ಹುಬ್ಬಳ್ಳಿ: ಅಡುಗೆ ಅನಿಲ ಹಾಗೂ ಇನ್ನಿತರ ಆಹಾರ ಧಾನ್ಯಗಳ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದಿಂದ ಸೋಮವಾರ ಪ್ರತಿಭಟಿಸಲಾಯಿತು.
ಕೇಂದ್ರ ಸರಕಾರ ಸಬ್ಸಿಡಿ ರಹಿತ ಅಡುಗೆ ಅನಿಲ ಪ್ರತಿ ಸಿಲಿಂಡರ್ ಬೆಲೆಯನ್ನು 678.50ರೂ.ನಿಂದ 765ರೂ.ಗೆ ಹೆಚ್ಚಿಸಿದೆ. ಪ್ರತಿ ಸಿಲಿಂಡರ್‌ಗೆ ಸುಮಾರು 86 ರೂ. ಹೆಚ್ಚಳವಾಗಿದ್ದು, ಸಿಲಿಂಡರ್ ವಿತರಿಸುವವರು 20ರಿಂದ 30ರೂ.ಗಳನ್ನು ಪಡೆಯುತ್ತಾರೆ.
ಅಲ್ಲಿಗೆ ಜನ 780ರಿಂದ 790ರೂ. ನೀಡಿ ಅಡುಗೆ ಅನಿಲ ಸಿಲಿಂಡರ್ ಪಡೆಯಬೇಕಾಗಿದೆ. ಫೆಬ್ರವರಿ 1ರಿಂದಲೇ ಸಬ್ಸಿಡಿಯೇತರ ಸಿಲಿಂಡರ್ ಬೆಲೆ ಹೆಚ್ಚವಾಗಿದೆ. ಮಧ್ಯಮ ಮತ್ತು ಬಡವರು ದುಬಾರಿ ಬೆಲೆಯ ಅಡುಗೆ ಅನಿಲ ಸಿಲಿಂಡರ್ ಖರೀದಿಸುವುದು ಕಷ್ಟಕರವಾಗಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬೆಲೆ ಏರಿಕೆ ವಿರುದ್ಧದ ವಿಚಾರಗಳನ್ನೇ ಜನರ ಮುಂದಿಟ್ಟು ಬೆಲೆಗಳನ್ನು ಇಳಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಕೇವಲ ಅಡುಗೆ ಅನಿಲ ಸಿಲಿಂಡರ್ ಮಾತ್ರವಲ್ಲದೆ ಆಹಾರ ಧಾನ್ಯ,
ಖಾದ್ಯ ತೈಲಗಳ ಬೆಲೆಗಳು ಹೆಚ್ಚಳವಾಗಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರಲ್ಲದೆ, ಅಡುಗೆ ಅನಿಲ ಸಿಲಿಂಡರ್ ಹಾಗೂ ಆಹಾರ ಪದಾರ್ಥಗಳ ಬೆಲೆ ಇಳಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು. ಎಸ್‌ಡಿಪಿಐನ ಜಿಲ್ಲಾ ಕಾರ್ಯದರ್ಶಿ ಎಂ.ಜಾಗಿರದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.