ಮೊಹಾಲಿ: ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನವೊಂದಕ್ಕೆ ಸಾಕ್ಷಿಯಾದ ಲಕ್ನೋ ಸೂಪರ್ ಜೈಂಟ್ಸ್ ಆತಿಥೇಯ ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟಿಗೆ 257 ರನ್ ಪೇರಿಸಿ ಮೊಹಾಲಿ ಮೈದಾನದಲ್ಲಿ ಮೆರೆದಾಡಿದೆ.
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 250 ರನ್ ಗಡಿ ದಾಟಿದ 2ನೇ ತಂಡವೆಂಬ ಹೆಗ್ಗಳಿಕೆ ಲಕ್ನೋ ತಂಡದ್ದಾಯಿತು. ಪುಣೆ ವಾರಿಯರ್ ಎದುರಿನ 2013ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡ 5 ವಿಕೆಟಿಗೆ 263 ರನ್ ಪೇರಿಸಿದ್ದು ದಾಖಲೆ.
ಕಲ್ ಮೇಯರ್, ಮಾರ್ಕಸ್ ಸ್ಟೋಯಿನಿಸ್, ಆಯುಷ್ ಬದೋನಿ, ನಿಕೋಲಸ್ ಪೂರಣ್ ಅವರೆಲ್ಲ ಸೇರಿಕೊಂಡು ಮೊಹಾಲಿ ಅಂಗಳದಲ್ಲೇ ಪಂಜಾಬ್ ದಾಳಿಯನ್ನು ಧೂಳೀಪಟಗೈದರು. ಸ್ಟೋಯಿನಿಸ್ ಸರ್ವಾಧಿಕ 72, ಮೇಯರ್ 54, ಪೂರಣ್ 45 ಮತ್ತು ಬದೋನಿ 43 ರನ್ ರನ್ ಮಾಡಿದರು. ಲಕ್ನೋ ಸರದಿಯಲ್ಲಿ ಒಟ್ಟು 27 ಬೌಂಡರಿ, 14 ಸಿಕ್ಸರ್ ಸಿಡಿಯಲ್ಪಟ್ಟಿತು. ರಾಹುಲ್ ಚಹರ್ ಹೊರತುಪಡಿಸಿ ಪಂಜಾಬ್‌ನ ಉಳಿದ ಯಾವುದೇ ಬೌಲರ್‌ಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.
ಪಂಜಾಬ್ ವಿರುದ್ಧ ಮೊದಲ ಸುತ್ತಿನ ಪಂದ್ಯವನ್ನು 2 ವಿಕೆಟ್‌ಗಳಿಂದ ಕಳೆದುಕೊಂಡಿದ್ದ ಲಕ್ನೋ ಇಲ್ಲಿ ಭರ್ಜರಿ ಬ್ಯಾಟಿಂಗ್‌ಗೆ ಮುಂದಾಯಿತು. ಪವರ್ ಪ್ಲೇಯಲ್ಲಿ 2 ವಿಕೆಟಿಗೆ 74 ರನ್ ಪೇರಿಸಿದ ಲಕ್ನೋ, 8ನೇ ಓವರ್‌ನಲ್ಲೇ ನೂರರ ಗಡಿ ಮುಟ್ಟಿತು. 8ನೇ ಓವರ್ ಎಸೆಯಲು ಬಂದ ಗೂರ್ನೂರ್ ಬ್ರಾರ್ 24 ರನ್ ನೀಡಿ ದಂಡಿಸಿಕೊಂಡರು. 10 ಓವರ್ ಮುಕ್ತಾಯವಾದಾಗ ಲಕ್ನೋ ಸ್ಕೋರ್ 128ಕ್ಕೆ ಏರಿತ್ತು. ಆಗಲೇ ಬೃಹತ್ ಮೊತ್ತದ ಸೂಚನೆ ಲಭಿಸಿತ್ತು. ಉಳಿದ 10 ಓವರ್‌ಗಳಲ್ಲಿ ಲಕ್ನೋ ಮತ್ತೆ 129 ರನ್ ಪೇರಿಸಿತು. 15.5 ಓವರ್‌ಗಳಲ್ಲಿ 200 ರನ್ ಹರಿದು ಬಂತು.
ನಾಯಕ ಕೆ.ಎಲ್. ರಾಹುಲ್ (12) ಅವರನ್ನು ಬೇಗನೇ ಕಳೆದುಕೊಂಡಿತಾದರೂ ಕೈಲ್ ಮೇಯರ್ ಸಿಡಿದು ನಿಂತರು. ಪವರ್ ಪ್ಲೇಯಲ್ಲೇ ಅವರ ಅರ್ಧ ಶತಕ ಪೂರ್ತಿ ಗೊಂಡದ್ದು ವಿಶೇಷ. ಮೇಯರ್ 54 ರನ್‌ಗೆ ಎದುರಿಸಿದ್ದು ಕೇವಲ 24 ಎಸೆತ. ಸಿಡಿಸಿದ್ದು 7 ಬೌಂಡರಿ, 4 ಸಿಕ್ಸರ್.
ಬದೋನಿ 43 ರನ್‌ಗಾಗಿ 24 ಎಸೆತ ಎದುರಿಸಿದರು. ಇದು 3 ಬೌಂಡರಿ, 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಸ್ಟೋಯಿನಿಸ್ ಅವರದು ಸರ್ವಾಧಿಕ 72 ರನ್ ಕೊಡುಗೆ. ಎದುರಿಸಿದ್ದು 40 ಎಸೆತ. ಅವರು 6 ಫೋರ್, 5 ಸಿಕ್ಸರ್ ಬಾರಿಸಿದರು. ಹ್ಯಾಟ್ರಿಕ್ ಬೌಂಡರಿಯೊಂದಿಗೆ ಬ್ಯಾಟಿಂಗ್‌ಗೆ ಮುಹೂರ್ತವಿರಿಸಿದ ಪೂರಣ್ 19 ಎಸೆತಗಳಿಂದ 45 ರನ್ ಚಚ್ಚಿದರು (7 ಬೌಂಡರಿ, 1 ಸಿಕ್ಸರ್). ಡೆತ್ ಓವರ್‌ಗಳಲ್ಲಿ ಲಕ್ನೋ 73 ರನ್ ರಾಶಿ ಹಾಕಿತು.