Advertisement

ಪ್ರೀತಿಯ ಪ್ರತಿಫ‌ಲ ಪ್ರೀತಿಯೇ !

06:00 AM Jul 06, 2018 | |

ಮನುಷ್ಯನೆಂದರೆ ವಿಚಿತ್ರ ಜೀವಿ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೂ ಅವನಲ್ಲಿವೆ. ಪ್ರೀತಿ, ಕರುಣೆ, ಸಹನೆಗಳೂ ಅವನಲ್ಲಿ ತುಂಬಿರುತ್ತವೆ. ಪ್ರತಿಯೊಬ್ಬರ ಮನಸ್ಸೂ ಒಂದೇ ರೀತಿ ಇರುವುದಿಲ್ಲ. ಎಲ್ಲರೂ ದುಷ್ಟರೂ ಅಲ್ಲ ಎಲ್ಲರೂ ಸಜ್ಜನರೂ ಅಲ್ಲ. ಕೆಲವರು ಸುರರಾದರೆ ಇನ್ನು ಕೆಲವರು ಅಸುರೀ ಪ್ರವೃತ್ತಿಯವರು.

Advertisement

ಒಬ್ಬ ಮನುಷ್ಯ ಯಾಕೆ ಕೆಟ್ಟವನಾಗುತ್ತಾನೆ ಅಥವಾ ಒಬ್ಬ ಮನುಷ್ಯ ಯಾಕೆ ಒಳ್ಳೆಯವನಾಗಿರುತ್ತಾನೆ ಎಂಬುದು ಬಹಳ ಕುತೂಹಲಕರವಾದ ಸಂಗತಿಯಾಗಿದೆ. ಮನುಷ್ಯನ ನಡವಳಿಕೆಗಳಿಗೆಲ್ಲ ಕಾರಣ ಹುಟ್ಟಿನಲ್ಲಿಯೇ ಇರುತ್ತದೆಯೋ, ಹುಟ್ಟಿದ ಬಳಿಕ ಸಿಗುವ ಪರಿಸರದಲ್ಲಿಯೇ ಇರುತ್ತದೆಯೋ ಎಂಬುದು ನಿಖರವಾಗಿ ಹೇಳಲಾಗದಂಥ ವಿಚಾರವಾಗಿದೆ.

ಬಾಲ್ಯದಲ್ಲಿ ಒಬ್ಬನು ಬೆಳೆಯುವ ಪರಿಸರದಲ್ಲಿ ಒಳ್ಳೆಯ ಗುಣಗಳ ವ್ಯಕ್ತಿಗಳ ಸಂಪರ್ಕ ಆಗಬಹುದು. ಆದ್ದರಿಂದ ಅದೇ ಅವನನ್ನು ಒಳ್ಳೆಯವನನ್ನಾಗಿ ಬೆಳೆಸಬಹುದು. ಬಾಲ್ಯದಲ್ಲಿ ಕೆಟ್ಟವರ ಸಹವಾಸ ಸಿಕ್ಕಿದರೆ ಅದು ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ.

ಒಬ್ಟಾತ ಕುಡುಕನಿದ್ದಾನೆ ಎಂದು ಭಾವಿಸಿ. ಆತ ಕೆಟ್ಟವನಾಗಿದ್ದಾನೆಂದು ಹೇಳಲಾಗದು. ವ್ಯಸನಿಗಳು ಅವರವರಿಗೆ ಶತ್ರುಗಳೇ ಹೊರತು ಹೊರಗಿನವರಿಗೆ ದುಷ್ಟರೇನೂ ಅಲ್ಲ. ಕೆಲವರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಆದರೆ, ಅವರು ಸಜ್ಜನರೆಂದು ಹೇಳಲಾಗದು. ಕೆಲವರು ಬಾಹ್ಯದಲ್ಲಿ ಹೇಗಿರುತ್ತಾರೋ ಅವರು ಅಂತರಂಗದಲ್ಲಿಯೂ ಇರುತ್ತಾರೆಂದು ಹೇಳಲಾಗದು. ಬಹಿರಂಗದಲ್ಲಿ ಶುದ್ಧಿ ಇಲ್ಲದಿದ್ದರೂ ಅಂತರಂಗದಲ್ಲಿ ಶುದ್ಧಿ ಇಲ್ಲದಿದ್ದರೆ ಅದರಿಂದ ಏನೂ ಪ್ರಯೋಜನ ಇಲ್ಲ. ಅಂತರಂಗಶುದ್ಧಿ, ಬಹಿರಂಗ ಶುದ್ಧಿ ಎರಡೂ ಇರುವವರು ನಿಜವಾದ ಶ್ರೇಷ್ಠರು.

ಅದೇ ರೀತಿ ನೋವು-ನಲಿವಿನ ವಿಚಾರಗಳೂ ಇರುತ್ತವೆ. ಕೆಲವರು ಒಳಗೆ ತುಂಬಾ ನೋವನ್ನು ಅನುಭವಿಸುತ್ತಾರೆ. ಆದರೆ ಹೊರಗೆ ನಗುನಗುತ್ತ ವ್ಯವಹರಿಸುತ್ತಾರೆ. ಕೆಲವರು ಹೊರಗಿನ ಲೋಕಕ್ಕೆ ಅಳುಮೋರೆಯನ್ನು ಪ್ರದರ್ಶಿಸುತ್ತಾರೆ. ಒಳಗಿರುವ ಸಂತೋಷವನ್ನು ಬಚ್ಚಿಡುತ್ತಾರೆ.

Advertisement

ಇವೆಲ್ಲವನ್ನು ನಾವು ನಮ್ಮ ಕಾಲೇಜು ದಿನಗಳಲ್ಲಿ ಕಂಡವರೇ ಇದ್ದೇವೆ. ಕೆಲವರು ಅನಿವಾರ್ಯವಾಗಿ ದುಷ್ಟರಾಗಿರುತ್ತಾರೆ. ಆದರೆ, ಅವರ ದುಷ್ಟತನದಿಂದ ನಾಲ್ಕು ಮಂದಿಗೆ ಪ್ರಯೋಜನ ಆಗುತ್ತದೆ. ಉಳಿದವರಿಗೆ ಒಳಿತಾಗುವ ರೀತಿಯಲ್ಲಿ ಕೆಲವೊಮ್ಮೆ ಅವರು ದುಷ್ಟರಾಗಿರುವುದಿಲ್ಲ. ಆದರೆ, ಅವರನ್ನು ಅಪಾರ್ಥ ಭಾವಿಸಿರುತ್ತೇವೆ.

ಹಾಗೆ ನೋಡಿದರೆ, ಯಾರೂ ಉದ್ದೇಶಪೂರ್ವಕವಾಗಿ ಕೆಟ್ಟವರಾಗಿರಲೂ ಬಯಸುವುದಿಲ್ಲ , ಒಳ್ಳೆಯವರಾಗಿರಲೂ ಬಯಸುವುದಿಲ್ಲ. ಅದು ಅವರವರ ಸಂದರ್ಭಕ್ಕೆ ಸರಿಯಾದ ಪ್ರತಿಕ್ರಿಯೆ ಅಷ್ಟೆ . “ಈವನ್‌ ಎ ಡೆವಿಲ್‌ ಕ್ಯಾನ್‌ ಹ್ಯಾವ್‌ ಎ ಗುಡ್‌ ಹಾರ್ಟ್‌’ ಎಂಬ ಮಾತಿದೆ. ಭೂತದಲ್ಲೂ ಸದ್ಗುಣವಿರಬಹುದು. ಪಿಶಾಚಿಗಳು ಒಳಿತನ್ನು ಉಂಟುಮಾಡುವ ಕತೆಗಳನ್ನು ನಾವು ಓದಿದವರೇ ಇದ್ದೇವೆ. ಕೊನೆಯದಾಗಿ ಒಂದು ಮಾತು, ಮಾನವೀಯತೆ ಎಂಬುದು ಬಹಳ ಎತ್ತರವಾದ ಒಂದು ಪದ. ನಾವು ಸಜ್ಜನರಾಗಿದ್ದೇವೆಯೊ, ದುಷ್ಟರಾಗಿದ್ದೇವೆಯೊ ಎಂಬುದಕ್ಕಿಂತ ಮಾನವೀಯತೆಯನ್ನು ಹೊಂದಿದ್ದೇವೆ ಎಂದು ಹೇಳಬಲ್ಲಿರಾದರೆ ಅದಕ್ಕಿಂತ ದೊಡ್ಡದು ಬೇರಾವುದೂ ಇಲ್ಲ.  

ರಕ್ಷಿತಾ ಕೋಟ್ಯಾನ್‌, ದ್ವಿತೀಯ ಬಿ.ಎಸ್ಸಿ., ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next