ತುಮಕೂರು: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯರ ಮಹದಾಸೆಯಂತೆ ಅವರ ಲಿಂಗಕಾಯದ ಅಂತಿಮ ದರ್ಶನಕ್ಕೆ ಬಂದಿರುವ ಲಕ್ಷಾಂತರ ಭಕ್ತರಿಗೂ ದಾಸೋಹದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ದಾಸೋಹದ ನಂತರವೇ ಸಾವಿನ ಸುದ್ದಿಯನ್ನು ಘೋಷಿಸುವಂತೆ ಸೂಚಿಸಿದ್ದ ಮಹಾನ್ ಸಂತನಿಗೆ ದಾಸೋಹ ಸೇವೆಯ ಮೂಲಕವೇ ಅತ್ಯಂತ ಭಾವಪೂರ್ಣವಾದ ವಿದಾಯ ಮಂಗಳವಾರ ನೀಡಲಾಯಿತು.
ಗೋಸಲ ಸಿದ್ದೇಶ್ವರ ವೇದಿಕೆಯ ಮೈದಾನದಲ್ಲಿ ಶ್ರೀಗಳ ಲಿಂಗಶರೀರದ ಅಂತಿಮ ದರ್ಶನ ಪಡೆದ ಭಕ್ತರಿಗೆ ಮಠದ ಆವರಣದಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ರೈಲು ನಿಲ್ದಾಣದ ದ್ವಾರದ ಮೂಲಕ ಅಂತಿಮ ದರ್ಶನಕ್ಕೆ ಬರುವ ಭಕ್ತರಿಗೆ ಸಿದ್ಧಗಂಗಾ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಬೃಹತ್ ಶಾಮಿಯಾನ ಹಾಕಿ ದಾಸೋಹ ನೀಡಲಾಗಿತ್ತು. ದರ್ಶನ ಪಡೆದು ಹಳೇ ಮಠದ ಮುಖ್ಯದ್ವಾರದಿಂದ ವಾಪಸ್ ಹೋಗುತ್ತಿದ್ದ ಭಕ್ತರಿಗೆ ಮಠದ ಪ್ರಸಾದ ಮಂದಿರದಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಅನ್ನ, ವಿವಿಧ ತರಕಾರಿ ಹಾಕಿರುವ ಬೇಳೆ ಸಾರು, ಪಾಯಸ ಹಾಗೂ ಮಜ್ಜಿಗೆ ಪ್ರಸಾದ ರೂಪದಲ್ಲಿ ದಾಸೋಹದಲ್ಲಿ ಭಕ್ತರಿಗೆ ನೀಡಲಾಯಿತು. ಸರಿಸುಮಾರು 12 ಲಕ್ಷ ಭಕ್ತರು ದಾಸೋಹ ಸ್ವೀಕರಿಸಿದ್ದು, ಯಾರೊಬ್ಬರಿಗೂ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ದಾಸೋಹದ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿತ್ತು. ಅಡಕೆ ಹಾಳೆಯ ತಟ್ಟೆಗಳಲ್ಲಿ ಊಟ ನೀಡಲಾಯಿತು. ನೀರು ಮತ್ತು ಮಜ್ಜಿಗೆಯನ್ನು ಪೇಪರ್ ಕಪ್‌ಗ್ಳಲ್ಲಿ ವಿತರಿಸಲಾಯಿತು. ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆಯ ತನಕ ಸರತಿ ಸಾಲಿನಲ್ಲಿ ಲಿಂಗ ಕಾಯದ ದರ್ಶನಕ್ಕೆ ನಿಂತಿದ್ದ ಭಕ್ತರಿಗೆ ಮಠದ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದ್ದರು.
ನಗರಾದ್ಯಂತ ದಾಸೋಹ: ತುಮಕೂರು ನಗರದಾದ್ಯಂತ ವಿವಿಧ ಸಂಘಟನೆಗಳು, ಹೋಟೆಲ್‌ಗಳ ಮಾಲೀಕರು ಸಾರ್ವಜನಿಕರಿಗೆ, ಅಂತಿಮ ದರ್ಶನಕ್ಕೆ ಬಂದಿರುವ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಿದ್ದರು. ಮಂಗಳವಾರ ನಗರದ ವಿವಿಧ ಬಡವಾಣೆ, ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಯುವಕರ ತಂಡ, ಸಂಘ ಸಂಸ್ಥೆಗಳು ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ನೀಡಿದರು.
ಅಡ್ಡಿಯಾಗದಂತೆ ಪಾರ್ಕಿಂಗ್ ವ್ಯವಸ್ಥೆ
ಶ್ರೀಗಳ ಅಂತಿಮ ದರ್ಶನಕ್ಕೆ ಸಾಗರದಂತೆ ಭಕ್ತ ಸಮೂಹ ಸೇರಿತ್ತು. ರಾಜ್ಯದ ಬೇರೆ ಬೇರೆ ಭಾಗದಿಂದ ಬಂದವರಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಮಠದ ಹೊಲ, ಜ್ಯೂನಿಯರ್ ಕಾಲೇಜು ಮೈದಾನ, ಎಪಿಎಂಸಿ ಯಾರ್ಡ್, ಬಸವೇಶ್ವರ ದೇವಾಲಯ ಹಿಂಭಾಗ, ಇಸ್ರೋ ಅವರಣ ಮೊದಲಾದ ಭಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಂದ ಭಕ್ತರನ್ನು ಶ್ರೀ ಮಠಕ್ಕೆ ಕರೆದುಕೊಂಡು ಹೋಗಲು ಪ್ರತ್ಯೇಕ ಬಸ್‌ಗಳನ್ನು ಜಿಲ್ಲಾಡಳಿತದಿಂದ ನಿಯೋಜಿಸಲಾಗಿತ್ತು.