ಆಗ ಬರುತ್ತೆ, ಈಗ ಬರುತ್ತೆ ಅಂತ ಎಲ್ಲರೂ ಕಾಯುತ್ತಲೇ ಇದ್ದರು. ಅದ್ಯಾರೋ, “ಅಲ್ನೋಡಿ ಬಂತು’ ಅಂತ ಕೂಗಿದರು. ದೂರದಲ್ಲೆಲ್ಲೋ ಒಂದು ಸಣ್ಣ ಹಕ್ಕಿ ಹಾರಿ ಬರುವಂತೆ ಕಾಣುತಿತ್ತು. ಹತ್ತಿರ ಬರ್ತಾ ಬರ್ತಾ ಅದು ಹಕ್ಕಿಯಲ್ಲ, ಹೆಲಿಕಾಫ್ಟರ್ ಅಂತ ಸ್ಪಷ್ಟವಾಯ್ತು. ಹತ್ತಿರ ಬಂದ ಹೆಲಿಕಾಫ್ಟರ್ ಮೂರು ಸುತ್ತು ತಿರುಗಿ, ನಿಗದಿಯಾಗಿದ್ದ ಸ್ಥಳದಲ್ಲಿ ಲ್ಯಾಂಡ್ ಆಯ್ತು. “ಉಪ್ಪಿ ಇದ್ದಾರಾ ನೋಡಿ …’ ಅಂತ ಎಲ್ಲರೂ ಕುತೂಹಲದಿಂದ ನೋಡುವಾಗ, ಉಪೇಂದ್ರ ಕ್ಯಾರಾವಾನ್‌ನಿಂದ ಇಳಿದು ಹೆಲಿಕಾಫ್ಟರ್ ಹತ್ತಿರ ಬಂದರು.
ಅಲ್ಲಿಂದ ಶುರುವಾಯ್ತು ನೋಡಿ. ಅಲ್ಲಿಯವರೆಗೂ ಉಪೇಂದ್ರ ಅವರ ಇಂಟ್ರೊಡಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲು ಕಾದಿದ್ದ ತಂಡ, ತಕ್ಷಣ ಅಲರ್ಟ್ ಆಯಿತು. ಅಲ್ಲೊಂದು ಕ್ಯಾಮೆರಾ, ಇಲ್ಲೊಂದು ಜಿಮ್ಮಿ, ಮತ್ತೂಂದು ಕಡೆ ಡ್ರೋನ್ … ಹೀಗೆ ಮೂರೂರು ಕ್ಯಾಮೆರಾಗಳು ಉಪೇಂದ್ರ ಮತ್ತು ಸಂಗಡಿಗರ ಹಲವು ಶಾಟ್‌ಗಳನ್ನು ಚಿತ್ರೀಕರಿಸಿಕೊಳ್ಳತೊಡಗಿದವು. ಸುಮಾರು ಒಂದೂವರೆ ಗಂಟೆ ಒಂದಿಷ್ಟು ಶಾಟ್‌ಗಳನ್ನ ಕಲೆಹಾಕಿದ ಚಂದ್ರು, ತಂಡದವರಿಗೆ 10 ನಿಮಿಷದಲ್ಲಿ ಊಟ ಮುಗಿಸುವುದಕ್ಕೆ ಹೇಳಿ ಮಾತಿಗೆ ಬಂದು ಕೂತರು.
ಅದು “ಐ ಲವ್ ಯೂ’ ಚಿತ್ರದ ಚಿತ್ರೀಕರಣ. ಹೆಲಿಕಾಫ್ಟರ್‌ನಿಂದ ಉಪೇಂದ್ರ ಲ್ಯಾಂಡ್ ಆಗುವ ದೃಶ್ಯವನ್ನು ನೈಸ್ ರಸ್ತೆಯಲ್ಲಿ ಚಿತ್ರೀಕರಿಸುತ್ತಿದ್ದರು ಚಂದ್ರು. “ಈ ದೃಶ್ಯವನ್ನು ಸಿಟಿಯಲ್ಲಿ ಪ್ಲಾನ್ ಮಾಡಿದ್ದೆವು. ಆದರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಕೊನೆಗೆ ಇಲ್ಲಿ ಪ್ಲಾನ್ ಮಾಡಬೇಕಾಯ್ತು. ನಾಯಕನ ಇಂಟ್ರೊಡಕ್ಷನ್ ಇದು. ಇಲ್ಲಿ ನಾಯಕ ಸಂತೋಷ್ ನಾರಾಯಣ್ ದೊಡ್ಡ ಬಿಝಿನೆಸ್‌ಮ್ಯಾನ್. ಅವನ ರೇಂಜ್‌ಗೆ ತಕ್ಕ ಹಾಗೆ ಪರಿಚಯಿಸಬೇಕಿತ್ತು. ಛಾಯಾಗ್ರಾಹಕ ಸುಜ್ಞಾನ್ ಅವರ ಸಹಕಾರದಿಂದ ಕ್ಲಾಸ್ ಆಗಿ ಚಿತ್ರೀಕರಣ ಮಾಡಲಾಗುತ್ತಿದೆ. ಇದರ ನಂತರ ವಿನೋದ್ ಮಾಸ್ಟರ್ ಅವರ ಸಾಹಸ ನಿರ್ದೇಶನದಲ್ಲಿ ಫೈಟ್ ಮುಂದುವರೆಯಲಿದೆ. ಮುಂಬೈನಿಂದ ಫೈಟರ್ ಬಂದಿದ್ದಾರೆ. ಬಹಳ ಸ್ಟೈಲಿಶ್ ಆಗಿರುತ್ತದೆ’ ಎಂದರು.
ಉಪೇಂದ್ರ ಹೆಚ್ಚು ಮಾತನಾಡಿಲಿಲ್ಲ. “ಬಹಳ ಸ್ಟೈಲಿಶ್ ಆಗಿ ಮೂಡಿಬರುತ್ತಿದೆ. ಟೇಕಿಂಗ್ಸ್ ಚೆನ್ನಾಗಿದೆ. ದೃಶ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮಿಕ್ಕಿದ್ದೆಲ್ಲಾ ನಿಮಗೆ ಗೊತ್ತಿದೆ’ ಎಂದರು. ಪಕ್ಕದಲ್ಲಿದ್ದ ಸುಜ್ಞಾನ್ ಸಹ, “ಉಪೇಂದ್ರ ಮತ್ತು ಚಂದ್ರು ಒಟ್ಟಿಗೆ ಕೆಲಸ ಮಾಡುತ್ತಿರುವ ಚಿತ್ರ. ಕಂಟೆಂಟ್ ಸಹ ಚೆನ್ನಾಗಿದೆ. ಒಂದಿಷ್ಟು ತಯಾರಿ ನಡೆಸಿ ಚಿತ್ರೀಕರಣ ಮಾಡುತ್ತಿದ್ದೇವೆ’ ಎಂದರು. ಇನ್ನು ಈ ಫೈಟ್ ಚೈನೀಸ್ ಫೀಲ್‌ನಲ್ಲಿ ಇರುತ್ತದೆ ಎನ್ನುವುದರ ಜೊತೆಗೆ, “ನಾಯಕನನ್ನ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡುತ್ತಿದ್ದೀವಿ’ ಎಂದರು. ಮುಂದೆ ಮಾತಾಡುವವರಿರಲಿಲ್ಲ. ತಕ್ಷಣ ಚಂದ್ರು ಮತ್ತು ಉಪೇಂದ್ರ ಇಬ್ಬರೂ ಚಾಪರ್‌ನತ್ತ ಹೊರಟರು. ಸುಜ್ಞಾನ್ ಕ್ಯಾಮೆರಾ ಹಿಂದೆ ಪ್ರತಿಷ್ಠಾಪನೆಯಾದರು. ಕ್ಯಾಮೆರಾ, ಆ್ಯಕ್ಷನ್ ಮುಂದುವರೆಯಿತು.
ಚೇತನ್ ನಾಡಿಗೇರ್