ಉಳ್ಳಾಲ: ವರ್ಷದ ಸಾಮರ್ಥ್ಯವನ್ನು ಮೂರು ಗಂಟೆಗಳಲ್ಲಿ ಅಳೆಯುವಂತಹ ಪ್ರಬಲ ಮಾಧ್ಯಮ ಪರೀಕ್ಷೆಯಾಗಿದ್ದು, ಇದೊಂದು ಜೀವನದ ಹಂತ, ಅದನ್ನು ಪ್ರೀತಿಯಿಂದ ಎದುರಿಸುವ ಮನಃಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್.ರವಿ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಆಶ್ರಯದಲ್ಲಿ ತೊಕ್ಕೊಟ್ಟು ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ಮಂಗಳವಾರ ಉಳ್ಳಾಲ ವಲಯ ವ್ಯಾಪ್ತಿಯ ಅನುದಾನ ಹಾಗೂ ಅನುದಾನ ರಹಿತ ಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪರೀಕ್ಷೆ ಪೂರ್ವ ತಯಾರಿ ಹಾಗೂ 2017ರ ಎಸೆಸೆಲ್ಸಿ ಟಾಪರ್ ವಿದ್ಯಾರ್ಥಿಗಳಿಗೆ ಸಮ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ದ.ಕ. ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್, ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಅಧ್ಯಕ್ಷ ಅನ್ವರ್ ಹುಸೈನ್ ಮಾತನಾಡಿದರು. ದ.ಕ. ಡಿಡಿಪಿಐ ಶಿವರಾಮಯ್ಯ, ಮಂಗಳೂರು ದಕ್ಷಿಣ ಬಿಇಒ ಲೋಕೇಶ್, ಮಂಗಳೂರು ದಕ್ಷಿಣ ವಲಯ ಶಿಕ್ಷಣ ಸಂಯೋಜಕಿ ಗೀತಾ ಶ್ಯಾನುಭೋಗ್, ಶಿಕ್ಷಕ ಯಾಕೂಬ್ ಕೊಯ್ಯೂರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು ಅವರು ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಮ್ಮಾನಿಸಿದರು. ನಗರಸಭೆಯ ಪೌರಾಯುಕ್ತೆ ವಾಣಿ ವಿ. ಆಳ್ವ ಮುಖ್ಯ ಅತಿಥಿಯಾಗಿದ್ದರು.
ಶಿಕ್ಷಣ ಸಂಯೋಜಕಿ ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ ಹಾಗೂ ಶಿಕ್ಷಣ ಸಂಯೋಜಕ ಫ್ರಾನ್ಸಿಸ್ ಮಿನೇಜಸ್ ಅವರನ್ನು ಸಮ್ಮಾನಿಸಲಾಯಿತು. ಮುಖ್ಯಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.
ಆತ್ಮ ವಿಶ್ವಾಸ ಅಗತ್ಯ
ವಿದ್ಯಾರ್ಥಿಗಳು ಕಲಿಕೆ ವೇಳೆ ಬರೆಯುವ ಅಭ್ಯಾಸ ಬೆಳೆಸಿಕೊಳ್ಳ ಬೇಕು. ಪ್ರಮುಖ ಅಂಶಗಳನ್ನು ದಾಖಲಿಸಿಕೊಂಡಾಗ ಪರೀಕ್ಷೆಯಲ್ಲಿ ಅನಿರೀಕ್ಷಿತ ಗೊಂದಲ, ಆತಂಕ ದೂರವಾಗಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಾಧ್ಯ. ವಿದ್ಯಾರ್ಥಿ ಗಳು ಹೆತ್ತವರು, ಶಿಕ್ಷಕರ ಜತೆಗೆ ಚರ್ಚಿಸುತ್ತಾ ಸಂಶಯಗಳನ್ನು ನಿವಾರಿಸುತ್ತಾ ಪರೀಕ್ಷೆಗಳನ್ನು ಎದುರಿಸಿ.
– ಡಾ| ಎಂ.ಆರ್. ರವಿ
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಜಿಲ್ಲಾ ಪಂಚಾಯತ್