ಮಂಗಳೂರು : ”ಲೋಕಸಭಾ ಚುನಾವಣೆ ಎಂದರೆ ಪ್ರಧಾನಿಯನ್ನು ಅಥವಾ ಒಂದು ಸರಕಾರವನ್ನು ಚುನಾಯಿಸುವುದು ಎಂದರ್ಥವಲ್ಲ; 21ನೇ ಶತಮಾನದಲ್ಲಿ ನವ ಭಾರತ ಹೇಗಿರಬೇಕು ಎಂಬುದನ್ನು ತೀರ್ಮಾನಿಸುವುದೇ ಆಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿ ಎರಡು ಲಕ್ಷಕ್ಕೂ ಮೀರಿ ನೆರೆದ ಸಾಗರೋಪಾದಿಯ ಜನಸಮೂಹವನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ ಹೇಳಿದರು.
‘ನವ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ದೇಶ 20ನೇ ಶತಮಾನದಲ್ಲೇ ಅವಕಾಶ ನೀಡಿತ್ತು; ಆದರೆ ಅದನ್ನು ಒಂದು ಕುಟುಂಬದ ಕೈಗೆ ಒಪ್ಪಿಸುವ ಮೂಲಕ ಪಕ್ಷವು ಆ ಅವಕಾಶವನ್ನು ಕಳೆದುಕೊಂಡಿತು’ ಎಂದು ಮೋದಿ ಹೇಳಿದರು.
ರಾಜ್ಯದಲ್ಲಿನ ಕಾಂಗ್ರೆಸ್ – ಜೆಡಿಎಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ಈ ಎರಡೂ ಪಕ್ಷಗಳಿಗೆ ಪರಿವಾರವಾದವೇ ಸ್ಫೂರ್ತಿಯಾಗಿದೆ; ಆದರೆ ಬಿಜೆಪಿಗೆ ರಾಷ್ಟ್ರವಾದವೇ ಮುಖ್ಯ ಎಂದು ಹೇಳಿದರು.
‘ರಾಜ್ಯದಲ್ಲಿನ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ರೈತರ ಶತ್ರುವಾಗಿದೆ; ಕೇಂದ್ರದ ಯೋಜನೆ ಪ್ರಕಾರ ರೈತರ ಖಾತೆಗೆ ವರ್ಷಕ್ಕೆ 6,000 ರೂ. ಜಮೆ ಮಾಡುವ ಸಲುವಾಗಿ ಫಲಾನುಭವಿಗಳ ಪಟ್ಟಿಯನ್ನು ಕೊಡುವಲ್ಲಿ ಅದು ವಿಫಲವಾಗಿದೆ’ ಎಂದು ಮೋದಿ ಹೇಳಿದರು.
‘ಕಾಂಗ್ರೆಸ್‌ನ ಮಹಾ ಮಿಲಾವಟ್ (ಕಲಬೆರಕೆ) ಸಂಸ್ಕೃತಿಯು ದೇಶದ ಪರಂಪರೆಯನ್ನು ಮಾತ್ರವಲ್ಲದೆ ರಕ್ಷಣೆ ಮತ್ತು ಆರ್ಥಿಕತೆಯನ್ನು ಕೂಡ ದುರ್ಬಲಗೊಳಿಸಿದೆ’ ಎಂದು ಮೋದಿ ಟೀಕಿಸಿದರು.