ಆಷಾಢಕ್ಕೂ ಮುನ್ನ ಒಂದಷ್ಟು ಸಿನಿಮಾಗಳು ಮುಹೂರ್ತ ಕಂಡಿವೆ. ಆ ಪೈಕಿ ಹೊಸಬರ ಸಿನಿಮಾಗಳೇ ಹೆಚ್ಚು. ಅಂತಹ ಹೊಸಬರ ಚಿತ್ರಗಳ ಸಾಲಿಗೆ “ಸರ್ವಂ ಪ್ರೇಮಂ’ ಚಿತ್ರವೂ ಸೇರಿದೆ. ಶಿವರಾಜ್ ಚಿತ್ರದ ನಿರ್ದೇಶಕರು. ನಿರ್ಮಾಣವೂ ಇವರದೇ. ಚಿತ್ರದ ಶೀರ್ಷಿಕೆ ಹೇಳುವಂತೆ, ಇದೊಂದು ಪಕ್ಕಾ ಪ್ರೀತಿ ಕುರಿತಾದ ಸಿನಿಮಾ. ಇದರೊಂದಿಗೆ ರಾಜಕೀಯ, ದ್ವೇಷ, ನೋವು, ನಲಿವು, ಹಾಸ್ಯ, ಅನುಬಂಧ, ಬಾಂಧವ್ಯ ಹೀಗೆ ಇನ್ನೂ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.
ಎಲ್ಲರ ಬದುಕಿನಲ್ಲೂ ತರಹೇವಾರಿ ಭಾವನೆಗಳಿರುತ್ತವೆ. ಅವೆಲ್ಲವನ್ನೂ ಒಂದು ಕಡೆ ಕೂಡಿಸಿ, ಕ್ಲೈಮ್ಯಾಕ್ಸ್ನಲ್ಲಿ ಪ್ರೀತಿಯೇ ದೊಡ್ಡದು ಎಂಬ ಸಂದೇಶ ಸಾರುವ ಪ್ರಯತ್ನ ಈ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಕಮ್ ನಿರ್ಮಾಪಕ ಶಿವರಾಜ್. ಇನ್ನು, ಈ ಚಿತ್ರಕ್ಕೆ ಆನಂದ್ ಹೀರೋ. ಅವರಿಲ್ಲಿ ಎಂಜಿನಿಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಆನಂದ್ ಮೂರು ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿವೆ.
ಆನಂದ್ಗೆ ಇಲ್ಲಿ ಸುಹಾನ ಎಂಬ ನಾಯಕಿ ನಟಿಸುತ್ತಿದ್ದಾರೆ. ಅವರಿಲ್ಲಿ ಹಳ್ಳಿ ಹುಡುಗಿಯೊಬ್ಬಳು ಪಟ್ಟಣ್ಣಕ್ಕೆ ಬಂದು ಆಶ್ರಮವೊಂದರಲ್ಲಿ ಟೀಚರ್ ಆಗಿರುವ ಪಾತ್ರ ಮಾಡುತ್ತಿದ್ದಾರೆ. ಒಂದು ಸಂದರ್ಭದಲ್ಲಿ ನಾಯಕನ ಪರಿಚಯವಾಗಿ, ಆ ಪರಿಚಯ ಪ್ರೀತಿಗೂ ತಿರುಗಿ, ಮುಂದೆ ಏನೆಲ್ಲಾ ರಾದ್ಧಾಂತ ಆಗುತ್ತೆ ಅನ್ನೋದು ಒನ್ಲೈನ್ ಎಂಬುದು ಸುಹಾನ ಮಾತು. ಹಂಸಲೇಖ ಅವರ ಶಿಷ್ಯ ಲೋಕಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಮಾಗಡಿ ಲೋಕೇಶ್ ಗೀತೆಗಳನ್ನು ಬರೆದಿದ್ದಾರೆ.
ಜಯ ಮಲ್ಲಿಕಾರ್ಜುನ ಅವರು ಮಾತುಗಳನ್ನು ಪೋಣಿಸಿದ್ದಾರೆ. ಪ್ರವೀಣ್ಶೆಟ್ಟಿ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಉಳಿದಂತೆ “ಸರ್ವಂ ಪ್ರೇಮಂ’ ಚಿತ್ರದಲ್ಲಿ ಹಿರಿಯ ನಟ ಶ್ರೀನಿವಾಸಪ್ರಭು, ಶೋಭರಾಜ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಇತರರು ನಟಿಸುತ್ತಿದ್ದಾರೆ. ಇನ್ನು, ಶಿವರಾಜ್ ಜತೆ ಎ.ಜಿ. ಪ್ರಭಾಕರ್ ಮತ್ತು ಕೆ.ಆರ್.ಅಶ್ವತ್ನಾರಾಯಣ್ ಸಹ ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಚಿತ್ರತಂಡ ಮುಹೂರ್ತ ಆಚರಿಸಿಕೊಂಡ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಭಗವಾನ್ ಆಗಮಿಸಿದ್ದರು. ತಮ್ಮ ಶಿಷ್ಯನ ಚಿತ್ರಕ್ಕೆ ಶುಭ ಹಾರೈಸಿದ ಅವರು, ಈ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು. ಅಂದಹಾಗೆ, ತುಂಬಾ ಉತ್ಸಾಹದಲ್ಲಿರುವ ತಂಡ, ಕೇವಲ ಮೂರು ತಿಂಗಳಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿ, ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಮಾಡಿದೆ.