ಇನ್ಮುಂದೆ ಹುಡುಗಿಯರನ್ನು ಕಣ್ಣೆತ್ತಿಯೂ ನೋಡಲ್ಲ, ಎಲ್ಲರೂ ಮೋಸಗಾತಿಯರು, ಟ್ರೂ ಲವ್ ಅನ್ನೋದೇ ಇಲ್ಲ ಎನ್ನುತ್ತಾ ಕೈಯಲ್ಲಿ ಗ್ಲಾಸ್ ಹಿಡಿಯುತ್ತಾನೆ. ಇತ್ತ ಕಡೆ ಇವಳು, ಹುಡುಗರ ಜೊತೆ ಫ್ರೆಂಡ್‌ಶಿಪ್ ಮಾಡಿ ಒಳ್ಳೆಯ ರೀತಿಯಲ್ಲಿ ಮಾತನಾಡಿದರೆ ಸಾಕು, ಲವ್ ಮಾಡು ಎಂದು ಹಿಂದೆ ಸುತ್ತುತ್ತಾರೆ. ಇನ್ನು ಮುಂದೆ ಹುಡುಗರ ಜೊತೆ ಫ್ರೆಂಡ್‌ಶಿಪ್ ಮಾಡಲ್ಲ ಎಂದು ಸಿಡಿಮಿಡಿಗೊಂಡಿರುತ್ತಾಳೆ. ಈ ಎರಡು ವಿರುದ್ಧ ಗುಣಗಳ ಪಾತ್ರಗಳನ್ನು ಒಟ್ಟು ಸೇರಿಸುವ ಪ್ರಯತ್ನವಾಗಿ ಮೂಡಿಬಂದಿರೋದೇ “ಪ್ರೀತಿ ಪ್ರೇಮ’.
ಪ್ರೀತಿ ಯಾವ ರೀತಿ ಬದಲಾಗುತ್ತಿದೆ, ಪ್ರೀತಿ ಹೇಗೆ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿದೆ ಮತ್ತು ಇದರಿಂದಾಗಿ ನಿಷ್ಕಲ್ಮಶ ಪ್ರೀತಿಯ ಮೇಲೂ ಸಂಶಯಪಡುವಂತಹ ಸ್ಥಿತಿ ಬಂದಿರೋದನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಹೇಳಲು ಹೊರಟಿದ್ದಾರೆ. ನಿರ್ದೇಶಕರ ಗುರಿಯೇನೋ ಸ್ಪಷ್ಟವಾಗಿದೆ. “ಕಮರ್ಷಿಯಲ್ ಲವ್‌ಸ್ಟೋರಿ’ಗಳ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತಲೇ ಒಂದು ನಿಷ್ಕಲ್ಮಶ ಪ್ರೀತಿಯನ್ನು ತೋರಿಸಲು ಹೊರಟ ನಿರ್ದೇಶಕರು ಸಾಕಷ್ಟು ಕಷ್ಟಪಟ್ಟಿರೋದು ಎದ್ದು ಕಾಣುತ್ತದೆ.
ಆ ಕಷ್ಟವನ್ನು ಅನಿವಾರ್ಯವಾಗಿ ಪ್ರೇಕ್ಷಕ ಕೂಡಾ ಅನುಭವಿಸಬೇಕಾಗುತ್ತದೆ. ಮುಖ್ಯವಾಗಿ ಈ ಸಿನಿಮಾದ ಸಮಸ್ಯೆ ಎಂದರೆ ಏಕತಾನತೆ ಹಾಗೂ ಗಂಭೀರ ವಿಷಯದ ಕೊರತೆ. ಪ್ರೀತಿಯ ಕಮರ್ಷಿಯಲ್ ಅಂಶಗಳನ್ನು ತೋರಿಸುವ ಭರದಲ್ಲಿ ಉಳಿದೆಲ್ಲಾ ಅಂಶಗಳನ್ನು ನಿರ್ದೇಶಕರು ಮರೆತಿದ್ದಾರೆ. ಹಾಗೆ ನೋಡಿದರೆ ಕತೆ ಟ್ರ್ಯಾಕ್‌ಗೆ ಬರೋದು ಇನ್ನೇನು ಸಿನಿಮಾ ಮುಗಿಯಲು ಹತ್ತು ನಿಮಿಷ ಇರುವಾಗ. ಆ ಗ್ಯಾಪಲ್ಲೂ ನಿರ್ದೇಶಕರು ಒಂದು ಮಾಂಟೇಜ್ ಸಾಂಗ್ ಮೂಲಕ ಮತ್ತೆ ಸಿನಿಮಾವನ್ನು ಎಳೆದಾಡಿದ್ದಾರೆ.
ಟೈಮ್‌ಪಾಸ್‌ಗೆ ಲವ್ ಮಾಡೋ ಹುಡುಗರ ಕಥೆ, ಪಾಕೇಟ್ ಮನಿ, ಪಿಕ್‌ಅಪ್, ಡ್ರಾಪ್ ಸರ್ವೀಸ್‌ಗಾಗಿ ಲವ್ ಮಾಡೋ ತರಹ ನಾಟಕವಾಡೋ ಹುಡುಗೀರ ಬಾಯಲ್ಲಿ ಬರೋ “ಕಮರ್ಷಿಯಲ್ ಡೈಲಾಗ್’ಗಳು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿವೆ. “ಪ್ರೀತಿ ಪ್ರೇಮ’ದಲ್ಲೂ ಅದೇ ಮುಂದುವರಿದಿದೆ. ಹುಡುಗೀರನ್ನು ಬೈಕೊಂಡು ಓಡಾಡೋ ಹುಡುಗ ಒಂದು ಕಡೆಯಾದರೆ, ಹುಡುಗೀರನ್ನು ಎಟಿಎಂ ಕಾರ್ಡ್ ತರಹ ಬಳಸಿ ಕೊನೆಗೆ ಬಿಸಾಕಬೇಕು ಎಂದು ಭಾವಿಸುವ ಹುಡುಗೀರ ಗುಂಪು ಇನ್ನೊಂದು ಕಡೆ.
ಈ ಎರಡನ್ನೂ ಬ್ಯಾಲೆನ್ಸ್ ಮಾಡಲು ನಿರ್ದೇಶಕರು ಸಾಕಷ್ಟು ಶ್ರಮಪಟ್ಟಿದ್ದಾರೆ. ಮೊದಲೇ ಹೇಳಿದಂತೆ ಸಿನಿಮಾದಲ್ಲಿ ಏಕತಾನತೆ ಕಾಡುತ್ತದೆ. ದೃಶ್ಯಗಳು ಒಂದು ಸರ್ಕಲ್ ಬಿಟ್ಟು ಮುಂದಕ್ಕೆ ಹೋಗೋದೇ ಇಲ್ಲ. ಬ್ಯಾಚುಲರ್ ಬಾಯ್ಸನ ತರೆಲ ತಮಾಷೆಗಳನ್ನೇ ಡಿಸೈನ್ ಡಿಸೈನ್ ಆಗಿ ತೋರಿಸಿದ್ದಾರೆ. ಆದರೆ, ಚಿತ್ರದ ಕೊನೆಯಲ್ಲಿ ಬರುವ ಟ್ವಿಸ್ಟ್ ನಿಮಗೆ ಸ್ವಲ್ಪ ಖುಷಿ ಕೊಡಬಹುದು. ಹಾಗಂತ ಅದು ಅನಿರೀಕ್ಷಿತ ಎನ್ನುವಂತಿಲ್ಲ. ಬಹುತೇಕ ದೃಶ್ಯಗಳನ್ನು ಪ್ರೇಕ್ಷಕನೇ ಊಹಿಸಿಕೊಂಡು ಹೋಗುವಂತಿದೆ.
ಚಿತ್ರದಲ್ಲಿ ಸಾಕಷ್ಟು ಅನಾವಶ್ಯಕ ದೃಶ್ಯಗಳು ಬಂದು ಹೋಗುತ್ತವೆ. ನಿರ್ದೇಶಕರು ಅದನ್ನು ಕಾಮಿಡಿ ಎಂದು ಭಾವಿಸಿಕೊಂಡು ಚಿತ್ರದುದ್ದಕ್ಕೂ ಇಟ್ಟಿದ್ದಾರೆ. ಆ ಎಲ್ಲಾ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ತಾಳ್ಮೆ ಪರೀಕ್ಷೆಯ ಅವಧಿಯೂ ಕಡಿಮೆಯಾಗುತ್ತಿತ್ತು. ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಗಾಂಧಿನಗರದ ಸಿದ್ಧಸೂತ್ರಗಳನ್ನು ಬಿಟ್ಟು ಮಾಡಿದ ಸಿನಿಮಾವಿದು. ಹಾಗಾಗಿ, ಹೀರೋಯಿಸಂ, ಬಿಲ್ಡಪ್ ಎಂಟ್ರಿ, ಜಬರ್ದಸ್ತ್ ಫೈಟ್‌ಗಳಿಲ್ಲ. ಕೇವಲ ಒಂದು ಲವ್‌ಸ್ಟೋರಿಯನ್ನಷ್ಟೇ ಹೇಳಲು ಪ್ರಯತ್ನಿಸಿದ್ದಾರೆ.
ನಾಯಕ ಕೃಷ್ಣ ಚೈತನ್ಯ ಲವರ್ ಬಾಯ್ ಆಗಿ ನಟಿಸಿದ್ದಾರೆ. ಅವರು ಮತ್ತಷ್ಟು ಚೈತನ್ಯದಿಂದ ನಟಿಸಿದ್ದರೆ ಪಾತ್ರದ ತೂಕ ಹೆಚ್ಚುತ್ತಿತ್ತು. ನಾಯಕಿ ನಿಧಿ ಕುಶಾಲಪ್ಪ ನಟಿಸಲು ಪ್ರಯತ್ನಿಸಿದ್ದಾರೆ. ಉಳಿದಂತೆ ಗಿರಿ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರ: ಪ್ರೀತಿ ಪ್ರೇಮ
ನಿರ್ಮಾಣ: ಕೃಷ್ಣ ಚೈತನ್ಯ
ನಿರ್ದೇಶನ: ಕಾಶಿ
ತಾರಾಗಣ: ಕೃಷ್ಣ ಚೈತನ್ಯ, ನಿಧಿ ಕುಶಾಲಪ್ಪ, ಗಿರಿ ಮತ್ತಿತರರು
* ರವಿಪ್ರಕಾಶ್ ರೈ