ಕೊಲ್ಲೂರು: ಕೊಲ್ಲೂರು ಪರಿಸರದಲ್ಲಿ ಎದುರಾದ ಲೋವೋಲ್ಟೇಜ್ ಸಮಸ್ಯೆ ಅದರ ಪರಿಣಾಮ ವೆಟ್‌ವೆಲ್‌ನ ವಿದ್ಯುತ್ ಸಂಪರ್ಕದಲ್ಲಿ ದಿನದ ಬಹುತೇಕ ಸಮಯದಲ್ಲಿ ನಿಗದಿತ ವೋಲ್ಟೇಜ್ ಲಭ್ಯವಿಲ್ಲದೇ ಇರುವುದರಿಂದ ಹಾಗೂ ಅನಿಯಮಿತ ವಿದ್ಯುತ್ ಕಡಿತದಿಂದಾಗಿ ವೆಟ್ ವೆಲ್‌ನಿಂದ ತ್ಯಾಜ್ಯ ನೀರನ್ನು ಪಂಪ್ ಮಾಡಲು ಸಾಧ್ಯವಾಗದೇ ತುಂಬಿ ಹೊರ ಹರಿಯುತ್ತಿರುವುದು ಒಳಚರಂಡಿ ಯೋಜನೆಯ ಸಮರ್ಪಕ ಕಾರ್ಯನಿರ್ವಹಣೆಗೆ ಅಡೆ-ತಡೆಯಾಗಿದ್ದು, ಶಾಶ್ವತ ಪರಿಹಾರ ಒದಗದಿರುವುದು ಕೊಲ್ಲೂರು ದೇಗುಲದ ಸಮಗ್ರ ಅಭಿವೃದ್ಧಿಯ ಸಭೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಎಲ್ಲೂರಿನ ಸಬ್‌ಸ್ಟೇಷನ್ ಕಾರ್ಯಾರಂಭ ವಿಳಂಬ
ಹಾಲ್ಕಲ್ ಬಳಿಯ ಎಲ್ಲೂರಿನಲ್ಲಿ ನಿರ್ಮಿಸಲಾದ ನೂತನ ಸಬ್ ಸ್ಟೇಷನ್ ಕಾರ್ಯನಿರ್ವಹಣೆಗೆ ಎದುರಾದ ಅರಣ್ಯ ಇಲಾಖೆಯ ಕಾನೂನು ಕ್ರಮ ಕೊಲ್ಲೂರು ಸಹಿತ ವಿವಿಧ ಗ್ರಾಮಗಳಲ್ಲಿ ಲೋವೋಲ್ಟೇಜ್‌ಗೆ ಕಾರಣವಾಗಿದ್ದು, ಆ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ನೇತ್ರತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಚರ್ಚೆ ನಡೆಯಿತು.
ಗೋಶಾಲೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
ಕೊಲ್ಲೂರಿನಲ್ಲಿ ದೇಗುಲದ ವತಿಯಿಂದ ಗೋಶಾಲೆ ನಿರ್ಮಾಣಕ್ಕಾಗಿ ಗೋಳಿಹೊಳೆ ಹಾಗೂ ಯಳಜಿತ್ ನಲ್ಲಿ ಗೋಮಾಳ ಜಾಗವನ್ನು ಪರಿಶೀಲನೆ ನಡೆಸಿದ ಕೂರ್ಮಾರಾವ್ ಅದಕ್ಕಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ನವೀನ ಭಟ್, ದೇಗುಲದ ಕಾರ್ಯನಿರ್ವಹಣಾಧಿಕಾರಿ ಮಹೇಶ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ, ಎಲ್ಲ ಇಲಾಖೆಯ ಅಧಿಕಾರಿಗಳು, ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ, ರತ್ನಾ ಆರ್.ಕುಂದರ್, ಸಂಧ್ಯಾ ರಮೇಶ ಉಪಸ್ಥಿತರಿದ್ದರು.
ಯುಜಿಡಿ ನಿರ್ವಹಣೆಯ ಭರವಸೆ
ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಂಡಿರುವ ನೀರು ಸರಬರಾಜು ಘಟಕದ ನಿರ್ವಹಣೆಯಲ್ಲಿ ಲೋಪವಾಗದಂತೆ ಕಾಯ್ದು ಕೊಂಡು ದೇಗುಲ ಹಾಗೂ ಗ್ರಾ.ಪಂ. ಸಹಕಾರದೊಡನೆ ಕಾರ್ಯನಿರ್ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಒ. ಡಾ| ನವೀನ ಭಟ್, ಗ್ರಾ.ಪಂ. ಅಧ್ಯಕ್ಷ ಶಿವರಾಮಕೃಷ್ಣ ಭಟ್, ಉಪ ವಿಭಾಗಾಧಿಕಾರಿ ಕೆ.ರಾಜು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಮಹೇಶ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಡಾ| ಪ್ರೇಮಾನಂದ, ಡಾ| ಪ್ರಶಾಂತ ಭಟ್, ತಾಲೂಕು ವೈದ್ಯಾಧಿಕಾರಿ ಡಾ| ರಾಜೇಶ್ವರೀ, ವಿವಿಧ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.
ಉದ್ಯಾನವನ, ಮ್ಯೂಸಿಯಂ ನಿರ್ಮಾಣಕ್ಕೆ ಸೂಚನೆ
ಅರಣ್ಯ ಇಲಾಖೆ ವತಿಯಿಂದ ಟ್ರಿ ಪಾರ್ಕ್, ದೇಗುಲದ ವತಿಯಿಂದ ಉದ್ಯಾನವನ, ಮ್ಯೂಸಿಯಂ ನಿರ್ಮಾಣಕ್ಕೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಕೊಲ್ಲೂರನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದರ ಮೂಲಕ ಸ್ವಚ್ಛ ಗ್ರಾಮ ಪರಿಕಲ್ಪನೆ ಸಾಕಾರಗೊಳಿಸಬೇಕು ಎಂದು ಹೇಳಿದರು.