ಹೊಸದಿಲ್ಲಿ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು 2019ರ ಲೋಕಸಭಾ ಚುನಾವಣೆ ಸಂಬಂಧ 17 ರಾಜ್ಯಗಳ ಪ್ರಭಾರಿಗಳನ್ನು ಇಂದು ಬುಧವಾರ ನೇಮಕ ಮಾಡಿದ್ದಾರೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನುರಾಜಸ್ಥಾನಕ್ಕೆ ಮತ್ತು ಇನ್ನೋರ್ವ ಸಚಿವ ತಾವರಚಂದ್ ಗೆಹ್‌ಲೋಟ್ ಅವರನ್ನು ಉತ್ತರಾಖಂಡಕ್ಕೆ ಪ್ರಚಾರಾಭಿಯಾನ ಪ್ರಭಾರಿಗಳನ್ನಾಗಿ ನೇಮಿಸಲಾಗಿದೆ.
ಗೋವರ್ಧನ್ ಝಡಾಪಿಯಾ (ಗುಜರಾತ್ ನಾಯಕ), ದುಷ್ಯಂತ ಗೌತಮ್ (ಪಕ್ಷದ ಉಪಾಧ್ಯಕ್ಷ) ಮತ್ತು ನರೋತ್ತಮ ಮಿಶ್ರಾ (ಮಧ್ಯ ಪ್ರದೇಶದವರು) ಇವರನ್ನು ರಾಜಕೀಯವಾಗಿ ಅತ್ಯಂತ ನಿರ್ಣಾಯಕವಾಗಿರುವ ಉತ್ತರ ಪ್ರದೇಶಕ್ಕೆ ನಿಯೋಜಿಸಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದರ್ ಯಾದವ್ ಮತ್ತು ಅನಿಲ್ ಜೈನ್ ಅವರನ್ನು ಅನುಕ್ರಮವಾಗಿ ಬಿಹಾರ ಮತ್ತು ಛತ್ತೀಸ್‌ಗಢಕ್ಕೆ ನಿಯೋಜಿಸಲಾಗಿದೆ. ಮಹೇಂದ್ರ ಸಿಂಗ್ ಮತ್ತು ಒ ಪಿ ಮಾಥುರ್ ಅವರನ್ನು ಅನುಕ್ರಮವಾಗಿ ಅಸ್ಸಾಂ ಮತ್ತು ಗುಜರಾತ್‌ಗೆ ಹಾಕಲಾಗಿದೆ.
ಇದೇ ವೇಳೆ ಅಮಿತ್ ಶಾ ಅವರು ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಪಂಜಾಬ್, ತೆಲಂಗಾಣ, ಸಿಕ್ಕಿಂ ಸೇರಿದಂತೆ ಇತರ ಹಲವು ರಾಜ್ಯಗಳ ಪ್ರಭಾರಿಗಳು ಮತ್ತು ಸಹ-ಪ್ರಭಾರಿಗಳನ್ನು ನೇಮಿಸಿದ್ದಾರೆ.