Advertisement

ದೀಪದ ಬೆಳಕಿದ್ದರೂ ಪಟಾಕಿ ಸದ್ದು ಕಮ್ಮಿ!

06:50 PM Nov 18, 2020 | Suhan S |

ಚಿತ್ರದುರ್ಗ: ದೀಪಾವಳಿ ಅಂದರೆ ದೀಪದ ಬೆಳಕು, ಪಟಾಕಿ ಸದ್ದು. ಆದರೆ, ಕೋವಿಡ್‌ ಕಾರಣಕ್ಕೆ ಈ ವರ್ಷದ ದೀಪಾವಳಿಯಲ್ಲಿ ದೀಪದ ಬೆಳಕಿದ್ದರೂ ಪಟಾಕಿ ಸದ್ದು ಮಾತ್ರ ವಿರಳವಾಗಿದೆ.

Advertisement

ರಾಜ್ಯ ಸರ್ಕಾರ ಪಟಾಕಿ ನಿಷೇಧಿಸಿ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಕೈ ಚೆಲ್ಲಿದ್ದಾರೆ. ಹಸಿರು ಪಟಾಕಿ ಲಭ್ಯವಾಗದ ಹಿನ್ನೆಲೆಯಲ್ಲಿ ದಶಕಗಳಿಂದ ಪಟಾಕಿ ವ್ಯಾಪಾರಮಾಡುತ್ತಿದ್ದವರು ಈ ವರ್ಷ ವ್ಯಾಪಾರ ಬಿಟ್ಟು ಸುಮ್ಮನಾಗಿದ್ದಾರೆ. ಪರವಾನಗಿಪಡೆದ ಕೆಲ ವ್ಯಾಪಾರಸ್ಥರು ಹಸಿರು ಲೋಗೊ ಇರುವ ಪಟಾಕಿಗಳ ವ್ಯಾಪಾರಕ್ಕೆ ಶನಿವಾರದಿಂದಲೇ ತೊಡಗಿದ್ದಾರೆ.

ಪಟಾಕಿ ಮಾರಾಟಕ್ಕೆ 9 ಜನರಿಗಷ್ಟೇ ಅನುಮತಿ: ಹೈಕೋರ್ಟ್‌ ಹಾಗೂ ರಾಜ್ಯ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯದಲ್ಲಿ ಸಮ್ಮತಿ ಸೂಚಿಸಿದೆ. ಹಸಿರು ಲೋಗೊ ಇರದ ಪಟಾಕಿ ಮಾರಾಟ ಮಾಡಿದಲ್ಲಿಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಇದರಿಂದಾಗಿ ಮಳಿಗೆಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತಲೂ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಚಿತ್ರದುರ್ಗ ನಗರವೊಂದರಲ್ಲೇ ಪ್ರತಿ ವರ್ಷ 18 ಮಳಿಗೆ ತೆರೆಯುತ್ತಿದ್ದವು. ಆದರೆ ಈ ಬಾರಿ 9 ಮಳಿಗೆ ಮಾತ್ರತೆರೆದಿವೆ. ಪರವಾನಗಿಗೆ ಅರ್ಜಿ ಸಲ್ಲಿಸಿದ 18 ಜನರ ಪೈಕಿ 9 ಜನರಿಗೆ ಮಾತ್ರ ಪೊಲೀಸ್‌ ಇಲಾಖೆ ಅನುಮತಿ ನೀಡಿದೆ.

ಉಳಿದ 9 ಅರ್ಜಿಗಳನ್ನು ಸರಿಯಾದ ದಾಖಲೆ ಒದಗಿಸದ ಕಾರಣಕ್ಕೆ ತಿರಸ್ಕೃತಗೊಳಿಸಲಾಗಿದೆ. ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಬಲಿಪಾಡ್ಯಮಿ ಹಬ್ಬದವರೆಗೂ ಮಾರಾಟಕ್ಕೆ ನಗರಸಭೆ ಅವಕಾಶ ಕಲ್ಪಿಸಿದೆ. ಈಗಾಗಲೇ ಮಳಿಗೆಗಳನ್ನು ನಿರ್ಮಿಸಿಕೊಂಡಿರುವ ವ್ಯಾಪಾರಸ್ಥರು ಕೋವಿಡ್‌ ಮಾರ್ಗಸೂಚಿ ಪಾಲನೆಗೂ ಮುಂದಾಗಿದ್ದಾರೆ. ಹಸಿರು ಲೋಗೊ ಇದೆಯೋ ಇಲ್ಲವೋ ಎಂಬ ಕುರಿತು ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಶನಿವಾರ

ಅಧಿಕಾರಿಗಳ ಜತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರ ಠಾಣೆ ಪೊಲೀಸರು ಕೂಡ ಮಧ್ಯಾಹ್ನ ಪರಿಶೀಲಿಸಲು ಮುಂದಾದರು. ಈ ವೇಳೆ ಹಸಿರು ಲೋಗೊ ಇರುವ ಪಟಾಕಿ ಮಾರಾಟ ಮಾಡುತ್ತಿರುವುದು ಕಂಡು ಬಂತು. ಅಂಗಡಿ ತೆರೆದ ಮೊದಲ ದಿನ ಹೇಳಿಕೊಳ್ಳುವಷ್ಟು ವ್ಯಾಪಾರ ವಹಿವಾಟು ನಡೆದಿಲ್ಲ.

Advertisement

ಸರ್ಕಾರದ ಮಾರ್ಗಸೂಚಿ ಅನುಸರಿಸದಿದ್ದರೆ, ಹಸಿರು ಲೋಗೊ ಇಲ್ಲದ ಪಟಾಕಿ ಮಾರಾಟ ಮಾಡಿರುವ ಕುರಿತು ದೂರು ಕೇಳಿ ಬಂದರೆ ಪೊಲೀಸ್‌ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಕ್ರಮ ಕೈಗೊಳ್ಳಲಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಎಚ್ಚರಿಕೆ ನೀಡಿದ್ದಾರೆ. ಪರವಾನಗಿ ಪಡೆದ ಮೂವರು ವ್ಯಾಪಾರಸ್ಥರು ಹಸಿರು ಪಟಾಕಿ ಸಿಗದ ಕಾರಣ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಈ ಬಾರಿ ಪಟಾಕಿ ಅಂಗಡಿ ತೆರೆಯುತ್ತಿಲ್ಲ ಎಂದು ಮನವಿ ಪತ್ರ ಸಲ್ಲಿಸಿರುವುದು ವಿಪರ್ಯಾಸ .

 

ವರ್ಷ ಪಟಾಕಿ ವ್ಯಾಪಾರ ನಡೆಸಲ್ಲ :  ಸತತ 17 ವರ್ಷಗಳಿಂದ  ಪಟಾಕಿ ವ್ಯಾಪಾರ ಮಾಡುತ್ತಿದ್ದ ಚಿತ್ರದುರ್ಗ ನಗರದ ರಮೇಶ್‌,ರವಿಕುಮಾರ್‌ ಹಾಗೂ ಮಂಜುನಾಥ್‌ ಎಂಬುವವರುಈ ವರ್ಷ ಹಸಿರು ಪಟಾಕಿ ಲಭ್ಯವಾಗದ ಕಾರಣ ವ್ಯಾಪಾರ ನಡೆಸುವುದಿಲ್ಲ. ಮುಂದಿನ ವರ್ಷ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಿರುವುದಾಗಿ ಕೆ.ಆರ್‌. ಮಂಜುನಾಥ “ಉದಯವಾಣಿ’ಗೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next