Advertisement
ಇದನ್ನ ಬರೆಯೋಕೆ ತುಂಬಾ ನೋವಾಗ್ತಿದೆ. ಆದ್ರೆ ಏನ್ ಮಾಡೋದು? ಇದು ತುಂಬಾ ಅನಿವಾರ್ಯ. ನೀನು ಮಾತ್ರ ನನ್ನನ್ನು ಬಿಟ್ಟು ಆರಾಮಗಿದ್ದಿ.. ಆದ್ರೆ ನಾನು ನಿನ್ನದೇ ನೆನಪಲ್ಲಿ ಇಷ್ಟು ದಿನ ಸತ್ತು ಹೋಗಿದ್ದೆ. ಆದ್ರೆ ಮತ್ತೀಗ ಬದುಕುವ ಆಸೆ ಬಂದಿದೆ. ಕಾರಣ ಇಷ್ಟೇ, ಈಗ ಬದುಕಿನ ವಾಸ್ತವದ ಅರ್ಥ ನನಗಾಗಿದೆ. ನಾನಿಲ್ಲದೇ ನೀನು ಎಷ್ಟು ಹಾಯಾಗಿದ್ದೀ ಅಂತ ಕೂಡ ಗೊತ್ತಾಗಿದೆ.
Related Articles
Advertisement
ಆದ್ರೆ ಆ ನಂಬಿಕೆಯನ್ನು ಹುಸಿ ಮಾಡಿದವ ನೀನು. ಕಾಯುವುದು ನನಗೇನೂ ಹೊಸದಲ್ಲ. ನೀನು ಸಿಗುವ ಮುಂಚೆ ನಿನಗಾಗಿ ಕಾದೆ. ಸಿಕ್ಕ ನಂತರ ನೀನು ಬದಲಾಗುತ್ತೀಯಾ ಎಂದು ಕಾದೆ. ಕೊನೆಗೂ ಕಾಯುವುದೇ ನಿರಂತರವಾಯ್ತು.. ಆದ್ರೆ ಎಲ್ಲದ್ದಕ್ಕೂ ಮಿತಿ ಅನ್ನೋದೊಂದು ಇದೆ ನೋಡು… ಆ ಮಿತಿ ಬಂದಿದೆ, ಕಾಯುವ ಸಮಯ ಮುಗಿದಿದೆ.
ಹಿಂದಿನ ದಿನಗಳತ್ತ ಒಮ್ಮೆ ತಿರುಗಿ ನೋಡು. ನಿನಗಾಗಿ ಎಷ್ಟು ಹಂಬಲಿಸಿತ್ತು ಈ ಮನ, ಪ್ರತಿದಿನ ನಿನ್ನನ್ನು ನೋಡಲು ಕಾಯುತ್ತಿದ್ದೆ. ಆಗಾಗ್ಗೆ ನಿನ್ನೊಂದಿಗೆ ಮಾತು ಬಿಡುತ್ತಿದ್ದೆ ನಿಜ. ಆದರೆ, ಅದೆಲ್ಲಾ ತುಸು ಹೊತ್ತು ಮಾತ್ರ. ಮತ್ತೆ ಯಾವುದೋ ನೆಪ ಹೂಡಿ ಮೇಸೆಜ್ ಟೈಪಿಸುತ್ತಿದ್ದೆ. ನೂರು ಸಲ ಕಾಲ್ ಮಾಡ್ತಿದ್ದೆ. ಆದ್ರೆ, ಆ ಮನಸ್ಸೀಗ ನನ್ನಲ್ಲಿಲ್ಲ. ಕಾರಣ, ನಿನ್ನ ತಿರಸ್ಕಾರದ ಭಾವ ನನ್ನೆದೆಗೆ ಚೂರಿ ಹಾಕಿದೆ.
ನಿಂಗೆ ಗೊತ್ತಾ? ನಾನೆಂದೂ ಮುಖವಾಡ ಹಾಕಿ ಪ್ರೀತಿಸಿದವಳಲ್ಲ. ಪ್ರತಿಯೊಂದು ವಿಚಾರವನ್ನೂ ನಿನ್ನಿಚ್ಛೆಗೇ ಬಿಟ್ಟಿದ್ದೆ. ನಿನಗಾಗಿ ನೋವು, ಅವಮಾನ, ಬೇಸರ ಆತಂಕ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಅದೆಲ್ಲಾ ನಿಂಗೆ ಅರ್ಥವಾಗಲಿಲ್ಲ. ಬಿಡು, ಮನಸಾರೆ ಪ್ರೀತಿಸಿ, ಪ್ರೀತಿ ಕಳೆದುಕೊಂಡ ನೋವು ಪ್ರೀತಿಸಿದವರಿಗೆ ಮಾತ್ರ ಗೊತ್ತಾಗುತ್ತೆ, ನಟಿಸಿದವರಿಗಲ್ಲ. ಹೋಗ್ಲಿ ಬಿಡು, ಹಳೆಯದೆಲ್ಲಾ ಯಾಕೆ ಅಲ್ವಾ..? ನೀನು ಎಲ್ಲೇ ಇರು, ಚೆನ್ನಾಗಿರು ಅಷ್ಟೇ.
ನಿನ್ನನ್ನು ದ್ವೇಷಿಸುವಷ್ಟು ಶಕ್ತಿಯೂ ಈಗ ನನ್ನಲಿಲ್ಲ. ಕಾರಣ, ನನ್ನ ಹೃದಯದ ತುಂಬೆಲ್ಲಾ ಪ್ರೀತಿ ತುಂಬಿದೆ. ಈ ಪುಟ್ಟ ಹೃದಯದಲ್ಲಿ ಪ್ರೀತಿಗೆ ಮಾತ್ರ ಜಾಗ. ಎಂದಾದರೂ ಈ ಬಡಪಾಯಿ ಪ್ರೀತಿಯನ್ನು, ಅದರ ಆಳವನ್ನು ಅರ್ಥ ಮಾಡಿಕೊಳ್ಳೋ ಪ್ರಯತ್ನವನ್ನಾದರೂ ಮಾಡು. ನೆನಪಿರಲಿ, ನಿನ್ನ ಹೃದಯದ ಬಿಡಾರಕ್ಕೆ ಮತ್ತೆಂದೂ ಬಾರದಷ್ಟು ದೂರ ಹೊರಟಿರುವೆ ನಾನು. ಮಾಸದ ಗಾಯಕ್ಕೆ ಮರೆಯಲಾರದಷ್ಟು ನೋವಿದೆ..
ಬೇರು ಮುರಿದಿರೋ ಮರದ ಮನಸ್ಸಿನಂತೆ ನನ್ನೀ ಜೀವ ನರಳಿದೆ. ಆದರೂ, ಕಡೆಯ ಮಾತನ್ನು ಖುಷಿಯಿಂದಲೇ ಹೇಳುತ್ತಿದ್ದೇನೆ: ಗುಡ್‌ಬೈ… ಇಂತಿ ನಿನ್ನ ಜಾನು…