Advertisement

ಗಮನ ಸೆಳೆದ ಅನಿವಾಸಿ ಕನ್ನಡಿಗರ ಯಕ್ಷಗಾನ

08:10 AM May 28, 2020 | mahesh |

ಶಿರಸಿ: ಕೋವಿಡ್ ಲಾಕ್‌ಡೌನ್‌ ಕಲಾ ಪ್ರದರ್ಶನಕ್ಕೂ ಸಂಕಷ್ಟ ತಂದಿವೆ. ವೃತ್ತಿಪರರಿಗೆ ಬದುಕಿನ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಅಂಥ ಕಲಾವಿದರಿಗೆ ನೆರವಾಗುವ ಹಾಗೂ ಯಕ್ಷಗಾನ ಕಲೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯರು ಯಕ್ಷ ಗೆಜ್ಜೆ ಕಟ್ಟಿದ್ದಾರೆ. ಭಾರತ ಕಲಾವಿದರಿಗೆ ನೆರವಾಗುವ ಆಶಯದಲ್ಲಿ ಅಮೇರಿಕಾದ ಅನಿವಾಸಿ ಕನ್ನಡಿಗರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಲಾಕ್‌ಡೌನ್‌ ನಡುವೆಯೂ ಅವರವರ ಮನೆಯಿಂದಲೇ ಝೂಂ ಆ್ಯಪ್‌ ಬಳಸಿ ಮನೆ ಮನೆಗೆ, ಮನ ಮನಕ್ಕೆ ಯಕ್ಷಗಾನದ ಸೊಗಸು ಹಂಚುವಲ್ಲಿ ಯಶಸ್ವಿಯಾಗಿದ್ದಾರೆ. ತಾಳಮದ್ದಲೆ ನಡೆಸಿ ಈಗ ಯಕ್ಷಗಾನವನ್ನೂ ರಂಗಕ್ಕೆ ತಂದು “ಲೈವ್‌’ ಯಕ್ಷಗಾನ ಉಣಬಡಿಸಿದ್ದಾರೆ!

Advertisement

ಯಾರಿವರೆಲ್ಲ?: ಅಮೆರಿಕಾ, ಕೆನಡಾ ದೇಶದಲ್ಲಿ ತಮ್ಮದೇ ಆದ ಬದುಕು ಕಂಡುಕೊಂಡ ಹವ್ಯಾಸಿ ಕಲಾವಿದರೂ, ಯಕ್ಷಗಾನ ಆಸಕ್ತರೂ ಸೇರಿ ಪ್ರದರ್ಶಿಸಿದ ಕಾಳಿದಾಸ ಆಖ್ಯಾನ ಏಕಕಾಲಕ್ಕೆ ಸಾವಿರ ಪ್ರೇಕ್ಷಕರು ಅವರವರ ಮನೆಯಲ್ಲೇ ಕುಳಿತು ಪ್ರದರ್ಶನ ವೀಕ್ಷಿಸಿದ್ದು ವಿಶೇಷವಾಗಿತ್ತು. ಕೊರೊನಾ ಕರಾಳತೆ ನಡುವೆ ಕಳೆದ ತಿಂಗಳು ಶ್ರೀಪಾದ ಹೆಗಡೆ ಅಮೆರಿಕಾ ಯಕ್ಷಗಾನ ಅಭಿಮಾನಿಗಳಿಗಾಗಿ ಒಂದು ತಾಳಮದ್ದಳೆ ಸಂಯೋಜಿಸಿದ್ದರು. ಒಂದೇ ಕಡೆ ಕುಳಿತು ತಾಳಮದ್ದಲೆ ಮಾಡಲು ಸಾಧ್ಯವಿಲ್ಲವಾದ್ದರಿಂದ ಝೂಂ ಆ್ಯಪ್‌ ಬಳಸಿ ನಡೆಸಿದರು. ಆಗ ಸುಮಾರು 300 ವೀಕ್ಷಕರು ಅದನ್ನು ವೀಕ್ಷಿಸಿ ಮೆಚ್ಚುಗೆ ನೀಡಿದ್ದರು. ಇದರ ಪರಿಣಾಮ ಯಕ್ಷಗಾನಕ್ಕೂ ಹೊರಳಿತು. ಕ್ಯಾಲಿಫೋರ್ನಿಯಾದ ಹವ್ಯಕ ಒಕ್ಕೂಟದ ಉಪಾಧ್ಯಕ್ಷ ಬಾಲಾ ಜೋಶಿ ನೆರವಾದರು. ಸ್ವತಃ ಯಕ್ಷಗಾನ ವೇಷಭೂಷಣ ಹೊಂದಿದ ಕಲಾವಿದರು ಸ್ವತಃ ಮೇಕಪ್‌ ಮಾಡಿಕೊಂಡು ಮನೆಯಲ್ಲೇ ವೇದಿಕೆ ನಿರ್ಮಾಣ ಮಾಡಿಕೊಂಡರು.

ಭಾಗವತ ಕೆ.ಜೆ. ಗಣೇಶ ಅವರ ತಂಡದ ಧ್ವನಿಮು ದ್ರಿತ ಹಿಮ್ಮೇಳ ಬಳಸಿಕೊಂಡು ಲೈವ್‌ ಆಟ ನಡೆಸಿದರು. ಬಾಲಾ ಜೋಶಿ, ಅಭಿರಾಮ್‌ ಮತ್ತು ವಿಠ್ಠಲ ಪುತ್ತೂರು ತಾಂತ್ರಿಕ ಸಹಾಯದ ಮೂಲಕ ಅಲ್ಲಿನ ಸನಾತನ ಯಕ್ಷರಂಗ ಕಲಾವಿದರ ಯಕ್ಷಗಾನ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.

6000 ಕಿ.ಮೀ ಅಂತರ!
ಅಮೆರಿಕಾದಲ್ಲೇ 75-100 ಕಿಮೀ ಅಂತರದಲ್ಲಿದ್ದರೆ, ಕಲಾಧರ ಪಾತ್ರ ಮಾಡಿದ ನವೀನ ಹೆಗಡೆ 6000 ಕಿಮೀ ದೂರದ ಕೆನಡಾದಲ್ಲಿದ್ದರು. ಸಾಫ್ಟವೇರ್‌ ಸೇರಿದಂತೆ ಅನೇಕ ಉದ್ಯೋಗದಲ್ಲಿರುವ ಹವ್ಯಾಸಿ ಕಲಾವಿದರು ಎರಡು ಗಂಟೆಗೂ ಅಧಿಕ ಕಾಲದ ಯಕ್ಷಗಾನ ಪ್ರದರ್ಶನ ನಡೆಸಿದರು. ಕಾಳಿದಾಸನಾಗಿ ಶ್ರೀಪಾದ ಹೆಗಡೆ, ಕಲಾಧರನಾಗಿ ನವೀನ ಹೆಗಡೆ, ವಿದ್ಯಾಧರೆಯಾಗಿ ಉಷಾ ಹೆಬ್ಟಾರ್‌, ಮಂತ್ರಿಯಾಗಿ ಅಶ್ವಿ‌ನಿ ಬಿಕೆ, ರಾಜನಾಗಿ ಗೋಪಾಲ ಭಟ್ಟ, ಕಾಳಿದೇವಿಯಾಗಿ ಶಾಂತಿಕಾ ಹೆಗಡೆ ಪಾತ್ರ ಮಾಡಿದರು. ಒಮ್ಮೆ ನರ್ತನ ಮಾಡಿದ ವಿಡಿಯೋ ಮಾಡಿಕೊಂಡು ನಂತರ ಲೈವ್‌ನಲ್ಲಿ ಸಂಭಾಷಣೆಗೆ ವೇಷದಲ್ಲೇ ಬಂದು ನಿಂತು ತಾಂತ್ರಿಕ ಸಮಸ್ಯೆ ಸರಿದೂಗಿಸಿಕೊಂಡರು. ವಿಡಿಯೋ ಎಡಿಟಿಂಗ್‌ ಅಶ್ವಿ‌ನಿ ಬಿಕೆ ನಡೆಸಿದರು.

– ರಾಘವೇಂದ್ರ ಬೆಟ್ಟಕೊಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next