Advertisement
ಇಲ್ಲಿ ತೃತೀಯ ಸ್ಥಾನಿಯಾಗಿ ಲೀಗ್ ವ್ಯವಹಾರ ಮುಗಿಸಿದ ಲಕ್ನೋ ಸೂಪರ್‌ಜೈಂಟ್ಸ್ ತಂಡ ಆರ್‌ಸಿಬಿಗೆ ಎದುರಾಗಲಿದೆ. ಗೆದ್ದ ತಂಡ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಆಡಲಿದೆ. ಸೋತ ತಂಡ ಕೂಟದಿಂದ ನಿರ್ಗಮಿಸಲಿದೆ.
Related Articles
Advertisement
ಬ್ಯಾಟಿಂಗ್ ವಿಭಾಗ ಬಲಿಷ್ಠ: ಕೊನೆಯ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕವೊಂದನ್ನು ಬಾರಿಸಿ ಫಾರ್ಮ್ ಗೆ ಮರಳಿದ್ದು ಆರ್‌ಸಿಬಿ ಪಾಲಿಗೊಂದು ಪ್ಲಸ್ ಪಾಯಿಂಟ್. ಆರಂಭಿಕನಾಗಿ ಇಳಿದ ಕೊಹ್ಲಿ, ನಾಯಕ ಫಾ ಡು ಪ್ಲೆಸಿಸ್ ಜತೆಗೂಡಿ 115 ರನ್ ಜತೆಯಾಟ ನಿಭಾಯಿಸುವ ಮೂಲಕ ಭದ್ರ ಬುನಾದಿ ನಿರ್ಮಿಸಿದ್ದರು. ಡು ಪ್ಲೆಸಿಸ್ ಫಾರ್ಮ್ ಬಗ್ಗೆ ಆತಂಕವೇನೂ ಇಲ್ಲ. ಒಮ್ಮೆ ಕ್ರೀಸ್ ಆಕ್ರಮಿಸಿಕೊಂಡರೆ ಅವರನ್ನು ಉರುಳಿಸುವುದು ಬಹಳ ಕಷ್ಟ. ಅಂದಹಾಗೆ ಡು ಪ್ಲೆಸಿಸ್ 3 ಬಾರಿಯ ಐಪಿಎಲ್ ವಿಜೇತ ತಂಡದ ಸದಸ್ಯನೆಂಬುದನ್ನು ಮರೆಯುವಂತಿಲ್ಲ.
ಗ್ಲೆನ್ ಮ್ಯಾಕ್ಸ್‌ವೆಲ್ ಆಲ್‌ರೌಂಡ್ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. ದಿನೇಶ್ ಕಾರ್ತಿಕ್ ಪಾಲಿಗೆ ಇದೊಂದು ಸ್ಮರಣೀಯ ಟೂರ್ನಿ. ಅವರ “ಫಿನಿಶಿಂಗ್ ಪವರ್’ ಮರಳಿ ಟೀಮ್ ಇಂಡಿಯಾಕ್ಕೆ ಕರೆತರುವಂತೆ ಮಾಡಿದೆ. ಪ್ಲೇ ಆಫ್ನಲ್ಲೂ ಇದೇ ಜೋಶ್ ತೋರಬೇಕಿದೆ.
ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟೀದಾರ್, ಮಹಿಪಾಲ್ ಲೊನ್ರೋರ್ ಇದ್ದಾರೆ. ಸೀನಿಯರ್ ಆಟಗಾರರು ಸುತ್ತುವರಿದಿರುವುದರಿಂದ ಇವರು ಧೈರ್ಯದಿಂದ ಬ್ಯಾಟ್ ಬೀಸಬಹುದು.
ಬೌಲಿಂಗ್ ವಿಭಾಗದಲ್ಲೂ ಆರ್‌ಸಿಬಿ ಯಾವುದೇ ಕೊರತೆ ಹೊಂದಿಲ್ಲ. ತ್ರಿವಳಿ “ಎಚ್’ಗಳಾದ ಹ್ಯಾಝಲ್‌ವುಡ್, ಹಸರಂಗ, ಹರ್ಷಲ್ ಪಟೇಲ್ ದಾಳಿ ವಿಭಾಗದ ಪ್ರಮುಖರು. ಜತೆಗೆ ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್ ಕೂಡ ಅಪಾಯಕಾರಿಯಾಗಬಲ್ಲರು. ಆದರೆ ಸಿರಾಜ್ ಸಂಪೂರ್ಣ ವಿಫಲರಾಗಿದ್ದಾರೆ. ಇವರ ಬದಲಿಗೆ ಬಂದ ಸಿದ್ಧಾರ್ಥ್ ಕೌಲ್ ಕೂಡ ದುಬಾರಿಯಾಗಿದ್ದಾರೆ.
ಫಸ್ಟ್ ಬ್ಯಾಟಿಂಗ್ ಸಾಮರ್ಥ್ಯ: ಲಕ್ನೋ ಸೂಪರ್ ಜೈಂಟ್ಸ್‌ನ ಸಾಮರ್ಥ್ಯ ಅಡಗಿರುವುದೇ ಫಸ್ಟ್ ಬ್ಯಾಟಿಂಗ್‌ನಲ್ಲಿ. ಆಗ 200 ರನ್ ಕೂಡ ಬಾರಿಸಲಬಲ್ಲದು. ಆದರೆ ಚೇಸಿಂಗ್‌ನಲ್ಲಿ ಸಣ್ಣ ಸವಾಲು ಲಭಿಸಿದರೂ ತಬ್ಬಿಬ್ಟಾಗುತ್ತದೆ!
ನಾಯಕ ಕೆ.ಎಲ್. ರಾಹುಲ್ ಫಾರ್ಮ್ ಓಕೆ. ಸೊನ್ನೆಯನ್ನೂ ಸುತ್ತಿದ್ದಾರೆ, ಗೋಲ್ಡನ್ ಡಕ್ ಸಂಕಟಕ್ಕೂ ಸಿಲುಕಿದ್ದಾರೆ, ಸೆಂಚುರಿಯನ್ನೂ ಬಾರಿಸಿದ್ದಾರೆ. ಈಗ ಭಾರತೀಯ ಟಿ20 ತಂಡದ ನಾಯಕತ್ವ ಲಭಿಸಿದ ಖುಷಿಯೂ ಇದೆ. ಎಲಿಮಿನೇಟರ್‌ನಂಥ ಸವಾಲಿನ ಪಂದ್ಯವನ್ನು ಅವರು ಹೇಗೆ ನಿಭಾಯಿಸಬಲ್ಲರು ಎಂಬ ಕುತೂಹಲ ಎಲ್ಲರದ್ದು.
ರಾಹುಲ್-ಡಿ ಕಾಕ್ ಈ ಕೂಟದ ಅತ್ಯಂತ ಯಶಸ್ವಿ ಓಪನಿಂಗ್ ಜೋಡಿ. ಇಬ್ಬರೂ ಸೇರಿ 1,039 ರನ್ ರಾಶಿ ಹಾಕಿದ್ದಾರೆ. ಕೆಕೆಆರ್ ವಿರುದ್ಧ ನೋಲಾಸ್ 210 ಬಾರಿಸುವ ಮೂಲಕ ಐಪಿಎಲ್ ದಾಖಲೆ ಸ್ಥಾಪಿಸಿದ ಹಿರಿಮೆ ಇವರದು. ದೀಪಕ್ ಹೂಡಾ ಮತ್ತೋರ್ವ ಸ್ಟಾರ್ ಬ್ಯಾಟರ್. ಈ ಮೂವರನ್ನು ಹೊರತುಪಡಿಸಿದರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಿಲ್ಲ. ಮಾರ್ಕಸ್ ಸ್ಟೋಯಿನಿಸ್, ಕೃಣಾಲ್ ಪಾಂಡ್ಯ, ಆಯುಷ್ ಬದೋನಿ, ಜೇಸನ್ ಹೋಲ್ಡರ್ ತಮ್ಮ ಸಾಮರ್ಥ್ಯದ ಮಟ್ಟಕ್ಕಿಂತ ಎಷ್ಟೋ ಕೆಳಗಿದ್ದಾರೆ.
ಡು ಪ್ಲೆಸಿಸ್, ಹ್ಯಾಝಲ್‌ವುಡ್ ಸಾಹಸಆರ್ಸಿಬಿ-ಲಕ್ನೋ ನಡುವಿನ ಮೊದಲ ಸುತ್ತಿನ ಪಂದ್ಯ ಅನೇಕ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಮೊದಲ ಓವರ್‌ನಲ್ಲೇ ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಉದುರಿಸಿಕೊಂಡು ಸಂಕಟಕ್ಕೆ ಸಿಲುಕಿತ್ತು. ಬೌಲರ್ ದುಷ್ಮಂತ ಚಮೀರ. ಇಲ್ಲಿ ಕೊಹ್ಲಿ ಅವರದು ಗೋಲ್ಡನ್ ಡಕ್ ಸಂಕಟ. ಆದರೆ ಈ ಶೋಚನೀಯ ಸ್ಥಿತಿಯಿಂದ ಪಾರಾದ ಆರ್‌ಸಿಬಿ 6 ವಿಕೆಟಿಗೆ 181 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡ ಫಾ ಡು ಪ್ಲೆಸಿಸ್ 96 ರನ್ ಬಾರಿಸಿ ಕಪ್ತಾನನ ಆಟದ ಮೂಲಕ ತಂಡವನ್ನು ಆಧರಿಸಿ ನಿಂತರು. ಚಮೀರ ಮ್ಯಾಜಿಕ್ ಮತ್ತೆ ನಡೆಯಲಿಲ್ಲ. ಚೇಸಿಂಗ್ ವೇಳೆ ಲಕ್ನೋ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿತು. ಜೋಶ್ ಹ್ಯಾಝಲ್‌ವುಡ್ ಘಾತಕ ದಾಳಿ ಸಂಘಟಿಸಿದ್ದರು. ನಾಯಕ ಕೆ.ಎಲ್. ರಾಹುಲ್ (30), ಕೃಣಾಲ್ ಪಾಂಡ್ಯ (42) ಅವರ ಹೋರಾಟ ಸಾಲಲಿಲ್ಲ. ಲಕ್ನೋ 8 ವಿಕೆಟಿಗೆ 163 ರನ್ ಬಾರಿಸಿ ಶರಣಾಯಿತು. ಹ್ಯಾಝಲ್‌ವುಡ್ 25 ರನ್ನಿಗೆ 4 ವಿಕೆಟ್ ಉಡಾಯಿಸಿ ಆರ್‌ಸಿಬಿಗೆ ಮೇಲುಗೈ ಒದಗಿಸಿದರು.