Advertisement

 ಅನ್ನದಾತರ ಮೇಲೆ ಚರ್ಮಗಂಟು ಪ್ರಹಾರ; ಯಾವ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ ? ಇಲ್ಲಿದೆ ಮಾಹಿತಿ…

12:00 AM Dec 21, 2022 | Team Udayavani |

ರಾಜ್ಯದ ಅನ್ನದಾತರ ಬೆನ್ನೆಲುಬಾಗಿರುವ ಜಾನುವಾರುಗಳ ಮೇಲೆ ಚರ್ಮಗಂಟು ರೋಗ ಗದಾ ಪ್ರಹಾರ ನಡೆಸಿದ್ದು, ಇದರಿಂದಾಗಿ ಸಾವಿರಾರು ಜಾನುವಾರುಗಳು ಸಾವನ್ನಪ್ಪಿವೆ. ಇದರಿಂದಾಗಿ ತಮಗೆ ಆಧಾರವಾಗಿದ್ದ ಜಾನುವಾರುಗಳನ್ನು ಕಳೆದುಕೊಂಡು ಆತ ಬಲಕಳೆದುಕೊಂಡಿದ್ದಾನೆ. ಇದಕ್ಕೆ ಉತ್ತರವಾಗಿ ಸರಕಾರ ಲಸಿಕೆಯನ್ನೂ ನೀಡುತ್ತಿದೆ. ಕೆಲವು ಕಡೆ ಸಿಬಂದಿ ಕೊರತೆಯಿಂದ ಸರಿಯಾದ ಪ್ರಮಾಣದಲ್ಲಿ ಲಸಿಕಾಕರಣವೂ ಆಗಿಲ್ಲ. ರಾಜ್ಯದ ಯಾವ ಜಿಲ್ಲೆಗಳಲ್ಲಿ ಪರಿಸ್ಥಿತಿ ಏನಿದೆ? ಎಲ್ಲೆಲ್ಲಿ ಎಷ್ಟು ಜಾನುವಾರುಗಳು ಸಾವನ್ನಪ್ಪಿವೆ? ಪರಿಹಾರ ಸಿಕ್ಕಿದೆಯೇ? ಇಲ್ಲಿದೆ ಮಾಹಿತಿ…

Advertisement

ಬೆಳಗಾವಿಯಲ್ಲಿ ಸಾವು ಹೆಚ್ಚು
ಕಿತ್ತೂರು ಕರ್ನಾಟಕ
ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ವಿಜಯಪುರ
ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೂ ಚರ್ಮಗಂಟು ರೋಗ ಹೆಚ್ಚಾಗಿ ಕಾಡುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 1093, ಗದಗದಲ್ಲಿ 982, ಹಾವೇರಿಯಲ್ಲಿ  2252, ಉತ್ತರ ಕನ್ನಡದಲ್ಲಿ 152, ಧಾರವಾಡದಲ್ಲಿ 614, ಬೆಳಗಾವಿಯಲ್ಲಿ 5120, ವಿಜಯಪುರದಲ್ಲಿ 158 ರಾಸುಗಳು ಸಾವನ್ನಪ್ಪಿವೆ. ಈ ಎಲ್ಲ ಜಿಲ್ಲೆಗಳಲ್ಲಿಯೂ ಲಸಿಕಾ ಪ್ರಮಾಣವೂ ಹೆಚ್ಚಾಗಿಯೇ ಇದೆ. ಬಾಗಲಕೋಟೆಯಲ್ಲಿ 3 ಲಕ್ಷ ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಗದಗ ಜಿಲ್ಲೆಯಲ್ಲಿ ಬಿಡಾಡಿ ದನಗಳಲ್ಲಿಯೂ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇಲ್ಲಿ ಏಳು ಸಾವಿರ ಜಾನು

ವಾರುಗಳಿಗೆ ರೋಗ ತಗುಲಿದೆ. ಹಾಗೆಯೇ ಒಂದೂವರೆ ಲಕ್ಷ ರಾಸುಗಳಿಗೆ ಲಸಿಕೆ ಹಾಕಿಸಲಾಗಿದೆ. ಕೇವಲ 333 ಜಾನುವಾರುಗಳಿಗೆ ಮಾತ್ರ 74.10 ಲಕ್ಷ ರೂ. ಪರಿಹಾರ ವಿತರಣೆಯಾಗಿದೆ. ಹಾವೇರಿಯಲ್ಲಿ 22435 ಜಾನುವಾರುಗಳಿಗೆ ಸೋಂಕು ಕಾಣಿಸಿಕೊಂಡಿದ್ದರೆ 2 ಸಾವಿರಕ್ಕೂ ಹೆಚ್ಚು ಸಾವನ್ನಪ್ಪಿವೆ. 2.63 ಲಕ್ಷ ಲಸಿಕೆ ಹಾಕಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಮೂರು ಸಾವಿರ ರಾಸುಗಳಿಗೆ ಸೋಂಕು ಕಾಣಿಸಿದ್ದು, ಸಾವಿನ ಪ್ರಮಾಣ ಕಡಿಮೆ ಇದೆ. ದನ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಧಾರವಾಡದಲ್ಲಿ 6548 ರಾಸುಗಳಿಗೆ ಸೋಂಕು ತಗುಲಿದ್ದು, 614 ಸಾವನ್ನಪ್ಪಿವೆ. 1.83 ಲಕ್ಷ ಲಸಿಕೆ ಹಾಕಿಸಲಾಗಿದೆ.

ರಾಜ್ಯದಲ್ಲಿಯೇ ತೀ ಹೆಚ್ಚು ರಾಸುಗಳು ಸಾವನ್ನಪ್ಪಿರುವುದು ಬೆಳಗಾವಿಯಲ್ಲೇ. ಇಲ್ಲಿ 5120 ಜಾನುವಾರುಗಳು ಸಾವನ್ನಪ್ಪಿವೆ. 42,225 ರಾಸುಗಳಿಗೆ ಸೋಂಕು ತಗುಲಿದ್ದು. 7.42 ಲಕ್ಷ ಲಸಿಕೆ ನೀಡಲಾಗಿದೆ. ವಿಜಯಪುರದಲ್ಲಿ 1198 ರಾಸುಗಳಿಗೆ ಸೋಂಕು, 158 ಸಾವನ್ನಪ್ಪಿವೆ. 2.11 ಲಕ್ಷ ಲಸಿಕೆ ಹಾಕಲಾಗಿದೆ.

ಜೀವ ಹಿಂಡುತ್ತಿದೆ ಸೋಂಕು ಮಧ್ಯ- ಕರಾವಳಿ ಕರ್ನಾಟಕ
ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ
ಈ ಜಿಲ್ಲೆಗಳಲ್ಲಿ ಚರ್ಮಗಂಟು ರೋಗ ಸಾಕಷ್ಟು ಕಾಡುತ್ತಿದೆ. ಶಿವಮೊಗ್ಗದಲ್ಲಿ 576, ದಕ್ಷಿಣ ಕನ್ನಡ 32, ಉಡುಪಿಯಲ್ಲಿ 3, ಚಿಕ್ಕಮಗಳೂರಿನಲ್ಲಿ 303, ದಾವಣಗೆರೆಯಲ್ಲಿ 1188 ಮತ್ತು 1225 ಜಾನುವಾರುಗಳು ಸಾವನ್ನಪ್ಪಿವೆ.  ಈ ಎಲ್ಲ ಜಿಲ್ಲೆಗಳಲ್ಲಿಯೂ ಲಸಿಕಾ ಪ್ರಕ್ರಿಯೆಯೂ ಉತ್ತಮವಾಗಿ ಆಗುತ್ತಿದೆ. ಶಿವಮೊಗ್ಗದಲ್ಲಿ 7321 ರಾಸುಗಳಲ್ಲಿ ರೋಗ ಕಾಣಿಸಿದೆ. ಇಲ್ಲಿ ಈಗಾಗಲೇ 4.75 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇನ್ನು ದಕ್ಷಿಣ ಕನ್ನಡ 1226 ಮತ್ತು ಉಡುಪಿಯಲ್ಲಿ 798 ರಾಸುಗಳಲ್ಲಿ ಮಾತ್ರ ಸೋಂಕು ಕಾಣಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 1.50 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 7431 ರಾಸುಗಳಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಲಸಿಕೆ ಬಳಿಕವೂ ಸಾವಿನ ಪ್ರಕರಣ ಕಂಡು ಬಂದಿದ್ದು ಆತಂಕ ಮೂಡಿಸಿದೆ. ಒಟ್ಟಾರೆಯಾಗಿ 1188 ರಾಸುಗಳು ಸಾವನ್ನಪ್ಪಿದ್ದರೆ, 2.20 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಅತ್ತ ಚಿತ್ರದುರ್ಗದಲ್ಲಿ ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡಲಾಗುತ್ತಿದೆ. 10,659 ರಾಸುಗಳಿಗೆ ಸೋಂಕು ಕಂಡು ಬಂದಿದ್ದರೆ 2 ಲಕ್ಷ ಲಸಿಕೆ ಹಾಕಲಾಗಿದೆ.

Advertisement

ಲಸಿಕಾ ಪ್ರಮಾಣ ಹೆಚ್ಚಳ ಮೈಸೂರು ಕರ್ನಾಟಕ
ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ
ಮೈಸೂರು ಭಾಗದಲ್ಲೂ ಹೆಚ್ಚಿನ ಸೋಂಕು ಕಂಡು ಬಂದಿದ್ದು, ಲಸಿಕಾ ಪ್ರಮಾಣವೂ ಹೆಚ್ಚಾಗಿದೆ. ಹಾಸನದಲ್ಲಿ 116, ತುಮಕೂರಿನಲ್ಲಿ 692, ಕೋಲಾರದಲ್ಲಿ 219, ಚಿಕ್ಕಬಳ್ಳಾಪುರದಲ್ಲಿ 333, ಚಾಮರಾಜನಗರದಲ್ಲಿ 181, ಮೈಸೂರಿನಲ್ಲಿ 158, ಮಂಡ್ಯದಲ್ಲಿ 167, ಬೆಂಗಳೂರು ಗ್ರಾಮಾಂತರದಲ್ಲಿ 176, ರಾಮ­ನಗರದಲ್ಲಿ 865 ಜಾನು­ವಾರುಗಳು ಸಾವನ್ನಪ್ಪಿವೆ.

ಉಳಿದ ಭಾಗಕ್ಕೆ ಹೋಲಿಕೆ ಮಾಡಿದರೆ ಇಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಅಂದರೆ ರಾಮನಗರದಲ್ಲಿಯೇ ಕೊಂಚ ಹೆಚ್ಚಿನ ಪ್ರಮಾಣದಲ್ಲಿದೆ. ರೋಗ ನಿಯಂತ್ರಣಕ್ಕಾಗಿ ದನಗಳ ಜಾತ್ರೆಯನ್ನು ನಿಷೇಧಿಸಲಾಗಿದೆ. ಪರಿಹಾರವನ್ನೂ ನೀಡಲಾಗುತ್ತಿದೆ. ಹಾಸನದಲ್ಲಿ  7 ಲಕ್ಷ ವ್ಯಾಕ್ಸಿನ್‌ ಪೂರೈಕೆಯಾಗಿದ್ದು, ಅರ್ಧದಷ್ಟು ನೀಡಲಾಗಿದೆ. ತುಮಕೂರಿನಲ್ಲಿ 7,656 ಸೋಂಕು ಕಾಣಿಸಿಕೊಂಡಿದ್ದು, 3.74 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ತುಮಕೂರಿನಲ್ಲಿ 7,656 ಜಾನುವಾರುಗಳಿಗೆ ಚರ್ಮಗಂಟು ರೋಗ ತಗುಲಿದೆ. ಕೋಲಾರದಲ್ಲಿ 3889 ರಾಸುಗಳಿಗೆ ಸೋಂಕು ತಗುಲಿದ್ದರೆ 2.16 ಲಕ್ಷ ಲಸಿಕೆ ಹಾಕಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 1.26 ಲಕ್ಷ, ಚಾಮರಾಜನಗರದಲ್ಲಿ 1.74 ಲಕ್ಷ ರಾಸುಗಳಿಗೆ ಲಸಿಕೆ ಹಾಕಲಾಗಿದೆ.  ಮೈಸೂರಿನಲ್ಲಿ ಲಸಿಕೆ ನೀಡಲು ಸಿಬಂದಿ ಕೊರತೆ ಎದುರಾಗಿದೆ. ಇಲ್ಲಿ 3,200 ರಾಸುಗಳಿಗೆ ಸೋಂಕು ತಗುಲಿದ್ದು, 3.10 ಲಕ್ಷ ಹಸುಗಳಿಗೆ ಲಸಿಕೆ ಹಾಕಲಾಗಿದೆ. ಮಂಡ್ಯದಲ್ಲಿ 4,526 ರಾಸುಗಳಿಗೆ ಸೋಂಕು, 3.12 ಲಕ್ಷ ಲಸಿಕೆ ಹಾಕಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 2 ಸಾವಿರಕ್ಕೂ ಹೆಚ್ಚು ಹಸುಗಳಿಗೆ ಸೋಂಕು ತಗುಲಿದೆ. ರಾಮನಗರದಲ್ಲಿ 3246 ರಾಸುಗಳಲ್ಲಿ ಚರ್ಮ ಗಂಟುರೋಗ ಕಾಣಿಸಿಕೊಂಡಿದ್ದು, 865 ರಾಸುಗಳು ಈವರೆಗೆ ಸಾವನ್ನಪ್ಪಿವೆ. ಲಸಿಕಾ ಕಾರ್ಯ ಶೇ.89ರಷ್ಟು ಮುಗಿದಿದೆ.

ಪರಿಹಾರ ನೀಡುವುದರಲ್ಲಿ ವಿಳಂಬ
ಕಲ್ಯಾಣ ಕರ್ನಾಟಕ
ಬೀದರ್‌, ರಾಯಚೂರು, ಕೊಪ್ಪಳ, ಕಲಬುರಗಿ, ಬಳ್ಳಾರಿ-ವಿಜಯನಗರ
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೀದರ್‌ ಜಿಲ್ಲೆಯಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿತ್ತು. ಆದರೆ ಸಾವು ಮಾತ್ರ ಕಡಿಮೆ ಇದೆ. ಇಲ್ಲಿ ಕೇವಲ 82 ಜಾನುವಾರುಗಳು ಸಾವನ್ನಪ್ಪಿವೆ. ಆದರೆ ಇವುಗಳಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ವರೆಗೆ 92 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ರಾಯಚೂರಿನಲ್ಲಿ 4 ಸಾವಿರಕ್ಕೂ ಹೆಚ್ಚು ಸೋಂಕು ಕಂಡು ಬಂದಿದ್ದು, 272 ರಾಸುಗಳು ಸಾವನ್ನಪ್ಪಿವೆ. 1.70 ಲಕ್ಷ ಲಸಿಕೆ ಹಾಕಲಾಗಿದೆ. ಕೊಪ್ಪಳದಲ್ಲಿ 22 ಸಾವಿರ ರಾಸುಗಳಿಗೆ ಸೋಂಕು ತಗುಲಿದ್ದು, 733 ರಾಸುಗಳು ಸಾವನ್ನಪ್ಪಿವೆ. ಕಲಬುರಗಿಯಲ್ಲಿ 3,677 ರಾಸುಗಳಿಗೆ ಸೋಂಕು ತಗುಲಿದ್ದು 199 ಸಾವನ್ನಪ್ಪಿವೆ. 1.70 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿದೆ.

ಬಳ್ಳಾರಿ-­ ವಿಜಯನಗರದಲ್ಲಿ 22 ಸಾವಿರ ರಾಸುಗಳಿಗೆ ಸೋಂಕು ತಗುಲಿದ್ದು, 2,878 ರಾಸುಗಳು ಸಾವನ್ನಪ್ಪಿವೆ. ಇಲ್ಲಿ 3.25 ಲಕ್ಷ ರಾಸುಗಳಿಗೆ ಲಸಿಕೆ ಹಾಕಿಸಲಾಗಿದೆ. ಕೆಲವು ಕಡೆಗಳಲ್ಲಿ ಸಿಬಂದಿ ಕೊರತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next