ಶಿವಮೊಗ್ಗ: ಮಲೆನಾಡು ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದರೆ,ಭದ್ರಾ ಡ್ಯಾಂಗೆ ಒಂದೇ ದಿನದಲ್ಲಿ 4 ಅಡಿ ನೀರು ಹರಿದುಬಂದಿದೆ.
ಗಾಜನೂರು ಜಲಾಶಯದಿಂದ 47,616 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ತುಂಗಾ ನದಿಗೆ ಜೀವಕಳೆ ಬಂದಿದ್ದು, ಶಿವಮೊಗ್ಗ ಕೋರ್ಪಲಯ್ಯ ಛತ್ರದ ಬಳಿ ಇರುವ ಮಂಟಪ ಮುಳುಗುವ ಹಂತಕ್ಕೆ ಬಂದಿದೆ.
ಒಂದೇ ದಿನ 4 ಅಡಿ ನೀರು: ಭದ್ರಾ ಜಲಾಶಯ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದ್ದು, ಮಂಗಳವಾರದ ಅಂತ್ಯಕ್ಕೆ ಭದ್ರಾ ಡ್ಯಾಂನಲ್ಲಿ 4 ಅಡಿಗಳಷ್ಟು ನೀರು ಹೆಚ್ಚಳವಾಗಿದೆ. 22,231 ಕ್ಯೂಸೆಕ್ ಒಳಹರಿವು ಇದ್ದರೆ, ಜಲಾಶಯದಿಂದ 194 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಭದ್ರಾ ಜಲಾಶಯದ ನೀರಿನ ಮಟ್ಟ 122.80 (ಗರಿಷ್ಟ 186) ಅಡಿಗೆ ತಲುಪಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 102 ಅಡಿ ನೀರಿತ್ತು.
ಪಶ್ಚಿಮಘಟ್ಟ ಪ್ರದೇಶಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯ ವ್ಯಾಪ್ತಿಯಲ್ಲಿ ವರ್ಷಧಾರೆ
ಜೋರಾಗಿದ್ದು, 18,973 ಕ್ಯೂಸೆಕ್ ಒಳಹರಿವು ಇದ್ದರೆ, 2070 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1755.80 (ಗರಿಷ್ಟ ಮಟ್ಟ 1819) ಅಡಿಗೆ ತಲುಪಿದೆ. ಕಳೆದ ವರ್ಷ ಈ
ತಿಂಗಳಲ್ಲಿ 1744.55 ಅಡಿಯಷ್ಟು ನೀರಿತ್ತು.
ಜೋಗಕ್ಕೆ ಪ್ರವಾಸಿಗರ ಲಗ್ಗೆ: ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಜಲಪಾತ ವೀಕ್ಷಿಸಲು
ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸತೊಡಗಿದ್ದಾರೆ. ತೀರ್ಥಹಳ್ಳಿ ತಾಲೂಕಿನಾದ್ಯಂತ ಒಂದೇ ಸಮನೆ ಮಳೆ
ಸುರಿಯುತ್ತಿದೆ. ತೊರೆ, ಹಳ್ಳಗಳು ಉಕ್ಕಿ ಹರಿದಿವೆ. ಕುಶಾವತಿ ನದಿ ಉಕ್ಕಿ ಹರಿದಿದ್ದು, ತೋಟ ಗದ್ದೆಗಳೆಲ್ಲ ಜಲಾವೃತಗೊಂಡಿದೆ.
ತೀರ್ಥಹಳ್ಳಿ ಪಟ್ಟಣದ ಗಾಂಧಿನಗರದಲ್ಲಿ ಧರೆ ಕುಸಿದು ಎರಡು ಮನೆ ಅಪಾಯ ಭೀತಿ ಎದುರಿಸುತ್ತಿವೆ. ಭಾರತೀಪುರ
ಸಮೀಪ ರಾಷ್ಟ್ರೀಯ ಹೆದ್ದಾರಿ ಬಿರುಕು ಬಿಟ್ಟಿದ್ದು, ಸಂಚಾರಕ್ಕೆ ತೊಂದರೆಯುಂಟಾಗಿದೆ. ಕುರುವಳ್ಳಿಯಲ್ಲಿ ಧರೆ ಕುಸಿದು
ಶಿಲ್ಪಕಲಾಕೇಂದ್ರಕ್ಕೆ ಅಪಾಯ ಎದುರಾಗಿದೆ.ಇತ್ತ ಮಂಡಗದ್ದೆ ಪಕ್ಷಿಧಾಮದಲ್ಲಿ ಹಕ್ಕಿಗಳ ಗೂಡು ಹಾಗೂ ಮೊಟ್ಟೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ.ಸಂತಾನಾಭಿವೃದ್ಧಿಗೆಂದು ದೇಶವಿದೇಶಗಳಿಂದ ಆಗಮಿಸುವ ಬಾನಾಡಿಗಳು ತೊಂದರೆಗೆ ಸಿಲುಕಿವೆ.
ತೀರ್ಥಹಳ್ಳಿಯಲ್ಲಿ ಅತಿ ಹೆಚ್ಚು ಮಳೆ: ಮಂಗಳವಾರ ಬೆಳಗ್ಗೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 48.66 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು 231.80 ಮಿ.ಮೀ. ಮಳೆಯಾಗಿದೆ. ಸಾಗರದಲ್ಲಿ 38.80 ಮಿ.ಮೀ., ಹೊಸನಗರದಲ್ಲಿ 34 ಮಿ.ಮೀ., ಸೊರಬದಲ್ಲಿ 12 ಮಿ.ಮೀ., ಭದ್ರಾವತಿ 16.60 ಮಿ.ಮೀ., ಶಿವಮೊಗ್ಗ 5.60 ಮಿ.ಮಿ., ಶಿಕಾರಿಪುರ 1.80 ಮಿ.ಮೀ. ಮಳೆಯಾಗಿದೆ.
ಜೂನ್ ತಿಂಗಳಿನಲ್ಲಿ ವಾಡಿಕೆ ಮಳೆ 390.67 ಮಿ.ಮೀ., ಇದ್ದು, ಇಲ್ಲಿಯವರೆಗೆ 199.46 ಮೀ.ಮೀ.ಮಳೆಯಾಗಿದೆ. ಈ ಬಾರಿ ವಾಡಿಕೆಯಂತೆ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಈಗಾಗಲೇ ಬಿರುಸುಗೊಂಡಿದೆ.