Advertisement

ಮಾಲೇಗಾಂವ್‌ ಸ್ಫೋಟ ಪ್ರಕರಣ: ಪುರೋಹಿತ್‌ಗೆ ಸು.ಕೋ. ಜಾಮೀನು

08:35 AM Aug 22, 2017 | Karthik A |

ಹೊಸದಿಲ್ಲಿ: ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ 2008ರ ಮಾಲೇಗಾಂವ್‌ ಸರಣಿ ಸ್ಫೋಟದ ಆರೋಪಿ, ಸೇನಾಧಿಕಾರಿ ಲೆ| ಕ| ಶ್ರೀಕಾಂತ್‌ ಪ್ರಸಾದ್‌ ಪುರೋಹಿತ್‌ಗೆ ಸೋಮವಾರ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಕಳೆದ 9 ವರ್ಷಗಳಿಂದ ಪುರೋಹಿತ್‌ ಜೈಲಿನಲ್ಲಿದ್ದರು. ಕಳೆದ ವರ್ಷ ಪುರೋಹಿತ್‌ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾ| ಆರ್‌.ಕೆ. ಅಗರ್‌ವಾಲ್‌ ಮತ್ತು ನ್ಯಾ| ಎ.ಎಂ. ಸಪ್ರ ಅವರಿದ್ದ ನ್ಯಾಯಪೀಠ, ಮುಂಬಯಿ ಹೈಕೋರ್ಟ್‌ ತೀರ್ಪನ್ನು ವಜಾಗೊಳಿಸಿ ಪುರೋಹಿತ್‌ಗೆ ಷರತ್ತುಬದ್ಧ ಜಾಮೀನು ನೀಡಿತು.

Advertisement

ವಿಚಾರಣೆಯಲ್ಲಿ ಪುರೋಹಿತ್‌ ಪರ ಹಾಜರಾದ ಹಿರಿಯ ವಕೀಲ ಹರೀಶ್‌ ಸಾಳ್ವೆ, ಕಳೆದ 9 ವರ್ಷಗಳಿಂದ ಪುರೋಹಿತ್‌ ಜೈಲಿನಲ್ಲಿದ್ದು, ಅವರ ವಿರುದ್ಧ ಇನ್ನೂ ಆರೋಪ ನಿಗದಿಪಡಿಸಲಾಗಿಲ್ಲ. ಅಲ್ಲದೆ, ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯನ್ವಯ (ಮಕೋಕಾ) ಪುರೋಹಿತ್‌ ವಿರುದ್ಧ ಆರೋಪ ಹೊರಿಸಲಾಗಿದೆ. ಇದನ್ನು ರದ್ದುಗೊಳಿಸುವ ಮೂಲಕ ಅವರ ಜಾಮೀನಿಗೆ ಅವಕಾಶ ಕಲ್ಪಿಸುವಂತೆ ಕೋರಿದ್ದರು.

ಬಾಂಬೆ ಹೈಕೋರ್ಟ್‌ನಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ಮಾಲೇಗಾಂವ್‌ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪುರೋಹಿತ್‌ ಸ್ಫೋಟದ ಸಂಚಿನಲ್ಲಿ ಭಾಗಿಯಾದ ಬಗ್ಗೆ ಪ್ರಬಲ ಸಾಕ್ಷ್ಯಾಧಾರಗಳಿವೆ ಎಂದು ವಾದಿಸಿತ್ತು. ಹೀಗಾಗಿ, ಬಾಂಬೆ ಹೈಕೋರ್ಟ್‌ ಪುರೋಹಿತ್‌ಗೆ ಜಾಮೀನು ನಿರಾಕರಿಸಿತ್ತು. ಈಗ ಸುಪ್ರೀಂನಲ್ಲಿ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಪುರೋಹಿತ್‌ ಅವರ ಪತ್ನಿ ಅಪರ್ಣಾ ಅವರು ತೀರ ಸಂತೋಷ ವ್ಯಕ್ತಪಡಿಸಿದ್ದು, ಇದರಿಂದ ದೊಡ್ಡ ನೆಮ್ಮದಿ ಸಿಕ್ಕಿದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ದೇಶಾದ್ಯಂತ ಸುದ್ದಿ ಮಾಡಿದ ಬಾಂಬ್‌ ಸ್ಫೋಟ ಪ್ರಕರಣ. 2008 ಸೆ.29ರಂದು ಮಹಾರಾಷ್ಟ್ರದ ಪ್ರಮುಖ ಬಟ್ಟೆ ತಯಾರಿಕಾ ಕೇಂದ್ರ ಮಾಲೇಗಾಂವ್‌ನಲ್ಲಿ ಬೈಕ್‌ನಲ್ಲಿ ಅಳವಡಿಸಲಾಗಿದ್ದ ಬಾಂಬ್‌ ಸ್ಫೋಟಗೊಂಡಿತ್ತು. ಘಟನೆಯಲ್ಲಿ 7 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬಳಿಕ ಅಕ್ಟೋಬರ್‌ನಲ್ಲಿ ವಿಶ್ವಹಿಂದೂ ಪರಿಷತ್‌ನ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಅವರನ್ನು ಬಂಧಿಸಲಾಗಿತ್ತು. ಅದೇ ವರ್ಷ ಪುರೋಹಿತ್‌, ಸ್ವಾಮಿ ದಯಾನಂದ್‌ ಪಾಂಡೆ ಎಂಬವವರನ್ನು ಬಂಧಿಸಲಾಗಿತ್ತು. ಹಿಂದೂ ಪರ ಧೋರಣೆ ಹೊಂದಿರುವ ‘ಅಭಿನವ್‌ ಭಾರತ್‌’ ಸಂಘಟನೆ ಭಾಗವಾಗಿ ಇಬ್ಬರೂ ಸ್ಫೋಟದ ಸಂಚು ರೂಪಿಸಿದ್ದಾಗಿ ಹೇಳಲಾಗಿತ್ತು. ಪುರೋಹಿತ್‌ ಅಭಿನವ್‌ ಭಾರತ್‌ ಹಿಂದಿದ್ದು, ಭಾರೀ ಪ್ರಮಾಣದಲ್ಲಿ ಹಣ, ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಾಗಿ ಹೇಳಲಾಗಿತ್ತು. ಜೊತೆಗೆ ಮಾಲೇಗಾಂವ್‌ ಸ್ಫೋಟಕ್ಕೆ ಪ್ಲಾನ್‌ ಮಾಡಿದ್ದಾಗಿ ಆರೋಪಿಸಲಾಗಿತ್ತು. ಪ್ರಕರಣದಲ್ಲಿ ಕಳೆದ ಎಪ್ರಿಲ್‌ನಲ್ಲಿ ಸಾಧ್ವಿ ಪ್ರಗ್ಯಾಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ಅಮಾನತು ರದ್ದು ಸಾಧ್ಯತೆ
ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಲೆ| ಕ| ಪುರೋಹಿತ್‌ರನ್ನು ಸೇನೆಯು ಮತ್ತೆ ಸೇವೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಅವರ ಅಮಾನತು ಆದೇಶವನ್ನು ಹಿಂಪಡೆದು, ಮತ್ತೆ ಸೇವೆಗೆ ಸೇರಿಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸೇನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next