ಲಕ್ನೋ : ಉತ್ತರ ಪ್ರದೇಶ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಅವರ ಆದೇಶಕ್ಕೆ ಅನುಗುಣವಾಗಿ ಕಾರು ನಿಲ್ಲಸದೆ ಪೊಲೀಸರು ಮೋಟಾರು ಸೈಕಲ್ ಮೇಲೆ ಮೂರು ಬಾರಿ ಕಾರು ಹರಿಸಲು ಯತ್ನಿಸಿ ಅಂತಿಮವಾಗಿ ಪೊಲೀಸರ ಗುಂಡಿಗೆ ಬಲಿಯಾದ ಆ್ಯಪಲ್ ಸೇಲ್ಸ್ ಮ್ಯಾನೇಜರ್ ವಿವೇಕ್ ತಿವಾರಿ ಪ್ರಕರಣದಲ್ಲಿ ”ಪೊಲೀಸರಿಂದ ಯಾವುದೇ ತಪ್ಪಾಗಿಲ್ಲ; ಪೊಲೀಸರು ಕೇವಲ ಕ್ರಿಮಿನಲ್‌ಗಳ ಮೇಲೆ ಮಾತ್ರವೇ ಗುಂಡೆಸೆಯುತ್ತಾರೆ” ಎಂದು ಉತ್ತರ ಪ್ರದೇಶದ ನೀರಾವರಿ ಸಚಿವ ಧರ್ಮಪಾಲ್ ಸಿಂಗ್ ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
”ಪೊಲೀಸ್ ಎನ್‌ಕೌಂಟರ್‌ನಲ್ಲಿ ಯಾವುದೇ ತಪ್ಪಿಲ್ಲ; ಪೊಲೀಸರು ಕೇವಲ ಕ್ರಿಮಿನಲ್‌ಗಳ ಮೇಲೆ ಮಾತ್ರವೇ ಗುಂಡೆಸೆಯುತ್ತಾರೆ. ತಪ್ಪು ಯಾರೇ ಎಸಗಿದರೂ ಅವರಿಗೆ ಶಿಕ್ಷೆ ಆಗಿಯೇ ಆಗುತ್ತದೆ” ಎಂದು ಸಚಿವ ಧರ್ಮಪಾಲ್ ಸಿಂಗ್ ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.
ನಿನ್ನೆ ಶುಕ್ರವಾರ ಆ್ಯಪಲ್ ಸೇಲ್ಸ್ ಮ್ಯಾನೇಜರ್ ತಿವಾರಿ ಅವರು ಮಹಿಳೆಯೊಂದಿಗೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಆಗ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಆ ಮಹಿಳೆಯು “ಸತ್ಯ ಹೇಳುವಲ್ಲಿ ನನ್ನ ಮೇಲೆ ಯಾವುದೇ ಒತ್ತಡ ಇಲ್ಲ; ತಪ್ಪೆಸಗಿದ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು’ ಎಂದು ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.
ಉತ್ತರ ಪ್ರದೇಶ ಪೊಲೀಸರು ಘಟನೆಯ ಬಗ್ಗೆ ವಿಶೇಷ ತನಿಖಾ ತಂಡವನ್ನು ರೂಪಿಸಿದ್ದಾರೆ. ಪೊಲೀಸ್ ಸುಪರಿಂಟೆಂಡೆಂಟ್ ಓರ್ವರು ಈ ತಂಡದ ನೇತೃತ್ವ ವಹಿಸಿದ್ದಾರೆ.
ತಿವಾರಿಗೆ ಗುಂಡೆಸೆದ ಪೊಲೀಸ್ ಸಿಬಂದಿ, “ನನ್ನದೇನೂ ತಪ್ಪಿಲ್ಲ, ನಾನು ಆತ್ಮ ರಕ್ಷಣೆಗಾಗಿ ಗುಂಡೆಸೆದೆ, ಏಕೆಂದರೆ ಆತ ಮೂರು ತನ್ನ ಕಾರನ್ನು ನಮ್ಮ ಮೋಟಾರು ಸೈಕಲ್ ಮೇಲೆ ಹರಿಸಿ ನಮ್ಮನ್ನು ಸಾಯಿಸಲು ಯತ್ನಿಸಿದ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ತನ್ನ ಪತಿ, ಆ್ಯಪಲ್ ಸೇಲ್ಸ್ ಮ್ಯಾನೇಜರ್, ವಿವೇಕ್ ತಿವಾರಿ ಅವರನ್ನು ಕೊಂದ ತಾಸುಗಳ ಬಳಿಕ ಪತ್ನಿ ಕಲ್ಪನಾ ತಿವಾರಿ ಅವರು ತನಗೆ ಮತ್ತು ತನ್ನ ಕುಟುಂಬಕ್ಕೆ ನ್ಯಾಯ ನೀಡಲು ಈ ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಯಬೇಕು, ತನಗೆ 1 ಕೋಟಿ ರೂ. ಪರಿಹಾರ ನೀಡಬೇಕು ಮತ್ತು ತನಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಕೊಡಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.