Advertisement

ವಿಮರ್ಶ ಪ್ರಶಸ್ತಿಗೆ ದೇಣಿಗೆ ನೀಡಿದ ಎಲ್‌ಎಸ್‌ಎಸ್‌

11:49 AM Feb 06, 2017 | Team Udayavani |

ಬೆಂಗಳೂರು: ಸಾಹಿತ್ಯ ವಿಮರ್ಶಕರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಹಿರಿಯ ಸಾಹಿತಿ ಹಾಗೂ ವಿಮರ್ಶಕ ಪ್ರೊ.ಎಲ್‌.ಎಲ್‌.ಶೇಷಗಿರಿರಾವ್‌ ಅವರು ಬಿಎಂಶ್ರೀ ಪ್ರತಿಷ್ಠಾನದಲ್ಲಿ ತಮ್ಮ ಹೆಸರಿನ ವಿಮರ್ಶ ಪ್ರಶಸ್ತಿಗಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅಲ್ಲದೆ, ಈ ವರ್ಷದಿಂದಲೇ ಪ್ರಶಸ್ತಿ ಆರಂಭಿಸುವಂತೆ ಪ್ರತಿಷ್ಠಾನವನ್ನು ಕೋರಿದ ಎಲ್‌ಎಸ್‌ಎಸ್‌ ಅವರು ಅದಕ್ಕಾಗಿ 10 ಸಾವಿರ ರೂ. ಹೆಚ್ಚುವರಿ ಮೊತ್ತವನ್ನೂ ಹಸ್ತಾಂತರಿಸಿದರು.

Advertisement

ಕನ್ನಡ ಗೆಳೆಯರ ಬಳಗವು ಜೆ.ಪಿ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ 93ರ ಹರೆಯದ ಎಲ್‌ಎಸ್‌ಎಸ್‌, ವಿಮರ್ಶ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಿಎಂಶ್ರೀ ಪ್ರತಿಷ್ಠಾನದಲ್ಲಿ “ಎಲ್‌ಎಸ್‌ಎಸ್‌ ವಿಮರ್ಶ ಪ್ರಶಸ್ತಿ’ ಆರಂಭಿಸುತ್ತಿರುವುದಾಗಿ ಹೇಳಿ ಅದಕ್ಕೆ ತಮ್ಮಿಂದಲೇ ಎರಡು ಲಕ್ಷ ರೂ. ಪ್ರಕಟಿಸಿದರು.

ಎಲ್‌ಎಸ್‌ಎಸ್‌ ಅವರು ಬರೆದಿರುವ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದ ವಿದ್ವಾಂಸ ಡಾ.ಪಿ.ವಿ.ನಾರಾಯಣ, ಹಿರಿಯ ವಿಮರ್ಶಕರಾದ ಎಲ್‌ಎಸ್‌ಎಸ್‌ ಓದುಗರಲ್ಲಿ ಸಾಹಿತ್ಯದ ಆಸಕ್ತಿಯನ್ನು ಹೆಚ್ಚಿಸುವಂತೆ ಸರಳ ಭಾಷೆಯಲ್ಲಿ ಮತ್ತು ಪರಿಣಾಮಕಾರಿಯಾಗಿ ಬರೆಯುವ ಅಪರೂಪದ ಪ್ರತಿಭಾವಂತ ಎಂದು ಬಣ್ಣಿಸಿದರು.

ಹಿರಿಯ ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌ ಮಾತನಾಡಿ, ಪ್ರಸಿದ್ಧ ಕವಿ ಷೇಕ್ಸ್‌ಪಿಯರ್‌ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ ಆ ಕುರಿತ ಮಾಹಿತಿಯನ್ನು ಮುಂದಿನ ತಲೆಮಾರಿಗೂ ತಿಳಿಸುವಂತೆ ಮಾಡಿದ ಕೆಲವೇ ಪ್ರತಿಭಾವಂತರಲ್ಲಿ ಶೇಷಗಿರಿರಾಯರು ಕೂಡ ಒಬ್ಬರು ಎಂದು ಹೇಳಿದರು.

ಈ ವೇಳೆ ಎಲ್ಲೆಸ್ಸೆಸ್‌ ಅವರ “ನಾಟಕ ರತ್ನಗಳು’, “ಷೇಕ್ಸ್‌ಪಿಯರ್‌ನ ಸಮಗ್ರ ನಾಟಕ ಕತೆಗಳು’ ಮತ್ತು “ಕಾದಂಬರಿ ರತ್ನಗಳು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಅಭಿನವ ಪ್ರಕಾಶನ, ವಸಂತ ಪ್ರಕಾಶನ ಮತ್ತು ಸಪ್ನ ಪುಸ್ತಕ ಮಳಿಗೆಗಳು ಕ್ರಮವಾಗಿ ಈ ಪುಸ್ತಕಗಳನ್ನು ಪ್ರಕಟಿಸಿವೆ. ಕಾರ್ಯಕ್ರಮದಲ್ಲಿ ಭಾರತಿ ಶೇಷಗಿರಿರಾವ್‌, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ, ಡಾ.ಜಿ.ರಾಮಕೃಷ್ಣ, ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಖರ್‌ ಮತ್ತಿತರರು ಇದ್ದರು.

Advertisement

ಇನ್ನೊಂದೇ ಪುಸ್ತಕ ಪ್ರಕಟಿಸುವೆ
ನನಗೀಗ 93ರ ಹರೆಯ. ಈಗ ಮೂರು ಪುಸ್ತಕಗಳನ್ನು ಕೊಟ್ಟಿದ್ದೇನೆ. ಇನ್ನು ಸುಮಾರು ಒಂದು ಸಾವಿರ ಪುಟಗಳ ಸಮಗ್ರ ವಿಮರ್ಶ ಕೃತಿಯೊಂದನ್ನು ಸಿದ್ಧಪಡಿಸಿ ಸಮಗ್ರ ಸಾಹಿತ್ಯ ಸಂಪುಟದಲ್ಲಿ ಬಿಡುಗಡೆ ಮಾಡುತ್ತೇನೆ. ಅದು ನನ್ನ ಕೊನೆಯ ಕೃತಿಯಾಗಿರುತ್ತದೆ.
-ಎಲ್‌.ಎಸ್‌.ಶೇಷಗಿರಿರಾವ್‌, ಹಿರಿಯ ವಿಮರ್ಶಕ

Advertisement

Udayavani is now on Telegram. Click here to join our channel and stay updated with the latest news.

Next