ನರಗುಂದ: ಗೃಹಸ್ಥಾಶ್ರಮ ಒಂದು ಪವಿತ್ರವಾದ ಸಂಬಂಧ. ಇಲ್ಲಿ ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ನಂಬಿಕೆ ಪ್ರಮುಖವಾಗಿದೆ. ದಾಂಪತ್ಯಕ್ಕೆ ಕಾಲಿರಿಸಿದ ನೂತನ ವಧು-ವರರ ಸಾಂಸಾರಿಕ ಜೀವನ ಅನ್ಯೋನ್ಯತೆಯಿಂದ ಕೂಡಿರಲಿ ಎಂದು ಸ್ಥಳೀಯ ಸುಕ್ಷೇತ್ರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮಿಗಳು ನವ ದಂಪತಿಗಳಿಗೆ ಕಿವಿಮಾತು ಹೇಳಿದರು.
ಸೋಮವಾರ ಪಟ್ಟಣದ ಎಡಿಬಿ ಬ್ಯಾಂಕ್ ಹಿಂದುಗಡೆ ಚನ್ನಬಸವೇಶ್ವರರ ಆವರಣದಲ್ಲಿ ಸ್ಥಳೀಯ ಜಾಗೃತ ಕೇಂದ್ರ ವಿರಕ್ತಮಠದ ಸರ್ವಧರ್ಮಗಳ ಶ್ರದ್ಧಾಕೇಂದ್ರ ಆಶ್ರಯದಲ್ಲಿ ಕರ್ತೃ ಚನ್ನಬಸವ ಶಿವಯೋಗಿಗಳ 153ನೇ ಸ್ಮರಣೋತ್ಸವ ಹಾಗೂ ಶರಣರ ಜೀವನ ದರ್ಶನ ಪ್ರವಚನ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 16 ಜೋಡಿ ವಧು ವರರನ್ನು ಆಶೀರ್ವದಿಸಿ ಶ್ರೀಗಳು ಆಶೀರ್ವಚನ ನೀಡಿದರು.
ತ್ರಿಕಾಲ ಯೋಗಿ ಕತೃì ಚನ್ನಬಸವ ಶಿವಯೋಗಿಗಳ ಸ್ಮರಣೋತ್ಸವ ಪ್ರಯುಕ್ತ 11 ದಿನಗಳ ಪರ್ಯಂತ ಶರಣರ ಜೀವನ ದರ್ಶನ ಪ್ರವಚನ ಬೋಧಿಸಿದ ಅಂತೂರ ಬೆಂತೂರ ಹಿರೇಮಠದ ಶ್ರೀ ಕುಮಾರ ದೇವರು ಭಕ್ತ ಸಂಕುಲಕ್ಕೆ ಸನ್ಮಾರ್ಗ ತೋರಿದ್ದಾರೆ. ಶರಣರ ಜೀವನದ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಭಕ್ತಿಭಾವದ ಜೀವನ ಸಾಗಿಸಿ ಮುಕ್ತಿ ಕಾಣಬೇಕು ಎಂದು ಶ್ರೀ ಶಿವಕುಮಾರ ಸ್ವಾಮಿಗಳು ಭಕ್ತರಿಗೆ ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಪಂಚಗ್ರಹ ಗುಡ್ಡದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, ಸಾಂಸ್ಕಾರಿಕ ಜೀವನಕ್ಕೆ ಕಾಲಿಸಿರಿದ ನವ ಜೋಡಿಗಳು ಧರ್ಮದ ಸಂಸ್ಕಾರವನ್ನು ಅಳವಡಿಸಿಕೊಂಡು ಸುಂದರವಾದ ಬದುಕು ನಡೆಸಬೇಕು. ಹಿರಿಯರಿಗೆ ಸದಾ ಗೌರವಯುತವಾದ ನಡೆ ನುಡಿ ನಿಮ್ಮದಾಗಿರಲಿ ಎಂದು ಹಿತ ನುಡಿದರು.
ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮಿಗಳು, ಹಿರೇಮಲ್ಲನಕೇರಿ ವಿರಕ್ತಮಠದ ಚನ್ನಬಸವ ಸ್ವಾಮಿಗಳು, ಶಿವಪುರ ಶಿವಲಿಂಗೇಶ್ವರ ವಿರಕ್ತಮಠದ ಅಭಿನವ ಸಿದ್ಧಲಿಂಗ ಸ್ವಾಮಿಗಳು, ತುಪ್ಪದಕುರಹಟ್ಟಿ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಅಂತೂರ ಬೆಂತೂರ ಕುಮಾರ ದೇವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಅಂಗವಾಗಿ ಡಾ| ಹೇಮರಡ್ಡಿ ಬೆಟಗೇರಿ ಅವರು ವಿರಚಿತ ಕುಂಡಲಿನಿ ಅನುಭವಿಯ ಆತ್ಮವೃತ್ತಾಂತ ಗ್ರಂಥವನ್ನು ಪೂಜ್ಯರು ಬಿಡುಗಡೆಗೊಳಿಸಿದರು. ಶ್ರೀಮಠದ ಎಲ್ಲ ಹಿರಿಯರು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಸಿದ್ಧಲಿಂಗಪ್ಪ ಹೊಸಕೇರಿ ಸ್ವಾಗತಿಸಿದರು. ಆರ್.ಬಿ. ಚಿನಿವಾಲರ ಮತ್ತು ಚನ್ನು ನೀಲಗುಂದ ನಿರೂಪಿಸಿದರು.
ಪಲ್ಲಕ್ಕಿ ಉತ್ಸವ: ಇಂದು ಬೆಳಗ್ಗೆ 6ಕ್ಕೆ ಶ್ರೀಮಠದ ಕತೃ ಶ್ರೀ ಚನ್ನಬಸವ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿತು. ಬಳಿಕ ಸಕಲ ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.