ಮುಂಬೈ: ಈ ಬಾರಿಯ ಐಪಿಎಲ್ ನ ಹೊಸ ತಂಡ ಲಕ್ನೋ ಸೂಪರ್ ಜೈಂಟ್ಸ್ ಪ್ಲೇ ಆಫ್ ನಲ್ಲಿ ಕೂಟದಿಂದ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಲಕ್ನೋ ಸೋಲನುಭವಿಸಿತ್ತು. ಆದರೆ ತಂಡದ ನಾಯಕ ಕೆ.ಎಲ್.ರಾಹುಲ್ ಮಾತ್ರ ವಿಶಿಷ್ಟ ಸಾಧನೆ ಮಾಡಿದರು.
ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಾಲ್ಕು ಐಪಿಎಲ್ ಸೀಸನ್ ಗಳಲ್ಲಿ 600 ಪ್ಲಸ್ ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಹುಲ್ ಆರ್ ಸಿಬಿ ವಿರುದ್ಧ 58 ಎಸೆತಗಳಲ್ಲಿ 79 ರನ್ ಗಳಿಸಿದ್ದರು.
2022ರ ಐಪಿಎಲ್ ನಲ್ಲಿ ರಾಹುಲ್ 15 ಪಂದ್ಯಗಳಲ್ಲಿ 616 ರನ್ ಗಳಿಸಿದ್ದಾರೆ. 2021ರಲ್ಲಿ 621 ರನ್, 2020ರಲ್ಲಿ 670 ರನ್ ಮತ್ತು 2018ರಲ್ಲಿ 659 ರನ್ ಗಳಿಸಿದ್ದರು.
ಇದನ್ನೂ ಓದಿ:ಕರಣ್ ಜೋಹರ್ ಪಾರ್ಟಿಯಲ್ಲಿ ತನ್ನ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಹೃತಿಕ್ ರೋಶನ್
ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಮತ್ತು ಆಸೀಸ್ ನ ಡೇವಿಡ್ ವಾರ್ನರ್ ಮೂರು ಸೀಸನ್ ನಲ್ಲಿ 600 ಕ್ಕಿಂತ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಕ್ರಿಸ್ ಗೇಲ್ ಅವರು 2011, 2012 ಮತ್ತು 2013ರಲ್ಲಿ ಈ ಸಾಧನೆ ಮಾಡಿದ್ದರು. ಅದೇ ರೀತಿ ಡೇವಿಡ್ ವಾರ್ನರ್ ಅವರು 2016ರಿಂದ 2019ರವರೆಗೆ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.