Advertisement

ಬರವಣಿಗೆಯಲ್ಲಿ ಗೆದ್ದರೆ ಬಾಳು ಬೆಳಗುತ್ತೆ!

03:50 AM Feb 28, 2017 | Harsha Rao |

ಬರವಣಿಗೆ ಒಂದು ಕಲೆ. ದೊಡ್ಡ ದೊಡ್ಡ ಕಾದಂಬರಿ, ಕತೆ, ಸಣ್ಣ ಕಥೆಗಳು, ಪತ್ರಿಕೆಯಲ್ಲಿನ ಲೇಖನ, ದಿನಚರಿ ಬರೆಯುವಿಕೆ ಹಾಗೂ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿನ ಬೆಳವಣಿಗೆಯಿಂದ ಹೆಚ್ಚು ಜನಪ್ರಿಯವಾಗಿರುವ ಬ್ಲಾಗಿಂಗ್‌ (Blogging), ವೆಬ್‌ ಲೇಖನ (Web Articles) ಇತ್ಯಾದಿಗಳ ಶೈಲಿ ಬೇರೆಬೇರೆಯಾಗಿರುತ್ತದೆ. ಕೆಲವರು ಹವ್ಯಾಸಕ್ಕೆಂದು ಬರೆದರೆ ಇನ್ನು ಕೆಲವರು ಬರವಣಿಗೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿರುತ್ತಾರೆ. 

Advertisement

ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಬರವಣಿಗೆಯು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಬರವಣಿಗೆಯು ಕಲಿಕೆಯ ಮುಖ್ಯವಾದ ಭಾಗ. ಓದುವುದರ ಜೊತೆಜೊತೆಗೆ ಜಾnನಾಭಿವೃದ್ಧಿಗೆ ಬರವಣಿಗೆ ಬಹಳ ಮಹತ್ವವನ್ನು ಪಡೆಯುತ್ತದೆ. ಕೇವಲ ಓದುವುದರಿಂದ ಜಾnನ ಹೆಚ್ಚಾಗುವುದಿಲ್ಲ. ಬದಲಿಗೆ, ಓದಿದ್ದನ್ನು ನಮ್ಮ ಸ್ವಂತ ಪದಗಳಲ್ಲಿ ಅಭಿವ್ಯಕ್ತಗೊಳಿಸುವುದರಿಂದ ಮಾತ್ರ ಆಳವಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಶಾಲಾ ಮತ್ತು ಕಾಲೇಜು ದಿನಗಳಲ್ಲಿ ನಾವು ಕಿರುಪರೀಕ್ಷೆಗಳಿಂದ ಹಿಡಿದು ವಾರ್ಷಿಕ ಪರೀಕ್ಷೆಗಳವರೆಗೂ ಹಲವಾರು ಪರೀಕ್ಷೆಗಳನ್ನು ಎದುರಿಸಿರುತ್ತೇವೆ. ಈ ಪರೀಕ್ಷೆಗಳಲ್ಲಿ ಒಂದರೆಡು ವಾಕ್ಯಗಳಿಂದ ಹಿಡಿದು ಪ್ರಬಂಧ ಮಾದರಿಯ ವಿಸ್ತೃತ ಉತ್ತರಗಳನ್ನು ಬರೆಯಲು ಕೇಳುವುದು ಸರ್ವೇ ಸಾಮಾನ್ಯ. ಇದಕ್ಕಾಗಿ ಪರೀಕ್ಷೆಗೂ ಮುಂಚಿತವಾಗಿಯೇ ಸಾಕಷ್ಟು ಬರವಣಿಗೆಯ ಅಭ್ಯಾಸ ಮಾಡಿಕೊಳ್ಳುವುದು ಅನಿವಾರ್ಯ. ಆದರೆ ಶಾಲಾ- ಕಾಲೇಜುಗಳಲ್ಲಿ ಬರೆಯುವ ಉತ್ತರಗಳಿಗೂ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರೆಯುವ ಉತ್ತರಗಳಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಷಯ ಒಂದೇ ಆಗಿದ್ದರೂ ಸಹ ಬರವಣಿಗೆಯ ಶೈಲಿ ಭಿನ್ನವಾಗಿರುತ್ತದೆ. 

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರವಣಿಗೆ ಕೌಶಲ
ಕೇಂದ್ರ ಹಾಗು ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ನಾಗರಿಕ ಸೇವಾ ಪರೀಕ್ಷೆ, ಗೆಜೆಟೆಡ್‌ ಪೊ›ಬೇಷನರಿ ಪರೀಕ್ಷೆ, ಫಾರೆಸ್ಟ್‌ ಸರ್ವೀಸ್‌ ಇತ್ಯಾದಿ ಪರೀಕ್ಷೆಗಳ ಮುಖ್ಯ ಪತ್ರಿಕೆಗಳಲ್ಲಿ ವಿಸ್ತೃತ ರೂಪದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಈ ಪರೀಕ್ಷೆಗಳಲ್ಲಿ ಪ್ರಶ್ನೆಗಳಿಗೆ ಉತ್ತರಗಳನ್ನು 50 ಪದಗಳಿಂದ ಹಿಡಿದು 250 ಪದಗಳಿಗೆ ಮೀರದಂತೆ ಬರೆಯಲು ಕೇಳಲಾಗುತ್ತದೆ. ಪ್ರಬಂಧ ಪತ್ರಿಕೆಯನ್ನು ಸುಮಾರು 2500- 3000 ಪದಗಳಿಗೆ ಮೀರದಂತೆ ಬರೆಯಲು ಕೇಳುವುದು ಸಹಜ. ಬರವಣಿಗೆ ಕೌಶಲ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಸಫ‌ಲತೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಅಭ್ಯರ್ಥಿಗಳು ಇದರ ಬಗ್ಗೆ ವಿಶೇಷ ಗಮನವನ್ನು ನೀಡುವುದು ಒಳಿತು. 

ಎಷ್ಟೋ ಬಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳು, ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಆದರೆ ಅಂಕಗಳೇ ಸಿಕ್ಕಿಲ್ಲ ಅಥವಾ ನಾನು ಬಹಳ ಕಷ್ಟಪಟ್ಟು ಬರೆದಿದ್ದೆ. ಕೇಳಿದ್ದಕ್ಕಿಂತ ಹೆಚ್ಚಾಗಿಯೇ ಉತ್ತರಗಳನ್ನು ಬರೆದಿದ್ದೆ. ಆದರೂ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಪರೀûಾ ವ್ಯವಸ್ಥೆಯೇ ಸರಿಯಿಲ್ಲವೆಂದು ಕೊರಗುವುದನ್ನು ನಾವು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ, ಅಭ್ಯರ್ಥಿಗಳು ಬೇರೆಯವರನ್ನು ಅಥವಾ ಪರೀûಾ ವ್ಯವಸ್ಥೆಯನ್ನು ದೂಷಿಸುವುದಕ್ಕೂ ಮುಂಚಿತವಾಗಿ, ತಮಗೆ ತಾವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಜವಾಗಿಯೂ ತಾನು ಪ್ರಶ್ನೆಯ ನಿರೀಕ್ಷೆಯಂತೆ ಉತ್ತರಗಳನ್ನು ಬರೆದಿದ್ದೇನೆಯೇ, ಇಲ್ಲವೆ? ಎಂಬುದನ್ನು ಕಂಡುಕೊಂಡು, ಮುಂದಿನ ಪರೀಕ್ಷೆಯಲ್ಲಿ ತಪ್ಪುಗಳು ಮರುಕಳಿಸದಂತೆ, ಯೋಚನೆ ಮಾಡಿ ಉತ್ತರಗಳನ್ನು ಬರೆಯಬೇಕು. 

Advertisement

ಕೀ- ಪದಗಳ (Key-Words) ಮೇಲೆ ಗಮನರಲಿ
ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳುವ ವಿಸ್ತೃತ ಮಾದರಿಯ ಪ್ರಶ್ನೆಗಳು ಒಂದು ನಿರ್ದಿಷ್ಟವಾದ ಕೀ- ಪದವನ್ನು ಹೊಂದಿರುತ್ತದೆ. ಅಭ್ಯರ್ಥಿಗಳು ಈ ಕೀ- ಪದಗಳನ್ನು ಗಮನಿಸಿ ನಂತರ ಉತ್ತರಗಳನ್ನು ಬರೆಯಬೇಕು. ಉದಾಹರಣೆಗೆ: ವಿಮರ್ಶಿಸಿ, ಟಿಪ್ಪಣಿ ಬರೆಯಿರಿ, ವಿಶ್ಲೇಷಿಸಿ, ಚರ್ಚಿಸಿ, ವಿಮಶಾìತ್ಮಕವಾಗಿ ವಿಶ್ಲೇಷಿಸಿ ಇತ್ಯಾದಿ. ಈ ಕೀ- ಪದಗಳು ಬಹಳ ಮುಖ್ಯವಾದವುಗಳು. ಇವುಗಳ ಅರ್ಥವನ್ನು ಅಭ್ಯರ್ಥಿಗಳು ಚೆನ್ನಾಗಿ ತಿಳಿದುಕೊಂಡಿರಬೇಕು. ಏಕೆಂದರೆ, ಪ್ರತಿಯೊಂದು ಕೀ- ಪದವು ಕೂಡ ಒಂದು ನಿರ್ದಿಷ್ಟವಾದ ಉತ್ತರವನ್ನು ಅಪೇಕ್ಷಿಸುತ್ತದೆ. 

ಕೆಳಗಿನ ಪ್ರಶ್ನೆಯನ್ನು ಗಮನಿಸಿ
 ಜಾಗತೀಕರಣದಿಂದ ಭಾರತದ ಕೃಷಿ ಚಟುವಟಿಕೆಯಲ್ಲಿನ ಆದಾಯವು ಕಳೆದ ದಶಕದಲ್ಲಿ ಗಣನೀಯವಾಗಿ ಕುಂಠಿತವಾಗಿದೆ. ವಿಮಶಾìತ್ಮಕವಾಗಿ ವಿಶ್ಲೇಷಿಸಿ. 

ಈ ಮೇಲಿನ ಪ್ರಶ್ನೆಯನ್ನು ಉತ್ತರಿಸುವಾಗ, ಅಭ್ಯರ್ಥಿಗಳು, ಕಳೆದ ದಶಕದಲ್ಲಿ ಜಾಗತೀಕರಣದ ಪ್ರಭಾವದಿಂದ ಕೃಷಿ ಆದಾಯ ಕುಂಠಿತವಾಗಿದೆಯೇ ಎಂಬುದನ್ನು ಅಂಕಿ- ಅಂಶಗಳೊಂದಿಗೆ ವಿಶ್ಲೇಷಿಸಬೇಕು. ಅದರ ಬದಲಾಗಿ ಕೇವಲ ಜಾಗತೀಕರಣದ ಬಗೆಗೆ ಅಥವಾ ಭಾರತದ ಕೃಷಿ ಚಟುವಟಿಕೆಯಲ್ಲಿನ ಏರಿಳಿತಗಳ ಬಗೆಗೆ ವಿವರಿಸಿದರೆ ಸಾಲದು. 

ಉತ್ತಮ ಬರವಣಿಗೆ ಶೈಲಿಗಾಗಿ ಮುಖ್ಯವಾಗಿ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದು, ಪ್ರಶ್ನೆಯನ್ನು ಸರಿಯಾಗಿ ಓದಿಕೊಂಡು ಅರ್ಥ ಮಾಡಿಕೊಳ್ಳುವುದು ಹಾಗು ಎರಡನೆಯದು, ಕೇಳಿರುವ ಪದಗಳ ಮಿತಿಯನ್ನು ಮೀರದಂತೆ, ಕೀ- ಪದಗಳನ್ನು ಆಧಾರವಾಗಿಟ್ಟುಕೊಂಡು ಉತ್ತರಗಳನ್ನು ಬರೆಯುವುದು. ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಉತ್ತರಗಳನ್ನು ಬರೆದರೆ ಪ್ರಯೋಜನವಿಲ್ಲ. 

ಸತತ ಅಭ್ಯಾಸದಿಂದ ಮಾತ್ರ ಬರವಣಿಗೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯ. ಸ್ಪರ್ಧೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸತತ ಪ್ರರಿಶ್ರಮ ಹಾಗೂ ಪ್ರಯತ್ನದಿಂದ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ. 

– ಪ್ರಶಾಂತ್‌. ಎಸ್‌. ಚಿನ್ನಪ್ಪನವರ್‌

Advertisement

Udayavani is now on Telegram. Click here to join our channel and stay updated with the latest news.

Next