ರಾಯಚೂರು: ಬೇರೊಬ್ಬನ ಜತೆ ನಿಶ್ಚಿತಾರ್ಥವಾಗಿದ್ದರೂ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಮದುವೆಯಾಗಿ ತನ್ನ ಧರ್ಮಕ್ಕೆ ಮತಾಂತರ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಯುವತಿಯ ಪಾಲಕರು ಇದು ಲವ್ ಜಿಹಾದ್ ಎಂದು ಆರೋಪಿಸುತ್ತಿದ್ದಾರೆ.
ನಗರದ ನೇತಾಜಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಿಂದೂ ಯುವತಿ ಭಾರತಿಯನ್ನು ಮುಸ್ಲಿಂ ಯುವಕ ರಿಹಾನ್ ಮಿಯಾ ಕರೆದುಕೊಂಡು ಹೋಗಿದ್ದಾನೆ. ಹಿಂದುಳಿದ ವರ್ಗಕ್ಕೆ ಸೇರಿದ ಯುವತಿಗೆ ಹೂವಿನಹಡಗಲಿ ಹುಡಗನ ಜತೆ ಆಗಲೇ ನಿಶ್ಚಿತಾರ್ಥವಾಗಿತ್ತು. ಆದರೂ ಪ್ರೀತಿ ಹೆಸರಲ್ಲಿ ಯುವತಿಯನ್ನು ದಾರಿ ತಪ್ಪಿಸಲಾಗಿದೆ ಎಂದು ಯುವತಿ ಹೆತ್ತವರಾದ ಬಾಳಪ್ಪ, ನಾಗಮ್ಮ ಠಾಣೆಗೆ ದೂರು ನೀಡಿದ್ದಾರೆ.
ರಿಹಾನ್ ನಗರದಲ್ಲಿ ಫ್ಲವರ್ ಶೋ ವ್ಯಾಪಾರ ಮಾಡಿಕೊಂಡಿದ್ದ. ಅಲ್ಲಿಗೆ ಕೆಲಸಕ್ಕೆ ಬರುತ್ತಿದ್ದ ಯುವತಿ ಭಾರತಿ ನಡುವೆ ಪ್ರೀತಿಯಾಗಿದೆ. ನ.6ರಂದು ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಮೂರು ದಿನ ಬಳಿಕ ಹೈದರಾಬಾದ್ ನಲ್ಲಿ ರಿಜಿಸ್ಟರ್ ಮದುವೆಯಾಗಿರುವ ಶಂಕೆ ಮೂಡಿದೆ. ಯುವತಿಯನ್ನು ಇಸ್ಲಾಂ ಗೆ ಮತಾಂತರ ಮಾಡಿ ಬುರ್ಖಾ ಕೂಡ ಹಾಕಲಾಗಿದೆ.
ದೂರಿನ ವಿಚಾರಣೆ ಮಾಡಿದ ಪೊಲೀಸರು, ಭಾರತಿ ಮತ್ತು ರಿಹಾನ್ ನ ಪೊಲೀಸ್ ಠಾಣೆಗೆ ಕರೆಸಿದ್ದರು. ಠಾಣೆಗೆ ಬರುವಾಗಲೂ ಯುವತಿ ಬುರ್ಖಾ ಧರಿಸಿದ್ದರು.ಯುವಕನನ್ನು ನಂಬಿ ಕೆಲಸಕ್ಕೆ ಕಳಿಸಿದ್ದೆವು. ಆದರೆ, ಈ ತರ ಆ ಯುವಕ ಮೋಸ ಮಾಡುತ್ತಾನೆ ಎಂದು ಭಾವಿಸಿರಲಿಲ್ಲ. ನಮಗೆ ನಮ್ಮ ಮಗಳು ಮಾತ್ರ ಬೇಕು. ಮರಳಿ ನಮ್ಮ ಹಿಂದೂ ಧರ್ಮಕ್ಕೆ ನಮ್ಮ ಮಗಳನ್ನು ಒಪ್ಪಿಸಲಿ. ಒಂದೇ ತಿಂಗಳಲ್ಲಿ ಅವಳ ಮದುವೆ ಬೇರೆ ಇತ್ತು. ನೀವು ನನ್ನ ತಂದೆ ತಾಯಿನೇ ಅಲ್ಲ ಎಂದು ಮಗಳು ಹೇಳುತ್ತಿದ್ದಾಳೆ. ಕನ್ನಡದಲ್ಲಿ ಮಾತನಾಡುತ್ತಿಲ್ಲ. ಅವರು ನನ್ನ ಮಗಳ ಮೈಂಡ್ ವಾಷ್ ಮಾಡಿದ್ದಾರೆ ಎಂದು ಯುವತಿಯ ತಾಯಿ ನಾಗಮ್ಮ ನೋವು ತೋಡಿಕೊಂಡಿದ್ದಾರೆ.
ವಿಚಾರಣೆ ನಡೆಸಿದ ಠಾಣೆ ಪಿಎಸ್ ಐ, ಯುವಕ- ಯುವತಿ ಅನ್ಯಧರ್ಮಿಯರಾಗಿದ್ದು ಪ್ರೀತಿಸಿ ಮದುವೆಯಾಗಿದ್ದೇವೆ ಎನ್ನುತ್ತಿದ್ದಾರೆ. ಇಬ್ಬರೂ ವಯಸ್ಕರಾಗಿದ್ದು, ಯುವತಿಯೇ ಒಪ್ಪಿ ಹೊಗಿದ್ದೇನೆ ಎನ್ನುತ್ತಿದ್ದಾಳೆ ಎಂದು ತಿಳಿಸಿದ್ದಾರೆ.