Advertisement

ತಗ್ಗದ ಮಳೆ ಆರ್ಭಟಕ್ಕೆ ತಬ್ಬಿಬ್ಟಾದ ನಗರ

11:53 AM Sep 11, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ತಗ್ಗಿಲ್ಲ. ಶನಿವಾರ ಇಡೀ ರಾತ್ರಿ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯವಸ್ಥವಾಗಿದೆ. ಹಲವು ಕೆರೆಗಳು ತುಂಬಿ ಕೋಡಿ ಬಿದ್ದವೆ. ಕೆಲವೆಡೆ ಹತ್ತಾರು ವಾಹನಗಳು ಮುಳುಗಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. 

Advertisement

ನಗರದ ಹಲವು ರಸ್ತೆಗಳು ಕೆರೆಗಳಂತಾಗಿದ್ದವು. ಇನ್ನು ಶನಿವಾರ ಒಂದೇದಿನ 40ಕ್ಕೂ ಹೆಚ್ಚು ಮರಗಳು ಧರೆಗುರುಳಿದವು. ಬಿದ್ದ ಮರಗಳನ್ನು ತೆರವುಗೊಳಿಸುವುದು ವಿಳಂಬವಾದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕೆರೆಗಳು ಹಾಗೂ ಕಾಲುವೆಗಳು ತುಂಬಿ ಹರಿದು ಮಳೆ ನೀರು ರಸ್ತೆಯಲ್ಲೇ ಹರಿಯಿತು.

ವೃಷಭಾವತಿ, ಕೋರಮಂಗಲ ರಾಜಕಾಲುವೆಗಳು ತುಂಬಿ ಹರಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳು ಸಮಸ್ಯೆಗೆ ಒಳಗಾವು. ಕೆಂಗೇರಿಯ ಸಮೀಪದ ದುಬಾಸಿಪಾಳ್ಯ ಹಾಗೂ ಕೊಮ್ಮಘಟ್ಟ ಕೆರೆಗಳ ಕೋಡಿ ಒಡೆದ ಹಿನ್ನೆಲೆಯಲ್ಲಿ ಆ ಭಾಗದ ರಸ್ತೆಗಳೆಲ್ಲ ಕೆರೆಗಳಂತಾಗಿದ್ದವು.

ಮೈಸೂರು ಕಡೆಯಿಂದ ನಗರಕ್ಕೆ ಬರುತ್ತಿದ್ದ ಬಸ್‌ ಅರ್ಧ ಮುಳುಗಿದ್ದರಿಂದ 36ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿ ಸಾವು-ಬದುಕಿನ ಹೋರಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುವ ಮೂಲಕ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ರಕ್ಷಿಸಿ, ಬೋಟ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. 

ಆರು ಅಡಿಯಷ್ಟು ನೀರು
ಇದರೊಂದಿಗೆ ಮೈಸೂರು ರಸ್ತೆಯ ಬಿಡಿಎ ಎನ್‌ಕ್ಲೇವ್‌ ಮುಂಭಾಗದ ರಾಜಕಾಲುವೆಗೆ  ಟಾಟಾ ಏಸ್‌ ವಾಹನವೊಂದು ಕೊಚ್ಚಿ ಹೋಗಿದೆ ಎನ್ನಲಾಗಿದೆ. ಇಲ್ಲಿ ಮೆಟ್ರೋ ಎರಡನೇ ಹಂತದ ಕಾಮಗಾರಿ ನಡೆಯುತ್ತಿರುವುದರಿಂದ ವೃಷಭಾವತಿ ಕಾಲುವೆಯಲ್ಲಿ ತಡೆ ಉಂಟಾಗಿದ್ದು, ರಸ್ತೆಯಲ್ಲಿ ಸುಮಾರು 6 ಅಡಿಯಷ್ಟು ನೀರು ನಿಂತಿತ್ತು.

Advertisement

ಗೋಡೆ ಹತ್ತಿದ ನಿವಾಸಿಗಳು
ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಸುಮಾರು ನಾಲ್ಕು ಅಡಿಯಷ್ಟು ನೀರು ನಿಂತಿದ್ದರಿಂದಾಗಿ ನಿವಾಸಿಗಳು ತಮ್ಮದೇ ಮನೆಗಳಿಗೆ ಗೋಡೆ ಹಾಗೂ ಗೇಟುಗಳನ್ನು ಹಾರಬೇಕಾಯಿತು. ಇದರೊಂದಿಗೆ ಮನೆಯಲ್ಲಿ ಸೇರಿದ್ದ ಕೊಳಚೆ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದರು. 

ಮನೆ -ಗೋಡೆ ಕುಸಿತ
ನಗರದ ಎಂಟು ವಲಯಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಭಾಗಗಳಲ್ಲಿ ಮನೆ ಹಾಗೂ ಮನೆಯ ಗೋಡೆಗಳು ಮಳೆಗೆ ಕುಸಿದು ಬಿದ್ದಿವೆ. ಆದರೆ, ಅದೃಷ್ಟವಶಾತ್‌ ಎಲ್ಲಿಯೂ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next