ನನಗೀಗ ಹೊಸ ಗೆಳೆಯರು ಸಿಕ್ಕಿದ್ದಾರೆ. ಅವರೆಲ್ಲಾ ನನ್ನನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ. ಆದರೂ ನಾನು ನಿಮ್ಮನ್ನು ಮರೆತಿಲ್ಲ, ನೀವು ಮೇಷ್ಟ್ರಿಗೆ ಗೊತ್ತಾಗದಂತೆ ಪೀರಿಯೆಡ್ ಪೂರ್ತಾ ಜಗಿದು, ನಂತರ ಉಗಿಯದೇ ಅಂಟಿಸಿಹೋದ ಬಬಲ್‌ಗಂ ಕೂಡ ಈಗಲೂ ನನ್ನೊಂದಿಗಿದೆ….
ನನ್ನ ಕಥೆ ಕೇಳುವವರು ಯಾರೂ ಇಲ್ವಾ? ನೀವೆಲ್ಲಾ ಇಷ್ಟು ಸ್ವಾರ್ಥಿಗಳಾ? ಕಾಲೇಜು ಬಿಟ್ಟು ಹೋದ ಮೇಲೆ ಒಮ್ಮೆಯಾದರೂ ನನ್ನನ್ನು ಭೇಟಿ ಮಾಡಲು ಬಂದಿದ್ದೀರಾ? ಕಾಟಾಚಾರಕ್ಕಾದರೂ ಹೇಗಿದ್ದೀಯಾ ಅಂತ ಕೇಳಿದಿರಾ? ನನ್ನ ಮೇಲೆ ಇಷ್ಟೊಂದು ಕೋಪ, ಅಸಡ್ಡೆ ಯಾಕೆ? ನಿಮ್ಮ ಕಾಲೇಜು ಜೀವನದುದ್ದಕ್ಕೂ ಜೊತೆಗಿದ್ದವನು ನಾನು. ಒಂದು ದಿನವೂ ರಜೆ ತೆಗೆದುಕೊಳ್ಳದ ನನ್ನದು ಕಡ್ಡಾಯ ಹಾಜರಾತಿ.
ಹದಿಹರೆಯದ ನಿಮ್ಮೆಲ್ಲಾ ಕನಸುಗಳು, ಆ ಕ್ಷಣದ ಉನ್ಮಾದವೆಲ್ಲಾ ನನಗೆ ಗೊತ್ತು. ಅವೆಲ್ಲದರ ಕುರುಹುಗಳು, ಜಂಜಾಟದ ದಿನಗಳ ಒದ್ದಾಟದ ನೆನಪುಗಳು ಇನ್ನೂ ನನ್ನ ಮೇಲೆ ಹಾಗೇ ಇವೆ. ಅವನ್ನೆಲ್ಲಾ ನಿಮಗೆ ತೋರಿಸುವಾಸೆ. ನೀವು ಪ್ರೀತಿಸಿದ ಹುಡುಗಿ(ಗರ)ಯರ ಹೆಸರು, ನೀವು ಪ್ರೀತಿಯಿಂದ ಅವಳ(ನ) ಹೆಸರು ಪಿಸುಗುಟ್ಟಿ ಕರೆಯುತ್ತಿದ್ದಾಗ ನಿಮ್ಮ ಬಿಸಿ ಉಸಿರು ನನಗೆ ತಾಕಿ, ಹಾದು ಹೋಗುವಾಗ ನನಗೆಷ್ಟು ರೋಮಾಂಚನ ಆಗಿದೆ ಗೊತ್ತಾ? ನೀವು ನಿದ್ದೆ ಬಂದು ತೂಕಡಿಸಿ ಬಿದ್ದದ್ದೂ ನನ್ನ ಮೇಲೆಯೇ, ಹುಡುಗಿ ತಿರುಗಿ ನೋಡಿ ನಕ್ಕಾಗ ನಾಚಿಕೆಯಿಂದ ಬಾಗಿ ನಿಮ್ಮ ನಗುವನ್ನು ನನಗೆ ಮಾತ್ರ ತೋರಿಸುತ್ತಿದ್ದಿರಿ. ಥೂ.. ಅದು ಬಿಡಿ. ನೀವು ಎಕ್ಸಾಮ್‌ನಲ್ಲಿ ಕಾಪಿ ಹೊಡೆಯಲು ನನಗೆ ಗಾಯ ಮಾಡಿ, ಹೊಕ್ಕಿಸಿದ ಚೀಟಿ ಇನ್ನೂ ನನ್ನೊಳಗೆ ಭದ್ರವಾಗಿದೆ.
ನಿಮ್ಮ ಹಾಗೆಯೇ ನನಗೂ ಹೊಸ ಗೆಳೆಯರು ಸಿಕ್ಕಿದ್ದಾರೆ. ನಿಮ್ಮಷ್ಟು ಭಾರ ಇಲ್ಲದ್ದಿದ್ದರೂ ಬಹಳ ಚೆನ್ನಾಗಿ ಆರೈಕೆ ಮಾಡುತ್ತಾರೆ. ಹಾ.. ಹಾ! ಮಳೆ ಬಂದರೆ ಸಾಕು, ಒಂದು ಹನಿಯೂ ನನ್ನ ಮೇಲೆ ಬೀಳದಂತೆ ತಕ್ಷಣ ಕಿಟಕಿ ಮುಚ್ಚಿಬಿಡುತ್ತಾರೆ. ಅವರಿಗೆಲ್ಲಾ ಅದೆಷ್ಟು ಕರುಣೆ ನನ್ನ ಮೇಲೆ ಅಂತೀರಾ? ಆದ್ರೂ ನಂಗೊತ್ತು, ಅವರು ಮಳೆ ಬಂದಾಗ ಕಿಟಕಿ ಹಾಕೋದು ತಮ್ಮ ಪುಸ್ತಕ ಮತ್ತು ಮೈ ಮೇಲೆ ನೀರು ಬೀಳಬಾರದು ಅಂತ! ಇರ್ಲಿ, ಅದ್ರಿಂದ ನಂಗೂ ಒಳ್ಳೇದೇ ಆಗುತ್ತೆ ಬಿಡಿ.
ನಿಮ್ಮ ನೆನಪಿನ ಪುಟಗಳಲ್ಲಿ ಅವಿತು ಕುಳಿತಿದ್ದೀನಿ ಎಂದು ನಂಬಿಕೆ ಇಟ್ಟುಕೊಂಡು ಈ ಪತ್ರ ಬರೀತಾ ಇದ್ದೀನಿ. ಪತ್ರ ಓದಿದ ನಂತರವಾದ್ರೂ, ಬಂದು ಮಾತಾಡಿಸ್ಕೊಂಡು ಹೋಗಿ. ಇನ್ನೆಷ್ಟು ವರ್ಷ ನನ್ನ ಅಸ್ತಿತ್ವವೋ ಗೊತ್ತಿಲ್ಲ? ನೀವು ದವಡೆಯಲ್ಲಿ ಜಗಿದು ಜಗಿದು ತಿಂದು ಅಂಟಿಸಿದ ಬಬಲ್ ಗಮ್ ಇನ್ನೂ ಹಾಗೆ ಇದೆ… ಅಸಹ್ಯ ಅಂತ ಯಾರೂ ಅದನ್ನು ಮುಟ್ಟುತ್ತಿಲ್ಲ. ಅದನ್ನು ತೆಗೆಯಲಿಕ್ಕಾದರೂ ಬನ್ನಿ… ಕಾಯ್ತಾ ಇರ್ತೀನಿ. ನಿಮ್ಮ ಭಾರಕ್ಕೆ ನಾನು ಅಭಾರಿ.
ಇಂತಿ ನಿಮ್ಮ ಪ್ರೀತಿಯ
ಬೆಂಚು
ಸುಜಿತ್ ಎಸ್