ಮಂಗಳೂರು: ರಾಜ್ಯ ಸರಕಾರದ ವತಿಯಿಂದ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಹಾಗೂ ಸ್ಟವ್ ನೀಡುವ ಯೋಜನೆ ಅನಿಲ ಭಾಗ್ಯಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು ಮಾರ್ಗಸೂಚಿ ಪ್ರಕಟಿಸಲಾಗಿದೆ. ಆ. 15ರೊಳಗೆ ಮುಖ್ಯಮಂತ್ರಿಯವರು ಈ ಯೋಜನೆಗೆ ಚಾಲನೆ ನೀಡುವರು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕ ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.
Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಪಿಎಲ್ ಪಡಿತರ ಚೀಟಿ ಹಾಗೂ ಅಂತ್ಯೋದಯ ಪಡಿತರ ಚೀಟಿಗಳನ್ನು ಹೊಂದಿದ್ದು ಅನಿಲ ಸಂಪರ್ಕ ಹೊಂದಿರದವರು ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಇವರಿಗೆ ಅಡುಗೆ ಅನಿಲ ವಿತರಕರ ಮುಖಾಂತರ ಅನಿಲ ಸಂಪರ್ಕವನ್ನು ನೀಡಿ ಅನಂತರ ಅಡುಗೆ ಅನಿಲ ವಿತರಕರಿಗೆ ಖಜಾನೆ-2 ಮೂಲಕ ನೇರವಾಗಿ ಹಣವನ್ನು ವರ್ಗಾಯಿಸಲಾಗುತ್ತದೆ ಎಂದರು.
ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ 18 ವರ್ಷ ಮೇಲ್ಪಟ್ಟ ಮಹಿಳಾ ಸದಸ್ಯರು, ಒಂದು ವೇಳೆ ಮಹಿಳಾ ಸದಸ್ಯರು ಇಲ್ಲದ ಪಕ್ಷದಲ್ಲಿ 18 ವರ್ಷ ಮೇಲ್ಪಟ್ಟ ಪುರುಷ ಸದಸ್ಯರು ಸಂಬಂಧಪಟ್ಟ ಖಾಸಗಿ ಫ್ರಾಂಚೈಸಿ, ತಾಲೂಕು ಕಚೇರಿ, ಗ್ರಾ.ಪಂ., ಜನಸ್ನೇಹಿ ಕೇಂದ್ರ, ಕರ್ನಾಟಕ ವನ್ ಮುಂತಾದ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರ ಕುಟುಂಬದ ಎಲ್ಲ ಸದಸ್ಯರ ಆಧಾರ್ ಸಂಖ್ಯೆಯನ್ನು ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆಯ ತಂತ್ರಾಂಶದಲ್ಲಿ ನೋಂದಾಯಿಸಿ ತೈಲ ಕಂಪೆನಿ ವೆಬ್‌ಸೈಟ್ ಮುಖಾಂತರ ಎಲ್ಲ ಸದಸ್ಯರು ಅಡುಗೆ ಅನಿಲ ಸಂಪರ್ಕ ಹೊಂದದೆ ಇರುವ ಬಗ್ಗೆ ಪರಿಶೀಲಿಸಿ ಇಲಾಖೆಯಿಂದ ಪರಿಶೀಲನೆ ಮಾಡುವ ನಿಬಂಧನೆಗೊಳಪಟ್ಟು ಅರ್ಜಿದಾರರಿಗೆ ಹಿಂಬರಹ ನೀಡಲಾಗುತ್ತದೆ. ಅರ್ಜಿದಾರರು ತಮ್ಮ ಆಯ್ಕೆಯ ಅಡುಗೆ ಅನಿಲ ವಿತರಕರನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ಸಚಿವರು ವಿವರಿಸಿದರು.
Related Articles
Advertisement
ಉಸ್ತುವಾರಿ, ಮೇಲ್ವಿಚಾರಣೆರಾಜ್ಯ ಮಟ್ಟದಲ್ಲಿ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಇದು ಯೋಜನೆಯ ಸಮಗ್ರ ಜಾರಿ ಬಗ್ಗೆ ಪರಿಶೀಲನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ನಾಮನಿರ್ದೇಶಿತ ಸದಸ್ಯ ರನ್ನು ಒಳಗೊಂಡ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ರಚಿಸಲಾಗಿದೆ ಎಂದು ಖಾದರ್ ತಿಳಿಸಿದರು. ಉಜ್ವಲ ಯೋಜನೆ: ನಿರ್ಲಕ್ಷ್ಯ ಸಲ್ಲದು
ಕೇಂದ್ರ ಸರಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ಇತ್ತೀಚೆಗೆ ಜರಗಿದ ಕಾರ್ಯಕ್ರಮವನ್ನು ಜಿಲ್ಲೆಯ ಜನಪ್ರತಿನಿಧಿಗಳನ್ನು ಬಿಟ್ಟು ನಡೆಸಲಾಗಿದೆ. ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವ ಖಾದರ್ ಅವರು, ಈ ಬಗ್ಗೆ ಈಗಾಗಲೇ ಯೋಜನೆಯ ರಾಜ್ಯ ಸಂಯೋಜಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು. ಅನಿಲಭಾಗ್ಯ ಸಂಪೂರ್ಣ ಉಚಿತ
ಸರಕಾರದ ವತಿಯಿಂದ ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆಯ ಫಲಾನುಭವಿಗಳಿಗೆ 1,940 ರೂ. ಮೌಲ್ಯದ ಉಚಿತ ಅಡುಗೆ ಅನಿಲ ಸಂಪರ್ಕದೊಂದಿಗೆ 999 ರೂ. ಮೌಲ್ಯದ 2 ಬರ್ನರ್ ಗ್ಯಾಸ್‌ಸ್ಟವ್ ಕೂಡ ಉಚಿತವಾಗಿ ನೀಡಲಾಗುತ್ತಿದೆ. ಗ್ಯಾಸ್‌ಸ್ಟವ್ ಮುಖ್ಯಮಂತ್ರಿಗಳ ಭಾವಚಿತ್ರ ಸಹಿತ ಅನಿಲಭಾಗ್ಯ ಯೋಜನೆಯ ಲಾಂಛನವನ್ನು ಹೊಂದಿರುತ್ತದೆ. ಅರ್ಜಿದಾರರು 20 ರೂ. ನೀಡಿ ಅರ್ಜಿ ನೋಂದಾಯಿಸಬೇಕಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ಯಾಸ್ ಸಂಪರ್ಕ ರಹಿತ 71,000 ಕುಟುಂಬಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ 35,44,479 ಕುಟುಂಬಗಳಿವೆ. ಕೇಂದ್ರ ಸರಕಾರದ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲ ಸಂಪರ್ಕ ಮಾತ್ರ ಉಚಿತವಾಗಿರುತ್ತದೆ. ಗ್ಯಾಸ್‌ಸ್ಟವ್ ನೀಡಿ ಅದರ ಮೊತ್ತವನ್ನು ಗ್ಯಾಸ್ ಸಬ್ಸಿಡಿಯಲ್ಲಿ ಪ್ರತಿ ತಿಂಗಳು ಕಡಿತ ಮಾಡಲಾಗುತ್ತದೆ. ಆದರೆ ಅನಿಲಭಾಗ್ಯ ಯೋಜನೆಯಲ್ಲಿ ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ. ಉಜ್ವಲ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರು ಇದರಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಅದರಲ್ಲಿ ಗ್ಯಾಸ್ ಸಂಪರ್ಕ ಪಡೆದವರಿಗೆ ಅವಕಾಶವಿರುವುದಿಲ್ಲ ಎಂದು ಖಾದರ್ ತಿಳಿಸಿದರು.