Advertisement

ಐಪಿಎಲ್‌ ಇತಿಹಾಸದಲ್ಲಿ ಕನಿಷ್ಠ ಮೊತ್ತಗಳನ್ನು ದಾಖಲಿಸಿದ ತಂಡಗಳು

11:34 PM Apr 04, 2021 | Team Udayavani |

ಆರ್‌ಸಿಬಿ: 49 ಆಲೌಟ್‌!
ಐಪಿಎಲ್‌ನಲ್ಲಿ ದೊಡ್ಡ ಮೊತ್ತದ ದಾಖಲೆ ಸ್ಥಾಪಿಸಿರುವ ಆರ್‌ಸಿಬಿ ತಂಡವೇ ಅತೀ ಕಡಿಮೆ ಮೊತ್ತದ ಸಂಕಟಕ್ಕೂ ಗುರಿಯಾಗಿರುವುದು ವಿಪರ್ಯಾಸ. 2017ರ ಕೆಕೆಆರ್‌ ಎದುರಿನ ಈಡನ್‌ ಗಾರ್ಡನ್ಸ್‌ ಪಂದ್ಯದಲ್ಲಿ ಕೊಹ್ಲಿ ಪಡೆ 132 ರನ್‌ ಚೇಸ್‌ ಮಾಡುವ ಹಾದಿಯಲ್ಲಿ, ಯಾರೂ ಊಹಿಸಿರದ ರೀತಿಯಲ್ಲಿ ಜುಜುಬಿ 49 ರನ್ನಿಗೆ ಸರ್ವಪತನ ಕಂಡಿತ್ತು. ಎದುರಿಸಿದ್ದು ಕೇವಲ 9.4 ಓವರ್‌. ಯಾರೂ ಎರಡಂಕೆಯ ಗಡಿ ತಲುಪಿರಲಿಲ್ಲ. 9 ರನ್‌ ಮಾಡಿದ ಕೇದಾರ್‌ ಜಾಧವ್‌ ಅವರದೇ ಹೆಚ್ಚಿನ ಗಳಿಕೆ. ಕೋಲ್ಟರ್‌ ನೈಲ್‌, ವೋಕ್ಸ್‌ ಮತ್ತು ಗ್ರ್ಯಾಂಡ್‌ಹೋಮ್‌ ತಲಾ 3 ವಿಕೆಟ್‌ ಕಿತ್ತು ಆರ್‌ಸಿಬಿಗೆ ಮರ್ಮಾಘಾತವಿಕ್ಕಿದ್ದರು.

Advertisement

ರಾಜಸ್ಥಾನ್‌: 58ಕ್ಕೆ ಪಲ್ಟಿ
ಅದು 2009ರ ದಕ್ಷಿಣ ಆಫ್ರಿಕಾ ಆತಿಥ್ಯದ ಐಪಿಎಲ್‌. ಆಗ ರಾಜಸ್ಥಾನ್‌ ರಾಯಲ್ಸ್‌ ಹಾಲಿ ಚಾಂಪಿಯನ್‌. ಆದರೆ ತನ್ನ ಮೊದಲ ಪಂದ್ಯದಲ್ಲೇ ಆರ್‌ಸಿಬಿ ವಿರುದ್ಧ 58 ರನ್ನಿಗೆ ಕುಸಿದು ಭಾರೀ ಆಘಾತಕ್ಕೆ ಸಿಲುಕಿತು. ಕೇಪ್‌ಟೌನ್‌ ಪಂದ್ಯದಲ್ಲಿ ಆರ್‌ಸಿಬಿ 8ಕ್ಕೆ 133 ರನ್‌ ಮಾಡಿದರೆ, ಅನಿಲ್‌ ಕುಂಬ್ಳೆ ದಾಳಿಗೆ ತತ್ತರಿಸಿದ ರಾಜಸ್ಥಾನ್‌ 15.1 ಓವರ್‌ಗಳಲ್ಲಿ 58ಕ್ಕೆ ಆಲೌಟ್‌ ಆಯಿತು. ಆರ್‌ಸಿಬಿ 49ಕ್ಕೆ ದಿಂಡುರುಳುವ ತನಕ, ಮುಂದಿನ 8 ವರ್ಷಗಳ ಕಾಲ ಈ ದಾಖಲೆ ರಾಜಸ್ಥಾನ್‌ ಹೆಸರಲ್ಲೇ ಇತ್ತು. ಕುಂಬ್ಳೆ ಸಾಧನೆ 5ಕ್ಕೆ 5 ವಿಕೆಟ್‌ (3.1-1-5-5). ಪ್ರವೀಣ್‌ ಕುಮಾರ್‌, ಜೆಸ್ಸಿ ರೈಡರ್‌ ತಲಾ 2 ವಿಕೆಟ್‌ ಕಿತ್ತರು.

66ಕ್ಕೆ ಕುಸಿದ ಡೆಲ್ಲಿ
ಐಪಿಎಲ್‌ನ ಕನಿಷ್ಠ ಮೊತ್ತಕ್ಕೆ ಬಹಳಷ್ಟು ನಿದರ್ಶನ ಒದಗಿಸಿದ ಋತುವೆಂದರೆ 2017. ಆರ್‌ಸಿಬಿಯಂತೆ ಡೆಲ್ಲಿ ಡೇರ್‌ಡೆವಿಲ್ಸ್‌ ಕೂಡ ಇಂಥದೇ ಅವಮಾನಕ್ಕೆ ಸಿಲುಕಿತು; ಒಂದಲ್ಲ, ಎರಡು ಸಲ. ಮುಂಬೈ ಇಂಡಿಯನ್ಸ್‌ ವಿರುದ್ಧ 213 ರನ್‌ ಪೇರಿಸಬೇಕಾದ ಒತ್ತಡಕ್ಕೆ ಸಿಲುಕಿದ ಜಹೀರ್‌ ಖಾನ್‌ ಪಡೆ 13.4 ಓವರ್‌ಗಳಲ್ಲಿ 66ಕ್ಕೆ ಆಲೌಟಾಗಿ 146 ರನ್ನುಗಳ ಸೋಲನ್ನು ಹೊತ್ತುಕೊಂಡಿತು. ಕಣ್‌ì ಶರ್ಮ, ಹರ್ಭಜನ್‌ ಸಿಂಗ್‌ ಮತ್ತು ಲಸಿತ ಮಾಲಿಂಗ ಆತಿಥೇಯ ಡೆಲ್ಲಿ ಸರದಿಯ ಮೇಲೆ ಘಾತಕವಾಗಿ ಎರಗಿದ್ದರು. ಕರುಣ್‌ ನಾಯರ್‌ ಅವರ 21 ರನ್‌ ಡೆಲ್ಲಿ ಇನ್ನಿಂಗ್ಸಿನ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿತ್ತು.

ಡೆಲ್ಲಿಯ ಮತ್ತೂಂದು ಕುಸಿತ
2017ರಲ್ಲಿ ಮುಂಬೈ ವಿರುದ್ಧ 66ಕ್ಕೆ ಆಲೌಟಾಗುವ ಮೊದಲು ಅದೇ ಋತುವಿನ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಎದುರಿನ ಮೊಹಾಲಿ ಪಂದ್ಯದಲ್ಲೂ ಡೆಲ್ಲಿಯ ಬ್ಯಾಟಿಂಗ್‌ ಬಂಡವಾಳ ಬಯಲಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದೂ 17.1 ಓವರ್‌ಗಳಲ್ಲಿ 67 ರನ್ನಿಗೆ ಗಂಟುಮೂಟೆ ಕಟ್ಟಿತ್ತು. ಸಂದೀಪ್‌ ಶರ್ಮ 4, ಅಕ್ಷರ್‌ ಪಟೇಲ್‌ ಮತ್ತು ವರುಣ್‌ ಆರೋನ್‌ ತಲಾ 2 ವಿಕೆಟ್‌ ಕೆಡವಿ ಡೆಲ್ಲಿ ಕತೆ ಮುಗಿಸಿದ್ದರು. 18 ರನ್‌ ಮಾಡಿದ ಕೋರಿ ಆ್ಯಂಡರ್ಸನ್‌ ಅವರದೇ ಹೆಚ್ಚಿನ ಗಳಿಕೆ. ಪಂಜಾಬ್‌ ತಂಡ 7.5 ಓವರ್‌ಗಳಲ್ಲಿ ನೋಲಾಸ್‌ ಗೆಲುವನ್ನು ಸಾಧಿಸಿತು.

67 ರನ್ನಿಗೆ ಉದುರಿದ ಕೆಕೆಆರ್‌
ಇದು 2008ರ ಚೊಚ್ಚಲ ಆವೃತ್ತಿಯ ಕತೆ. ವಾಂಖೇಡೆಯಲ್ಲಿ ಆತಿಥೇಯ ಮುಂಬೈ ವಿರುದ್ಧ ಸೌರವ್‌ ಗಂಗೂಲಿ ನಾಯಕತ್ವದ ಕೋಲ್ಕತಾ ನೈಟ್‌ರೈಡರ್ ಮೊದಲು ಬ್ಯಾಟಿಂಗ್‌ ನಡೆಸುತ್ತಿದ್ದ ವೇಳೆ 15.2 ಓವರ್‌ಗಳಲ್ಲಿ 67 ರನ್ನಿಗೆ ಕುಸಿದು ಅಚ್ಚರಿ ಹುಟ್ಟಿಸಿತ್ತು. ಶಾನ್‌ ಪೋಲಕ್‌ 12ಕ್ಕೆ 3 ಮತ್ತು ಡ್ವೇನ್‌ ಬ್ರಾವೊ 13ಕ್ಕೆ 2 ವಿಕೆಟ್‌ ಕಿತ್ತು ಕೋಲ್ಕತಾವನ್ನು ಹಳಿ ತಪ್ಪಿಸಿದ್ದರು. ಕೂಟದ ಮೊದಲ ಪಂದ್ಯದಲ್ಲೇ 158 ರನ್‌ ಬಾರಿಸಿದ್ದ ಮೆಕಲಮ್‌ ಇಲ್ಲಿ ಆಡಿರಲಿಲ್ಲ. ಗಂಗೂಲಿ ಮತ್ತು ಅಗರ್ಕರ್‌ ತಲಾ 15 ರನ್‌ ಹೊಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next