Advertisement

ಕೆರ್ವಾಶೆಯಲ್ಲಿ ಲೋ ವೋಲ್ಟೇಜ್‌ ಸಮಸ್ಯೆ

10:39 PM Mar 10, 2020 | mahesh |

ಅಜೆಕಾರು: ಕೆರ್ವಾಶೆ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆ ವಿದ್ಯುತ್‌ ಲೋ ವೋಲ್ಟೇಜ್‌ ಸಮಸ್ಯೆ ನಿರಂತರವಾಗಿದ್ದು ಕೃಷಿಕರು ಸೇರಿದಂತೆ ಸ್ಥಳೀಯರು ಹೈರಾಣಾಗಿದ್ದಾರೆ. ಹಲವು ವರ್ಷಗಳಿಂದ ವಿದ್ಯುತ್‌ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಮೆಸ್ಕಾಂ ಇಲಾಖೆಗೆ ಮನವಿ ಮಾಡುತ್ತ ಬಂದಿದ್ದರೂ ನಿರ್ಲಕ್ಷ್ಯ ಮನೋಭಾವ ತಳೆದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

Advertisement

ವಿದ್ಯುತ್‌ ಪರಿವರ್ತಕ ಹಾಕಿಲ್ಲ
ಎರಡು ವರ್ಷಗಳಿಂದ ವಿದ್ಯುತ್‌ ಪರಿವರ್ತಕ ಅಳವಡಿಸುವ ಬಗ್ಗೆ ಆಶ್ವಾಸನೆ ಸಿಗುತ್ತಿದೆಯಾದರೂ ಈ ವರೆಗೆ ಸ್ಪಷ್ಟವಾದ ಮಾಹಿತಿ ನೀಡದೆ ಪ್ರಕ್ರಿಯೆ ಹಂತದಲ್ಲಿದೆ ಎಂದು ಹೇಳಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ ಎಂದು ಸ್ಥಳಿಯರು ದೂರಿದ್ದಾರೆ.

ಹೆಚ್ಚಿದ ಲೋಡ್‌
ಸುಮಾರು 20 ವರ್ಷಗಳ ಹಿಂದೆ ಹನಿಕುಮೇರು ಕಂಚರಬೆಟ್ಟು ಎಂಬಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದ್ದು, ಆಗ ಬೆರಳೆಣಿಕೆಯ ಮನೆಗಳು ಹಾಗೂ ಒಂದೆರಡು ಪಂಪುಗಳಿದ್ದವು. ಆದರೆ ಈಗ ಇಲ್ಲಿ 200ಕ್ಕೂ ಅಧಿಕ ಮನೆಗಳು ಮತ್ತು 30ಕ್ಕೂ ಹೆಚ್ಚು ವಿದ್ಯುತ್‌ ಚಾಲಿತ ಪಂಪ್‌ಗ್ಳಿವೆ. ಇದರಿಂದಾಗಿ ವರ್ಷವಿಡೀ ವಿದ್ಯುತ್‌ ಲೋ ವೋಲ್ಟೇಜ್‌ ಸಮಸ್ಯೆ ಕಾಡುತ್ತಿದೆ. ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಗುತ್ತಿಕಂಬ್ಲಿ ಬಳಿ ಹೊಸದಾಗಿ ವಿದ್ಯುತ್‌ ಪರಿವರ್ತಕ ಅಳವಡಿಸುವಂತೆ ಮನವಿ ಮಾಡಲಾಗಿತ್ತು.

ಹಲವು ಪ್ರದೇಶಗಳಲ್ಲಿ ಸಮಸ್ಯೆ
ಗ್ರಾಮದ ಕುರೆದ್ದು, ಗುತ್ತಿಕಂಬ್ಲಿ, ಶೆಟ್ಟಿಬೆಟ್ಟು, ಪೆರ್ಗಬೆಟ್ಟು, ಪಂಜುರ್ಲಿಗುಡ್ಡೆ, ಕಂಚರಬೆಟ್ಟು ಪ್ರದೇಶಗಳಲ್ಲಿ ವಿದ್ಯುತ್‌ ಸಮಸ್ಯೆ ವಿಪರೀತವಾಗಿದ್ದು, ಮನೆ ಬಳಕೆಯ ಬಲ್ಬ್ಗಳೂ ಉರಿಯಲು ಕಷ್ಟವಾಗಿದೆ. ಹನಿಕುಮೇರು ಬಳಿ ಇರುವ ವಿದ್ಯುತ್‌ ಪರಿವರ್ತಕದಿಂದ ಸುಮಾರು 100ರಷ್ಟು ವಿದ್ಯುತ್‌ ಸಂಪರ್ಕವಿದ್ದು, ಹೊಸ ಪರಿವರ್ತಕ ಸ್ಥಾಪಿಸಿದಲ್ಲಿ ಸುಮಾರು 60 ಮನೆಗಳಿಗೆ ಸಹಕಾರಿಯಾಗಲಿದೆ.

ಕೃಷಿಗೆ ನೀರಿಲ್ಲ
ಈ ಭಾಗದಲ್ಲಿ ಸುಮಾರು 35 ಮಂದಿ ಕೃಷಿಕರು ವಿದ್ಯುತ್‌ ಚಾಲಿತ ಪಂಪುಗಳನ್ನು ಹೊಂದಿದ್ದು, ವಿದ್ಯುತ್‌ ಲೋ ವೋಲ್ಟೇಜ್‌ ಸಮಸ್ಯೆಯಿಂದಾಗಿ ಕೃಷಿಗೆ ನೀರಿಲ್ಲದಂತಾಗಿದೆ. ಅಡಿಕೆ, ತೆಂಗು, ಬಾಳೆ ಮೊದಲಾದ ಕೃಷಿ ನೀರಿಲ್ಲದೆ ಒಣಗಿ ಹೋಗಿದೆ. ಒಂದೆರಡು ಕೃಷಿಕರು ಡೀಸೆಲ್‌ ಚಾಲಿತ ಪಂಪುಗಳನ್ನು ಅಳವಡಿಸಿಕೊಂಡಿದ್ದಾರೆ. ಜತೆಗೆ ಮನೆಗಳಲ್ಲಿ ವಿದ್ಯುತ್‌ ಉಪಕರಣಗಳಿಗೆ ಹಾನಿ ಉಂಟಾಗುತ್ತಿದೆ.

Advertisement

ಅಂದಾಜು ಪಟ್ಟಿಗೆ 3 ವರ್ಷ
ಗುತ್ತಿಕಂಬ್ಲಿ ಬಳಿ ವಿದ್ಯುತ್‌ ಪರಿವರ್ತಕ ಅಳವಡಿಸುವ ಬಗ್ಗೆ 2018ರ ಆ.16ರಂದು ಅಂದಾಜು ಪಟ್ಟಿಗೆ ಮೆಸ್ಕಾಂ ಇಲಾಖೆಯಿಂದ ಅನುಮೋದನೆ ದೊರೆತಿದೆಯಾದರೂ ಪರಿವರ್ತಕ ಅಳವಡಿಕೆಯಾಗಿಲ್ಲ. ಸುಮಾರು 6 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿ ಈಗಾಗಲೇ 3 ವರ್ಷಗಳು ಕಳೆದಿವೆ. ತ್ವರಿತವಾಗಿ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮೆಸ್ಕಾಂ ಅಧಿಕಾರಿಗಳಿಗೆ ಮನವಿ
ಈ ಭಾಗದಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸುವ ಬಗ್ಗೆ ಈಗಾಗಲೇ ಶಾಸಕರು, ಜಿ.ಪಂ. ಸದಸ್ಯರು, ಗ್ರಾ.ಪಂ. ಆಡಳಿತ ನಿರಂತರವಾಗಿ ಕಾರ್ಯಪ್ರವೃತ್ತವಾಗಿದ್ದು, ಶೀಘ್ರದಲ್ಲಿ ಅಳವಡಿಸುವಂತೆ ಕ್ರಮ ಕೈಗೊಳ್ಳಲು ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು.
-ಪ್ರಮೀಳಾ, ಅಧ್ಯಕ್ಷರು, ಕೆರ್ವಾಶೆ ಗ್ರಾ.ಪಂ.

ಪ್ರಕ್ರಿಯೆ ಟೆಂಡರ್‌ ಹಂತದಲ್ಲಿ
ಕೆರ್ವಾಶೆ ಗುತ್ತಿಕಂಬ್ಲಿ ಕುರೆದ್ದು ಪರಿಸರದಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸುವ ಬಗ್ಗೆ ಪ್ರಕ್ರಿಯೆ ಟೆಂಡರ್‌ ಹಂತದಲ್ಲಿದ್ದು, ಟೆಂಡರ್‌ ಪೂರ್ಣಗೊಂಡ ಬಳಿಕ ತತ್‌ಕ್ಷಣ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ದಿನೇಶ್‌ ಉಪಾಧ್ಯ, ಮೆಸ್ಕಾಂ ಕಾ.ನಿ. ಎಂಜಿನಿಯರ್‌, ಉಡುಪಿ

ಪ್ರಯೋಜನವಿಲ್ಲ
ಕಳೆದ ಹಲವು ವರ್ಷಗಳಿಂದ ವಿದ್ಯುತ್‌ ಸಮಸ್ಯೆಯಿಂದ ಸ್ಥಳೀಯರು ಸಂಕಷ್ಟ ಪಡುವಂತಾಗಿದ್ದು ಮೆಸ್ಕಾಂ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಈ ಪರಿಸರದಲ್ಲಿ ವಿದ್ಯುತ್‌ ಸಂಪರ್ಕ ಇದ್ದೂ ವಿದ್ಯುತ್‌ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
-ಲೋಕೇಶ್‌, ಸ್ಥಳೀಯ ಕೃಷಿಕರು

– ಜಗದೀಶ್‌ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next