕ ಕರಡು ಸಿದ್ದಪಡಿಸಿ, ಟೆಂಡರ್‌ ಕರೆಯಬಹುದು. ಮುಂದಿನ ಮೀನುಗಾರಿಕೆ  ಋತುವಿಗೆ ಮುನ್ನ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. 
– ಅಂಜನಾದೇವಿ
ಮೀನುಗಾರಿಕಾ ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಬಂದರು 

ಚಿತ್ರ:ಕೃಷ್ಣ ಗಂಗೊಳ್ಳಿ
– ಪ್ರಶಾಂತ್‌ ಪಾದ

Advertisement

Udayavani is now on Telegram. Click here to join our channel and stay updated with the latest news.

Next