Advertisement

ಉತ್ಪಾದನೆ ವೆಚ್ಚ ತಗ್ಗಿಸಿ ಅಧಿಕಾರಿ ಇಳುವರಿ ಪಡೆಯಿರಿ

11:43 AM Oct 08, 2017 | |

ತಿ.ನರಸೀಪುರ: ಕೃಷಿಯಲ್ಲಿ ಉತ್ಪಾದನೆ ವೆಚ್ಚ ತಗ್ಗಿಸಿ ಅಧಿಕ ಇಳುವರಿ ಪಡೆಯಲು ಪೂರಕವಾಗಿ ಕೃಷಿ ಯಂತ್ರಗಳು ಬಳಕೆಯಾಗಬೇಕೆಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. ಪಟ್ಟಣದ ಶ್ರೀಗುಂಜಾ ನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಶನಿವಾರ ರೈತರಿಗೆ ಪವರ್‌ ಟಿಲ್ಲರ್‌ಗಳನ್ನು ವಿತರಣೆ ಮಾಡಿ ಮಾತನಾಡಿದರು.

Advertisement

ಕೃಷಿ ಯಾಂತ್ರೀಕರಣ ಯೋಜನೆ ಸೌಲಭ್ಯವನ್ನು ತಾಲೂಕಿನಲ್ಲಿ ಹೆಚ್ಚಿನ ರೈತರಿಗೆ ವಿಸ್ತರಿಸಲು ಸಬ್ಸಿಡಿ ದರದಲ್ಲಿ 100 ಪವರ್‌ ಟಿಲ್ಲರ್‌ಗಳನ್ನು ಪ್ರಸಕ್ತ ಸಾಲಿನಲ್ಲಿ ತಾಲೂಕಿಗೆ ಮಂಜೂರು ಮಾಡಲಾಗಿದೆ. ಕೃಷಿ ವಲಯದ ಅಭಿವೃದ್ಧಿಗೆ ಟಿಲ್ಲರ್‌ಗಳು ಉಪಯುಕ್ತವಾಗಲಿ ಎಂದು ತಿಳಿಸಿದರು.

ಆರಂಭಿಕವಾಗಿ 30 ಮಂದಿ ರೈತರಿಗೆ ಸಾಮೂಹಿಕವಾಗಿ ಪವರ್‌ ಟಿಲ್ಲರ್‌ ವಿತರಣೆ ಮಾಡಲಾಗುತ್ತಿದೆ. ಟಿಲ್ಲರ್‌ ಖರೀದಿಸಲು ಪ.ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ರೈತರಿಗೆ 1 ಲಕ್ಷ ರೂ. ಹಾಗೂ ಸಾಮಾನ್ಯ ಸಮುದಾಯಗಳ ರೈತರಿಗೆ 60 ಸಾವಿರ ರೂಗಳ ಸಹಾಯ ಧನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಟಿಲ್ಲರ್‌ಗಳನ್ನು ಪಡೆದುಕೊಂಡ ರೈತರು ಅನ್ಯರಿಗೆ ಮಾರಾಟ ಮಾಡದೆ ನಿಗದಿತ ಉದ್ದೇಶಕ್ಕೆ ಬಳಕೆ ಮಾಡಬೇಕೆಂದು ಸಚಿವರು ಕಿವಿಮಾತು ಹೇಳಿದರು. 

ಸಹಾಯಕ ಕೃಷಿ ನಿರ್ದೇಶಕ ಡಾ.ಎನ್‌.ಕೃಷ್ಣಮೂರ್ತಿ, ತಾಲೂಕಿಗೆ 2013-14ನೇ ಸಾಲಿನಲ್ಲಿ 10 ರಿಂದ 15 ಪವರ್‌ ಟಿಲ್ಲರ್‌ಗಳು ಮಾತ್ರ ಕೃಷಿ ಇಲಾಖೆಗೆ ಅಂದಿನ ಸರ್ಕಾರಗಳು ನೀಡುತ್ತಿದ್ದವು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಚಿವರು ವಿಶೇಷ ಕಾಳಜಿ ವಹಿಸಿದ್ದರಿಂದ ತಾಲೂಕಿಗೆ ಪ್ರಸಕ್ತ ಸಾಲಿನಲ್ಲಿ 100 ಪವರ್‌ ಟಿಲ್ಲರ್‌ ಮಂಜೂರು ಮಾಡಿದ್ದಾರೆ. ಮೊದಲ ಹಂತದಲ್ಲಿ 30 ಟಿಲ್ಲರ್‌ಗಳನ್ನು ಅರ್ಹ ರೈತರಿಗೆ ಹಂಚಿಕೆ ಮಾಡಲಾಗಿದೆ. 2ನೇ ಹಂತದಲ್ಲಿ ಬರಲಿರುವ 70 ಟಿಲ್ಲರ್‌ಗಳನ್ನು ಅರ್ಹರನ್ನು ಆಯ್ಕೆ ಮಾಡಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ವಸತಿ ಯೋಜನೆ ಜಾಗೃತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಸುನೀಲ್‌ ಬೋಸ್‌, ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಜಿಪಂ ಸದಸ್ಯ ಟಿ.ಎಚ್‌.ಮಂಜುನಾಥನ್‌, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಪುರಸಭೆ ಅಧ್ಯಕ್ಷೆ ಸುಧಾ, ತಾಪಂ ಸದಸ್ಯರಾದ ರಾಮಲಿಂಗಯ್ಯ, ಕೆ.ಎಸ್‌.ಗಣೇಶ್‌, ಎಚ್‌.ಎನ್‌.ಉಮೇಶ, ಮಾಜಿ ಸದಸ್ಯ ಕೆ.ಜಿ.ವೀರಣ್ಣ, ಪುರಸಭಾ ಸದಸ್ಯರಾದ ಸಿ.ಉಮೇಶ್‌(ಕನಕಪಾಪು), ರಾಘವೇಂದ್ರ,

Advertisement

ಟಿ.ಜೆ.ಪುಟ್ಟಸ್ವಾಮಿ, ಮೀನಾಕ್ಷಿ, ಮೃಗಾಲಯ ಪ್ರಾಧಿಕಾರದ ನಿರ್ದೇಶಕಿ ಲತಾ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿರ್ದೇಶಕ ಕೊತ್ತೇಗಾಲ ಬಸವರಾಜು, ಲೋಕೋಪಯೋಗಿ ಇಇ ರವಿಕುಮಾರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆರ್‌.ವಿನಯ್‌ಕುಮಾರ್‌, ಜಿಪಂ ಇಇ ರಂಗಯ್ಯ, ಎಇಇಗಳಾದ ಪಿ.ಲಕ್ಷ್ಮಣ್‌ರಾವ್‌,

ಎಸ್‌.ಸಿದ್ದರಾಜು, ತಹಶೀಲ್ದಾರ್‌ ಬಿ.ಬಸವರಾಜು ಚಿಗರಿ, ತಾಪಂ ಕಾರ್ಯನಿರ್ವಹಕ ಅಧಿಕಾರಿ ಬಿ.ಎಸ್‌.ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಕಿರಿಯ ಎಂಜಿನಿಯರ್‌ ಕೆ.ಪುರುಷೋತ್ತಮ್‌, ಸಿಡಿಪಿಒ ಬಿ.ಎನ್‌.ಬಸವರಾಜು, ಪಶುಪಾಲನೆ ಸಹಾಯಕ ನಿರ್ದೇಶಕ ಡಾ.ಚಿನ್ನಸ್ವಾಮಿ, ಕೃಷಿ ಅಧಿಕಾರಿ ಎಚ್‌.ಎಸ್‌.ಸುಧಾ ಮತ್ತಿತರರಿದ್ದರು.
  
ಅರ್ಹರ ಹೆಸರು ಕೂಗಿ ಸವಲತ್ತು ಹಂಚಿಕೆ: ಕೃಷಿ ಇಲಾಖೆಯಿಂದ ಪವರ್‌ ಟಿಲ್ಲರ್‌ಗಳನ್ನು ಅರ್ಹ ರೈತರಿಗೆ ನೀಡಿರುವುದನ್ನು ಖಾತರಿಪಡಿಸಿಕೊಳ್ಳಲು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರೇ ಫ‌ಲಾನುಭವಿಗಳ ಹೆಸರನ್ನು ಕೂಗಿ ಸವಲತ್ತುಗಳ ಹಂಚಿಕೆಯಲ್ಲಿ ಪಾರದರ್ಶಕತೆ ಪರಿಶೀಲಿಸಿದರು. ನಮ್ಮೆದುರು ಮೂವತ್ತು ಟಿಲ್ಲರ್‌ ನೀಡಿದ್ದೀಯ, ಕಾಣದಂತೆ ಅದೆಷ್ಟೂ ಟಿಲ್ಲರ್‌ಗಳನ್ನು ಕೊಟ್ಟಿದ್ದೀಯ ಎಂದು ಸಹಾಯಕ ಕೃಷಿ ನಿರ್ದೇಶಕರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next