ಮಂಗಳೂರು: ಈ “ರಾಣಿ’ಗೆ ಸರಕಾರಿ ಕಚೇರಿಯಲ್ಲಿ ನಿತ್ಯ ಪ್ರೀತಿಯ ಆತಿಥ್ಯ. ಕಚೇರಿಯೇ ಆಕೆಯ ಅರಮನೆ. ಅದರ ಕಾವಲಿನ ಜವಾಬ್ದಾರಿಯೂ ಈಕೆಯದ್ದೇ. 11 ವರ್ಷ “ರಾಣಿ’ಯಾಗಿ ಮೆರೆದಾಕೆ ಈಗ ಮಣ್ಣಾಗಿದ್ದಾಳೆ. ಅಧಿಕಾರಿ, ಸಿಬಂದಿ ಕಣ್ಣಂಚಲ್ಲಿ ನೀರು ತರಿಸಿ ಅಚ್ಚಳಿಯದ ನೆನಪು ಉಳಿಸಿ ಹೋಗಿದ್ದಾಳೆ!
ನಗರದಲ್ಲಿರುವ ಕರ್ನಾಟಕ ಜಲಮಂಡಳಿಯ ಕಚೇರಿಯಲ್ಲಿ ಕಳೆದ 11 ವರ್ಷಗಳಿಂದ ವಾಸವಾಗಿದ್ದು, ಮೇ 21ರಂದು ಮೃತಪಟ್ಟ “ರಾಣಿ’ ಹೆಸರಿನ ನಾಯಿ ಪ್ರೀತಿಯ ನೈಜ ಕಥೆಯಿದು.
ದಶಕದ ಹಿಂದೆ ಎಲ್ಲಿಂದಲೋ ಬಂದ ಸಣ್ಣ ಮರಿಯನ್ನು ಸಿಬಂದಿ ಕಚೇರಿಯ ಒಳಗಿಟ್ಟು ಪ್ರೀತಿಯಿಂದ ಸಲಹಿದ್ದರು. ಕೊರೊನಾ ಆತಂಕದ ನಡುವೆಯೂ ರಾಣಿಯ ಮೇಲೆ ಅವರು ಹೊಂದಿದ್ದ ಗಾಢ ಸ್ನೇಹಕ್ಕೆ ಸಾಕ್ಷಿ ಎನ್ನುವಂತೆ ಅಂತ್ಯಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಜಲಮಂಡಳಿ ಕಚೇರಿ ಸಮೀಪವೇ ನೆರವೇರಿಸಲಾಗಿದೆ. ಕೆಲವು ಸಿಬಂದಿ¿ಂತೂ 13 ದಿನಗಳ ಕಾಲ ಶೋಕಾಚರಿಸಿದ್ದರು.
ಅಪರಿಚಿತರಿಗೆ ಪ್ರವೇಶವಿಲ್ಲ
ಈ ಕಚೇರಿಗೆ ಕಾವಲುಗಾರರಿದ್ದರೂ ಅವರಿಗಿಂತ ಮುಂದೆ ಇರುತ್ತಿದ್ದವಳು “ರಾಣಿ’. ಯಾರೇ ಹೊಸಬರು ಬಂದರೂ ಗದರಿಸುತ್ತಿತ್ತು. ರಾತ್ರಿ ವೇಳೆ ಅಪರಿಚಿತರಾರನ್ನೂ ಕಚೇರಿ ಬಳಿ ಸುಳಿಯಲು ಬಿಡುತ್ತಿರಲಿಲ್ಲ ಎನ್ನುತ್ತಾರೆ ಜಲಮಂಡಳಿಯ ಉದ್ಯೋಗಿಗಳು.
ಪ್ರೀತಿಯಿಂದ ನೀಡಿದರೆ ಮಾತ್ರ ಆಹಾರ ಸೇವನೆ
ರಾಣಿಯ ಜತೆಗೆ ಕಚೇರಿಯಲ್ಲಿ 4 ಬೆಕ್ಕುಗಳೂ ಇದ್ದು, ಉತ್ತಮ ಒಡನಾಟ ಹೊಂದಿತ್ತು. ಪ್ರೀತಿ ತೋರಿಸದೇ ಇರುವವರು ಎಷ್ಟೇ ಒಳ್ಳೆಯ ಆಹಾರ ನೀಡಿದರೂ ಅದನ್ನು ತಿನ್ನಲು ಒಪ್ಪುತ್ತಿರಲಿಲ್ಲ ಎಂದು ಗದ್ಗದಿತರಾಗುತ್ತಾರೆ ಇಲ್ಲಿನ ಸಿಬಂದಿ.
ಕಚೇರಿಯಿಂದ ವರ್ಗವಾಗಿ ಹೋಗುವವರು ಬೀಳ್ಕೊಡುಗೆ ಸಂದರ್ಭ “ರಾಣಿ’ಯ ಉಲ್ಲೇಖ ಮಾಡದೇ ಇರುತ್ತಿರಲಿಲ್ಲ. ಅದರ ಕರ್ತವ್ಯ ಪ್ರಜ್ಞೆ ಅಪಾರ ಎನ್ನುತ್ತಾರೆ ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್.
ಇದನ್ನೂ ಓದಿ:ಮೆಹುಲ್ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಕೋರ್ಟ್
ಹೆಸರಿಗೆ ತಕ್ಕ ನಡೆ!
ಹೆಸರಿಗೆ ತಕ್ಕಂತೆಯೇ ಈ ಶ್ವಾನದ ನಡೆಯೂ ಇತ್ತು. ಕಚೇರಿಗೆ ಹೊಸದಾಗಿ ವರ್ಗವಾಗಿ ಬರುವವರು ಕೂಡ “ರಾಣಿ’ಯನ್ನು “ನಾಯಿ’ ಎಂದು ಕರೆಯುವಂತಿರಲಿಲ್ಲ. ನೀಡುವ ಊಟ ಕೂಡ ಎಂಜಲು ಅಥವಾ ಹಳಸಿದ್ದು ಆಗಿರಬಾರದು ಎಂಬ ನಿಯಮ ಇತ್ತು. ಎಲ್ಲರೂ ತಮ್ಮ ಊಟದ ಪಾಲು ಅಥವಾ ಅದಕ್ಕೆಂದೇ ಪ್ರೀತಿಯಿಂದ ಆಹಾರ ತಂದು ಕೊಡುತ್ತಿದ್ದರು. ನಿಯಮಿತವಾಗಿ ಸ್ನಾನ, ಔಷಧೋಪಚಾರ ಮಾಡಲಾಗುತ್ತಿತ್ತು.