ಮಂಗಳೂರು: ಒಂದೆಡೆ ಅರಬ್ಬೀ ಸಮುದ್ರ, ಇನ್ನೊಂದೆಡೆ ಕೇರಳ ರಾಜ್ಯದ ಗಡಿ, ವಿಭಿನ್ನ ರಾಜಕೀಯ ಚಿಂತನೆಯ ಕೇಂದ್ರ, ರಾಜ್ಯದಲ್ಲೇ ಕುತೂಹಲಕಾರಿ ಬೆಳವಣಿಗೆಗೆ ಕಾರಣವಾಗುವ ಕ್ಷೇತ್ರ..ಇದು ದಕ್ಷಿಣ ಕನ್ನಡ.
2008ರ ಕ್ಷೇತ್ರ ಮರುವಿಂಗಡಣೆವರೆಗೆ ಮಂಗಳೂರು ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಉಳ್ಳಾಲ, ಮಂಗಳೂರು, ವಿಟ್ಲ, ಪುತ್ತೂರು, ಸುಳ್ಯ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದ್ದವು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದೂ ಬೆಳ್ತಂಗಡಿ ವಿಧಾನಸಭೆ ಕ್ಷೇತ್ರ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2009ರ ಚುನಾವಣೆಗೆ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಹೆಸರು ಬಂದಿದ್ದಷ್ಟೇ ಅಲ್ಲ, ಮಡಿಕೇರಿ, ವಿರಾಜಪೇಟೆ ಮೈಸೂರಿಗೆ ಹೋದರೆ ಸೋಮವಾರ ಪೇಟೆ ಕ್ಷೇತ್ರವನ್ನು ರದ್ದುಗೊಳಿಸಲಾಯಿತು. ಬೆಳ್ತಂಗಡಿಯು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದಿತು.
ಈಗ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನ ಸಭಾ ಕ್ಷೇತ್ರಗಳಿವೆ. ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ (ಹಿಂದಿನ ಸುರತ್ಕಲ್), ಮಂಗಳೂರು (ಹಿಂದಿನ ಉಳ್ಳಾಲ), ಮೂಡುಬಿದಿರೆ, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳು.
ಹಿಂದಿನ ಬಾರಿ ಇದರಲ್ಲಿ ಮಂಗಳೂರು ಬಿಟ್ಟು ಉಳಿದೆಲ್ಲವನ್ನೂ ಬಿಜೆಪಿ ಗೆದ್ದಿದ್ದರೆ, 2023ರ ಚುನಾವಣೆಯಲ್ಲಿ ಬಿಜೆಪಿ ಪುತ್ತೂರು ಕ್ಷೇತ್ರವನ್ನೂ ಕಳೆದುಕೊಂಡಿತ್ತು. ಸದ್ಯ ಬಿಜೆಪಿ-6, ಕಾಂಗ್ರೆಸ್-2 ಕ್ಷೇತ್ರಗಳಲ್ಲಿ ಗೆದ್ದಿವೆ.
1951ರಿಂದ ಇದುವರೆಗೆ 9 ಬಾರಿ ನಿರಂತರ ವಾಗಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆಲ್ಲುತ್ತಲೇ ಬಂದಿದೆ. ಅನಂತರದ 8 ಚುನಾವಣೆಗಳಲ್ಲಿ ನಿರಂತರ ಬಿಜೆಪಿ ಗೆಲುವು ಸಾಧಿಸಿದೆ. ಹಾಗಾಗಿ ಒಂದೊಮ್ಮೆ ಕಟ್ಟರ್ ಕಾಂಗ್ರೆಸ್ ಪ್ರದೇಶವಾಗಿದ್ದ ದಕ್ಷಿಣ ಕನ್ನಡವೀಗ ಕೇಸರಿ ಭದ್ರಕೋಟೆಯೆಂದೇ ಕರೆಯಲ್ಪಡುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳಿಗೆ ಇಲ್ಲಿ ಗೆಲುವು ಲಭಿಸಿಲ್ಲ ಎನ್ನುವುದು ಗಮನಾರ್ಹ. ಬಿಲ್ಲವ ಸಮುದಾಯದ ಬಿ. ಜನಾರ್ದನ ಪೂಜಾರಿ ಹಾಗೂ ಜೈನ ಸಮುದಾಯದ ವಿ.ಧನಂಜಯ ಕುಮಾರ್ ಇಬ್ಬರೂ ಇಲ್ಲಿ ತಲಾ 4 ಬಾರಿ ಸತತವಾಗಿ ಗೆದ್ದಿದ್ದರು. ಕಾಂಗ್ರೆಸ್‌ನ ನಿರಂತರ ಗೆಲುವಿನ ಅಭಿಯಾನವನ್ನು 1991ರಲ್ಲಿ ಕೊನೆ ಯಾಗಿಸಿದ್ದೂ ಧನಂಜಯ ಕುಮಾರ್. ಡಾ| ಎಂ.ವೀರಪ್ಪ ಮೊಲಿ ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಧನಂಜಯ ಕುಮಾರ್ ಅವರ ಬಳಿಕ 2004ರಲ್ಲಿ ಬಿಜೆಪಿಯಿಂದ ಗೆದ್ದ ಡಿ.ವಿ.ಸದಾನಂದ ಗೌಡರು 2009ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸ್ಥಳಾಂತರಗೊಂಡರು. 2009ರಿಂದ ಇದುವರೆಗೆ ನಳಿನ್ ಕುಮಾರ್ ಕಟೀಲು 3 ಬಾರಿ ಗೆದ್ದಿದ್ದಾರೆ.
ಜಾತಿ ಸಮೀಕರಣ ಲೆಕ್ಕಕ್ಕಿಲ್ಲ
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಜಾತಿ ಆಧಾರಿತವಾಗಿ ಚುನಾವಣೆಗಳೂ ನಡೆದಿಲ್ಲ. ಒಂದೊಮ್ಮೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷಗಳು ಜಾತಿ ಸಮೀಕರಣ ಮಾಡಿದ್ದಿದ್ದರೂ ಮತ ಗಳಿಕೆಯಲ್ಲಿ ದೊಡ್ಡ ಯಶಸ್ಸು ಕಂಡಿಲ್ಲ. ಇಲ್ಲಿ ಹೆಚ್ಚಾಗಿ ಪûಾ ಧಾರಿತ ನಿಲುವೇ ಮೇಲುಗೈ. ಅಲ್ಪಸಂಖ್ಯಾಕ ಸಮುದಾಯ ಹಿಂದಿನಿಂದಲೂ ಸಾಂಪ್ರದಾಯಿಕ ವಾಗಿ ಕಾಂಗ್ರೆಸ್‌ಗೆ ಮತಹಾಕುವುದು ಬಿಟ್ಟರೆ ಉಳಿ ದಂತೆ ಇಲ್ಲಿ ಜಾತಿ ಲೆಕ್ಕಾಚಾರ ನಡೆಯುವುದಿಲ್ಲ.
ನಳಿನ್ ಕುಮಾರ್ ಕಟೀಲು, ಹಾಲಿ ಸಂಸದ
ಪಕ್ಷ: ಬಿಜೆಪಿ
ಪಡೆದ ಮತ: 7,74,285
ಗೆಲುವಿನ ಅಂತರ: 2,74,621
ಮತದಾರರ ವಿವರ
ಮತದಾರರು 2024 2019
ಪುರುಷರು 8,73,380 8,45,308
ಮಹಿಳೆಯರು 9,12,369 9,79,050
ಇತರ 77 102
ಒಟ್ಟು 17,85,826 18,24,460
ವೇಣುವಿನೋದ್ ಕೆ.ಎಸ್.