Advertisement

ಹೆತ್ತ ತಾಯಿಯಂತೆ ಕನ್ನಡ ಪ್ರೀತಿಸಿ: ರಕ್ಷಿತಾ

04:08 PM Dec 16, 2018 | |

ರಿಪ್ಪನ್‌ಪೇಟೆ: ನಾಡು ಎಂಬುದು ನೆಲ, ಜಲ, ಬೆಟ್ಟ, ಕಾಡು ಇತ್ಯಾದಿಗಳನ್ನೊಳಗೊಂಡ ಭೂಭಾಗ ಮಾತ್ರವಲ್ಲ. ಇವುಗಳೊಂದಿಗೆ ಭಾಷೆ, ಸಾಹಿತ್ಯ, ಕಲೆ, ಇತಿಹಾಸ, ಆಚಾರ-ವಿಚಾರಗಳು ನಾಡಿನ ಕಲ್ಪನೆಯಲ್ಲಿ ಹಾಸುಹೊಕ್ಕಾಗಿವೆ ಎಂದು ಹೊಸನಗರ ತಾಲೂಕು 4ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ರಕ್ಷಿತ ತಿಳಿಸಿದರು. 

Advertisement

ಸಮೀಪದ ಹೊಂಬುಜದ ಪದ್ಮಾಂಬಾ ಶಾಲಾ ಆವರಣದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರಾಪಂ ಹೊಂಬುಜ, ಅಮೃತ, ಹೆದ್ದಾರಿಪುರ ಮತ್ತು ಶ್ರೀ ಪದ್ಮಾಂಬಾ ಪ್ರೌಢಶಾಲೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹೊಸನಗರ ತಾಲೂಕು 4ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

 ತಾಯಿನೆಲ ಮತ್ತು ಮಾತೃಭಾಷೆಯನ್ನು ಅರಿಯುವುದು, ಗೌರವಿಸುವುದು, ಉಳಿಸಿ-ಬೆಳಸಲು ಯತ್ನಿಸುವುದು ಹಾಗೂ
ನಾಡಿನ ಸಮಗ್ರ ಪ್ರಗತಿಯ ಬಗ್ಗೆ ಹೆಮ್ಮಪಟ್ಟು ಸಂಭ್ರಮಿಸುವದನ್ನೇ ನಾಡಪ್ರೇಮ ಎಂಬ ಶಬ್ದದಲ್ಲಿ ಹೇಳಬಹುದಾಗಿದೆ. ನಮ್ಮ ಸಂಸ್ಕೃತಿಯನ್ನು ಶ್ರೇಷ್ಠವಾಗಿಸಬೇಕಾದಲ್ಲಿ ಹೆತ್ತ ತಾಯಿಯನ್ನು ಭಾವನಾತ್ಮಕವಾಗಿ ಪ್ರೀತಿಸುವಂತೆ ಜೀವನ ಪರ್ಯಂತ ಪೊರೆವ ಹೊತ್ತ ತಾಯಿಯನ್ನು ಸಹ ಪ್ರೀತಿಸಬೇಕು ಎಂಬುದು ನನ್ನ ಅನಿಸಿಕೆ. ತಲೆ ಎತ್ತಿ ನಿಂತು ಹೇಳಬಲ್ಲ ಹಿರಿಗರಿಮೆಗಳು ಕನ್ನಡಮ್ಮನಿಗೆ ಹೇರಳವಾಗಿದೆ. ಆದರೆ ಹೇಳಬಲ್ಲ ಮನಸ್ಸು, ಆತ್ಮವಿಶ್ವಾಸಗಳಿರಬೇಕು ಎಂದರು.

ನಮ್ಮ ಭಾಷೆ ಒಂದೂವರೆ ಸಾವಿರ ವರ್ಷಗಳ ಪ್ರಾಚೀನತೆ ಹೊಂದಿದ್ದು, ಕವಿಗಳ ಪರಂಪರತೆಯ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಘಟ್ಟಗಳಲ್ಲಿ ಬೆಳೆದುಬಂದ ಕನ್ನಡ ಸಾಹಿತ್ಯವು ಸಮೃದ್ಧವಾಗಿದೆ, ಸಮರ್ಥವಾಗಿದೆ. ಸುಂದರವಾದ ಅಕ್ಷರಗಳನ್ನು ಹೊಂದಿರುವ ಪ್ರಪಂಚದ ವಿವಿಧ ಭಾಷೆಗಳ ಗುಂಪಿನಲ್ಲಿ ಕನ್ನಡ ಭಾಷೆಯು ಹೊಳೆಯುವ ನಕ್ಷತ್ರದಂತಿರುವುದು ಹೆಮ್ಮೆಯ ಸಂಗತಿಯಲ್ಲವೇ? ನಮ್ಮ ನಾಡಿನ ಹಳ್ಳಿಗರಿಂದ ರಚಿತವಾಗಿರುವ ಜನಪದ ಮಹಾಕಾವ್ಯಗಳು ಕೂಡ ಪ್ರಪಂಚದ ಗಮನ ಸೆಳೆದಿದೆ. ಮಲೆಯ ಮಾದಯ್ಯನ ಜನಪದ ಕಾವ್ಯ, ಮಂಟೆಸ್ವಾಮಿ ಮಹಾಕಾವ್ಯಗಳು ಪ್ರಪಂಚದಲ್ಲಿ ಅಧ್ಯಯನಶೀಲ ಸಾಹಿತ್ಯಗಳಾಗಿವೆ. ನಮ್ಮೆಲ್ಲರನ್ನುಒಗ್ಗೂಡಿಸಿ ಇಡಬಲ್ಲ ಮೂಲ ತಂತು ಕನ್ನಡ ಭಾಷೆ. ಈ ಭಾಷೆಯ ಬಗ್ಗೆ ನಮಗೆ ಪ್ರೀತಿ, ಕಾಳಜಿ ಇರಬೇಕು. ಜನಬಳಕೆಯಿಂದ ಭಾಷೆ ಬಲವಾಗುತ್ತದೆ. ಪ್ರೀತಿ, ಕಾಳಜಿ ಬಳಕೆಗಳು ಇಲ್ಲದಿದ್ದರೆ ಭಾಷೆ ದುರ್ಬಲವಾಗುತ್ತದೆ.

ಭಾಷೆ ದುರ್ಬಲವಾದರೆ ನಾಡಿನ ಸಂಸ್ಕೃತಿಯ ಶಕ್ತಿಯೆ ಸೊರಗಿ ಹೋಗುತ್ತದೆ. ಇದನ್ನರಿತ ನಾವು ಭಾಷಾ
ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ. ಸಾಹಿತ್ಯ ಸಮ್ಮೇಳನ ಅರಿವಿನ ಕಿಡಿಯನ್ನು ಮಾತ್ರ ನೀಡಬಲ್ಲದು ಆ ಕಿಡಿಯಿಂದ ಮನದ ದೀಪವನ್ನು ಜ್ವಲಿಸುವಂತೆ ಮಾಡಿಕೊಳ್ಳುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದರು ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹೊಂಬುಜ ಜೈನಮಠದ ಸ್ವಸ್ತಿಶ್ರೀ ಜಗದ್ಗುರು ಶ್ರೀ ಡಾ| ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಕನ್ನಡದಂತಹ ಅಪೂರ್ವ ಭಾಷೆಯ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯರು. ಅನಾದಿ ಕಾಲದಿಂದ ಬಂದ ಆದಿಕವಿ ಪಂಪರಿಂದ ಆರಂಭವಾದ ಸಾಹಿತ್ಯ ಕ್ಷೇತ್ರ ಇಂದಿನವರೆಗೆ ಅಜರಾಮರವಾಗಿ ಉಳಿದಿರುವುದು ಕನ್ನಡದ ಕಸುವನ್ನು ತೋರಿಸುತ್ತದೆ. ಸಾಹಿತ್ಯ ಸಂಸ್ಕೃತಿಗೆ ಹಾಗೂ ಸಾಹಿತಿಗಳಿಗೆ ಆಶ್ರಯ ನೀಡಿದ ಕ್ಷೇತ್ರ ಹೊಂಬುಜ.

Advertisement

ಕನ್ನಡ ಭಾಷೆಯಲ್ಲಿರುವ ಪ್ರಕಾರಗಳು ಇನ್ಯಾವ ಭಾಷೆಯಲ್ಲಿಯೂ ಕಾಣಲು ಸಾಧ್ಯವಿಲ್ಲ. ಸಂಸ್ಕೃತ, ಇಂಗ್ಲಿಷ್‌ ನೊಂದಿಗೆ ಪ್ರತಿಸ್ಪರ್ಧೆಯೊಡ್ಡಿಯೂ ಇಂದು ಕನ್ನಡ ಭಾಷೆ ಹೆಮ್ಮರವಾಗಿದೆ. ಕಲೆ, ಸಾಹಿತ್ಯ, ಸಂಗೀತ ಆಸಕ್ತಿಯಿಲ್ಲದವನು ಪಶುವಿಗೆ ಸಮ ಎಂಬ ಸುಭಾಷಿತಕಾರರ ವಿಷಯದಂತೆ ಎಲ್ಲರೂ ಭಾಷೆಯನ್ನು ಪ್ರೀತಿಸಿ, ನಾಡಿನ ಹಿರಿಮೆಯನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು. ಬೆಳಗ್ಗೆ ಗ್ರಾಪಂ ಕಚೇರಿಯಿಂದ ಸಭಾಂಗಣದವರೆಗೆ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಪಂ ಸದಸ್ಯೆ ಶ್ವೇತಾಬಂಡಿ ಚಾಲನೆ ನೀಡಿದರು.

ನಂತರ ಧ್ವಜಾರೋಹಣಕ್ಕೆ ತಹಶೀಲ್ದಾರ್‌ ಚೆಂದ್ರಶೇಖರ ನಾಯ್ಕ ಚಾಲನೆ ನೀಡಿದರು. ನಾಡಧ್ವಜಾರೋಹಣವನ್ನು ತಾಪಂ ಅಧ್ಯಕ್ಷ ವಾಸಪ್ಪಗೌಡ ನೆರವೇರಿಸಿದರು.

 ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ಶಾಲೆ ಸಮಟಗಾರು ವಿದ್ಯಾರ್ಥಿಗಳಿಂದ ನಾಡಗೀತೆ, -ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಂಚ ಇವರಿಂದ ರೈತಗೀತೆ ನಡೆಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಲ್ಲೇಶ್ವರ
ಇವರಿಂದ ಕನ್ನಡ ಗೀತೆ ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಕಿರುತೆರೆ ಸಂಗೀತ ಕಲಾವಿದೆ ಸುಹಾನ ಸೈಯದ್‌ ನೆರವೇರಿಸಿದರು. ಸಮ್ಮೇಳನ ಅಧ್ಯಕ್ಷರ ಪರಿಚಯವನ್ನು ನಂದನ ಮಾಡಿದರು. ತಾಲೂಕು ಕಸಾಪ ಅಧ್ಯಕ್ಷ ಕೆ. ಇಲಿಯಾಸ್‌, ತಾಪಂ ಅಧ್ಯಕ್ಷ ವಾಸಪ್ಪ ಗೌಡ, ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ, ದೈಹಿಕ ಪರಿವೀಕ್ಷಕ ಈಶ್ವರಪ್ಪ, ಪದ್ಮಾಂಬ ಪ್ರೌಢಶಾಲೆ ಮುಖ್ಯ ಶಿಕ್ಷಕ ನಾಗರಾಜ, ಗಂಗಾಧರಯ್ಯ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next