ಮಂಗಳೂರಿನ ಪ್ರತಿಭಾವಂತರೆಲ್ಲ ಸೇರಿ ಮಾಡಿದ “ಲುಂಗಿ’ ಚಿತ್ರ ಈಗಾಗಲೇ ಪೋಸ್ಟರ್, ಟ್ರೇಲರ್ ಮತ್ತು ರಿಲೀಸ್ ಆಗಿರುವ ಮೊದಲ ಸಾಂಗ್‌ನಿಂದಲೇ ಜೋರು ಸುದ್ದಿಯಾಗಿದೆ. ಈಗ “ಲುಂಗಿ’ ಹೊಸ ಸುದ್ದಿಗೆ ಕಾರಣವಾಗಿದೆ. ಹೌದು, ಬಿಡುಗಡೆಯ ಮೊದಲೇ “ಲುಂಗಿ’ ಚಿತ್ರ ತೆಲುಗು ಭಾಷೆಗೆ ರಿಮೇಕ್ ಹಕ್ಕು ಮಾರಾಟವಾಗಿದೆ. ಸಹಜವಾಗಿಯೇ, ಚಿತ್ರತಂಡಕ್ಕೆ ಇದು ಖುಷಿಯನ್ನೂ ಹೆಚ್ಚಿಸಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ “ಲುಂಗಿ’ ಅಕ್ಟೋಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅದಕ್ಕೂ ಮೊದಲೇ ಒಂದಷ್ಟು ಸದ್ದು ಮಾಡುತ್ತಿರುವುದರಿಂದ, ಹೊಸಬರಲ್ಲಿ ಒಂದಷ್ಟು ಉತ್ಸಾಹ ಹೆಚ್ಚಿರುವುದಂತೂ ಸುಳ್ಳಲ್ಲ. ಈಗಾಗಲೇ ತೆಲುಗು ಸಿನಿಮಾ ಮಂದಿ “ಲುಂಗಿ’ ಚಿತ್ರ ನೋಡಿದ್ದಾರೆ. ಅವರಿಗೆ ಎಮೋಷನಲ್ ಜರ್ನಿ ಇಷ್ಟವಾಗಿದ್ದರಿಂದ, ತೆಲುಗು ಭಾಷೆಯಲ್ಲೂ ಈ ಸಿನಿಮಾ ಮಾಡುವ ಉತ್ಸಾಹದಿಂದ ರಿಮೇಕ್ ರೈಟ್ಸ್ ಪಡೆದಿದ್ದಾರೆ ಎಂಬುದು ನಿರ್ದೇಶಕ ಅರ್ಜುನ್ ಲೂಯಿಸ್ ಮಾತು.
ಮೊದಲ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದನ್ನು ಕಂಡ ಚಿತ್ರತಂಡ, ರಾಜ್ಯದ ಹಲವು ನಗರಗಳಲ್ಲಿ “ಲುಂಗಿ’ಯ ಪ್ರೀತಿ, ಸೌಂದರ್ಯ ಮತ್ತು ಸಂಸ್ಕೃತಿ ಕುರಿತು ಪ್ರಚಾರ ಮಾಡುತ್ತಿದೆ. “ಲುಂಗಿ’ಯ ಹಾಡು, ಟ್ರೇಲರ್‌ಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ , ಆನ್‌ಲೈನ್‌ನಿಂದಲೂ “ಲುಂಗಿ’ ಖರೀದಿಗೆ ಮಾತುಕತೆ ನಡೆಯುತ್ತಿದ್ದು, ಇಷ್ಟರಲ್ಲೇ ಆ ಬಗ್ಗೆ ಸ್ಪಷ್ಟಪಡಿಸುವುದಾಗಿ ಹೇಳುತ್ತಾರೆ ನಿರ್ದೇಶಕರು.
ಟ್ರೇಲರ್ ಬಿಡುಗಡೆ ಮಾಡಿ, ತಂಡಕ್ಕೆ ಶುಭಹಾರೈಸಿದ್ದ ನಟ ರಕ್ಷಿತ್ ಶೆಟ್ಟಿ ಅವರ ಸಹಕಾರ ಸಾಕಷ್ಟಿದೆ ಎನ್ನುವ ಅರ್ಜುನ್ ಲೂಯಿಸ್, ಈಗ ರಿಷಭ್ ಶೆಟ್ಟಿ ಕೂಡ “ಲುಂಗಿ’ ಹಿಂದೆ ನಿಂತಿದ್ದಾರೆ. ಅವರು ಬುಧವಾರ “ವೇಸ್ಟ್ ಬಾಡಿ…’ ಎಂಬ ಎರಡನೇ ಹಾಡನ್ನು ಯು ಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ’ ಎಂದು ವಿವರಿಸುತ್ತಾರೆ ಅರ್ಜುನ್ ಲೂಯಿಸ್. ಅಂದಹಾಗೆ, ಈ ಹಾಡಿಗೆ ಅರ್ಜುನ್ ಲೂಯಿಸ್ ಸಾಹಿತ್ಯವಿದ್ದು, ಸಂಚಿತ್ ಹೆಗ್ಡೆ ಹಾಡಿದ್ದಾರೆ.
ಪ್ರಸಾದ್ ಕೆ.ಶೆಟ್ಟಿ ಸಂಗೀತವಿದೆ. ಎಂಜಿನಿಯರ್ ಎನಿಸಿಕೊಂಡ ಹೀರೋಗೆ ತನ್ನೂರಲ್ಲೇ ಏನಾದರೂ ಮಾಡಬೇಕೆಂಬ ಹಂಬಲ. ಆದರೆ, ಅವನ ತಂದೆಗೆ ತನ್ನ ಮಗನನ್ನು ವಿದೇಶಕ್ಕೆ ಕಳುಹಿಸಬೇಕೆಂಬ ಆಸೆ. ಆದರೆ, ಅಪ್ಪನ ಮಾತು ಪಕ್ಕಕ್ಕಿಟ್ಟು, ತಾನು ಇಲ್ಲೇ ದುಡಿಮೆ ಮಾಡ್ತೀನಿ ಅನ್ನುವ ಹೀರೋನನ್ನು ಅಕ್ಕಪಕ್ಕದ ಮಂದಿ, ಸಲುಗೆಯಿಂದಲೇ ಒಂದಷ್ಟು ಕೆಲಸ ಮಾಡಿಸಿಕೊಳ್ಳುತ್ತಿರುತ್ತಾರೆ. ಅಪ್ಪನಿಗೆ ಅದು ಇನ್ನಷ್ಟು ಕೋಪ ತರಿಸುತ್ತೆ.
ನೀನು “ವೇಸ್ಟ್ ಬಾಡಿ…’ ಅಂತ ಬೈಯುತ್ತಾರೆ. ಆಗ ಶುರುವಾಗುವ “ವೇಸ್ಟ್ ಬಾಡಿ’ ಹಾಡಿನ ಕೊನೆಯಲ್ಲಿ, ಹೀರೋ ಬದುಕಲ್ಲೊಂದು ಟರ್ನಿಂಗ್ ಪಾಯಿಂಟ್ ಸಿಗುತ್ತೆ. ಅದೇ “ಲುಂಗಿ’ ಬಿಝಿನೆಸ್. ಅಲ್ಲಿಂದ ಕಥೆ ಹೊಸ ರೂಪ ಪಡೆಯುತ್ತೆ ಎಂಬುದು ನಿರ್ದೇಶಕರ ಮಾತು. ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿ ನಿರ್ದೇಶಕರು. ಮುಖೇಶ್ ಹೆಗಡೆ ನಿರ್ಮಾಣವಿದೆ. ಪ್ರಣವ್ ಹೆಗ್ಡೆ ನಾಯಕರಾಗಿದ್ದು, ಅವರಿಗೆ ಅಹಲ್ಯಾ ಸುರೇಶ್ ಮತ್ತು ರಾಧಿಕಾ ರಾವ್ ನಾಯಕಿಯರು. ಚಿತ್ರಕ್ಕೆ ರಿಜ್ಜೋ ಪಿ.ಜಾನ್ ಛಾಯಾಗ್ರಹಣವಿದೆ.