ನಾಲ್ವರು ಹೀರೋಗಳು, ನಾಲ್ವರು ಹೀರೋಯಿನ್‌ಗಳು … ಅಷ್ಟೊಂದು ಜನರನ್ನು ನೋಡಿ ತುಂಬಾ ಹೊತ್ತು ಆಗಬಹುದು ಎಂದು ಅಂದಾಜಿಸಿದ್ದು ಸುಳ್ಳಾಯಿತು. ಏಕೆಂದರೆ, ಪತ್ರಿಕಾಗೋಷ್ಠಿ ಶುರುವಾಗಿ ಕೆಲವೇ ನಿಮಿಷಗಳಲ್ಲಿ ಮುಗಿದೇ ಹೋಯಿತು. ಈ ಪೈಕಿ ಹೆಚ್ಚು ಮಾತನಾಡಿದ್ದು ನಿರ್ದೇಶಕ ಶ್ರೀನಿವಾಸ್. ಅದು ಮೂರು ನಿಮಿಷಗಳ ಕಾಲ. ಮಿಕ್ಕಂತೆ ನಿಮಿಷಕ್ಕಿಬ್ಬಿಬ್ಬರಂತೆ ಎಂಟು ಜನ, ನಾಲ್ಕು ನಿಮಿಷ ಮಾತಾಡುತ್ತಿದ್ದಂತೆಯೇ ಪತ್ರಿಕಾಗೋಷ್ಠಿ ಮುಗಿದೇ ಹೋಯಿತು.
ಇವೆಲ್ಲಾ ಆಗಿದ್ದು “ಪ್ರೇಮಂ ಚಿರಂ’ ಎಂಬ ಪತ್ರಿಕಾಗೋಷ್ಠಿಯಲ್ಲಿ. ಹೊಸಬರ ಈ ಸಿನಿಮಾ, ಕಳೆದ ವಾರ ಬಸವನಗುಡಿ ರಸ್ತೆಯ ರಾಯರ ಮಠದಲ್ಲಿ ಶುರುವಾಯಿತು. ಈ ಚಿತ್ರವನ್ನು ಪಿ.ಎನ್. ಸತ್ಯ ಅವರ ಬಳಿ ಶಿಷ್ಯರಾಗಿದ್ದ ಶ್ರೀನಿವಾಸ್ ಎನ್ನುವವರು ನಿರ್ದೇಶಿಸುತ್ತಿದ್ದು, ತುಳಜಾ ರಾಮ್ ಸಿಂಗ್ ಠಾಕೂರ್ ನಿರ್ಮಿಸುತ್ತಿದ್ದಾರೆ. ಜೊತೆಗೆ ಚಿತ್ರದ ಒಬ್ಬ ಹೀರೋ ಆಗಿಯೂ ಅಭಿನಯಿಸುತ್ತಿದ್ದಾರೆ.
ಆ್ಯಕ್ಷನ್ ನಿರ್ದೇಶಕನ ಶಿಷ್ಯ ಪ್ರೇಮಮಯ ಚಿತ್ರ ಮಾಡೋದಾ? ಎಂಬ ಪ್ರಶ್ನೆ ಬಂತು. ಯಾಕಾಗಬಾರದು ಎನ್ನುವಂತೆ ಮಾತು ಶುರು ಮಾಡಿದರು ಶ್ರೀನಿವಾಸ್. “ನಾನು ಸತ್ಯ ಅವರ “ಪಾಗಲ್’, “ಜೇಡ್ರಳ್ಳಿ’ ಮತ್ತು “ಹೊಡಿ ಮಗ’ ಚಿತ್ರಗಳಿಗೆ ಕೆಲಸ ಮಾಡಿದ್ದೆ. ಇದು ಮೊದಲ ಚಿತ್ರ. ಈ ಚಿತ್ರದಲ್ಲಿ ಐದು ಜೋಡಿಗಳಿದ್ದು, ಒಂದೊಂದು ಜೋಡಿಯದ್ದು ಒಂದೊಂದು ಕಥೆ. ಈ ಚಿತ್ರದಲ್ಲಿ ನಾಲ್ಕು ಹೊಸ ಜೋಡಿಗಳನ್ನು ಪರಿಚಯ ಮಾಡುತ್ತಿದ್ದೇವೆ. ಇನ್ನೊಂದು ಜೋಡಿಯದ್ದು ವಿಶೇಷ ಪಾತ್ರ. ಬೆಂಗಳೂರಿನ ಸುತ್ತಮುತ್ತ, ಒಂದೇ ಹಂತದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ.
ಚಿತ್ರದಲ್ಲಿ ಒಂದು ಹಾಡಿದೆ ಮತ್ತು ಅಜನೀಶ್ ಲೋಕನಾಥ್ ಅವರನ್ನು ಸಂಗೀತ ಮಾಡಿಕೊಡುವುದಕ್ಕೆ ಕೇಳುವ ಐಡಿಯಾ ಇದೆ’ ಎಂದರು. ಇಷ್ಟಾಗುತ್ತಿದ್ದಂತೆಯೇ, ಆಯ್ತಲ್ಲ ಎಂದು ಹೊರಟುಬಿಟ್ಟರು. ಅವರ ನಂತರ ರಾಮ್ ತೇಜ, ಸ್ನೇಹಾ ನಾಯರ್, ಚೈತ್ರ, ನಿಸರ್ಗ ಗೌಡ, ಗೌತಮ್, ಐಶ್ವರ್ಯ ದಿನೇಶ್, ಪ್ರಶಾಂತ್ ಮತ್ತು ತುಳಜಾ ರಾಮ್ ಸಿಂಗ್ ಠಾಕೂರ್ ಮಾತನಾಡಿದರು. ಎಲ್ಲರೂ ತಮ¤ಮ್ಮ ಪಾತ್ರಗಳ ಬಗ್ಗೆ ಎರಡೆರೆಡು ಮಾತುಗಳನ್ನು ಹೇಳಿಕೊಳ್ಳುವಷ್ಟರಲ್ಲಿ ಪತ್ರಿಕಾಗೋಷ್ಠಿಯೇ ಮುಗಿದು ಹೋಯಿತು.