Advertisement
ಎಷ್ಟು ಕಲಿತರೂ ಆತ್ಮೋದ್ಧಾರವಾಗದು. ಅಪ್ಪ ಅವರ ಪಾಡಿಗೆ ಅವರು ದುಡಿಯುತ್ತಾರೆ. ಅಮ್ಮನ ಕೈಗೊಂದಿಷ್ಟು ಕೊಡುತ್ತಾರೆ. ಆಕೆಯೋ ಸಂಸಾರವೆಂಬ ನೌಕೆಗೆ ಹುಟ್ಟನ್ನ ಹಾಕುತ್ತಿರುತ್ತಾಳೆ. ಉಳಿದ ಯೋಚನೆ ಇಲ್ಲ ಅವಳಿಗೆ.
Related Articles
Advertisement
ನನ್ನಿಷ್ಟ ಕಷ್ಟಗಳಿಗಿಂತ ಅಣ್ಣನಿಗೇ ಹೆಚ್ಚು ಪ್ರಾಶಸ್ತ್ಯ. ಹೇಳಿದೆನಲ್ಲಾ ನನ್ನದು ಬರಗೆಟ್ಟ ಆತ್ಮ..ಕೇವಲ ಓದು ಓದು ಓದು ಎಂದು ಬೈಯುತ್ತಾರೆ. ಅಣ್ಣನಿಗೇನಾದರೂ ಎದುರು ವಾದಿಸಿದರೆ ಸಾಕು ಧರ್ಮದೇಟು. ಅಮ್ಮನನ್ನು ಸಾಕುವುದು ಮುಂದೆ ಅವನೇ ಅಂತೆ! ನಾನು ಹೊರ ಹೋಗುವವಳಂತೆ! ಹ್ಞುಂ…
ನನಗೊಂದಿಷ್ಟು ಪ್ರೀತಿ ಬೇಕು…ನನ್ನಿಷ್ಟದಂತೆ ಹಾರಾಡಬೇಕು…ಬೊಗಸೆಯಷ್ಟಾದರೂ ಖುಷಿ ಬೇಕು…ಯಾವಾಗಲೂ ಆಗಸದತ್ತ ನಿಟ್ಟಿಸಿ ಬಡಬಡಿಸುತ್ತಿದ್ದೆ.
ಗೆಳತಿ ಮಾತಿಗೆಳೆದಳು. ಅವಳು ಮಾಡಿದ ಜೋಕಿಗೆ ನಕ್ಕು ತಲೆ ತಿರುಗಿಸಿದವಳಿಗೆ, ಬಸ್ಸಿನ ಮೆಟ್ಟಿಲ ಮೇಲೆ ನಿಂತು ನನ್ನತ್ತ ಚೆಂದದ ನೋಟ ಬೀರುತ್ತಿದ್ದ. ಅವನ ಪ್ರತಿ ನಗು ಸಿಕ್ಕಿತು.
ಅರೆ! ನಾನು ಅವನನ್ನು ನೋಡಿ ನಗಲಿಲ್ಲವಲ್ಲಾ!? ಹುಚ್ಚ!
ಎಂದೆನಿಸಿ ಮುಖ ತಿರುವಿದವಳೊಳಗೆ ಅವನ ಸೊಗಸು ಕಂಗಳ ನೋಟ ಹಿತವಾಗಿ ಚುಚ್ಚಿದ್ದು ಮಾತ್ರ ನನಗೇ ಅರಿವಾಗಲಿಲ್ಲ.
ಅವನು ನನ್ನತ್ತ ನೋಡುವುದು, ನಾನು ಅವನತ್ತ ನೋಡುವುದೊಂದು ಪರಿಪಾಠವಾಯಿತು. ನಗುವಿನ ವಿನಿಮಯವಿಲ್ಲ…ಆತಂಕ, ಭಯದ ನಡುವೆ ಕಂಗಳಷ್ಟೇ ಮಾತಿಗಿಳಿಯುತ್ತಿದ್ದವು. ಸೊಗಸಾದ ಪದಗಳು ಅಲ್ಲಿ ನಲಿಯುತ್ತವೆ.
ಅವನು ಯಾರೋ ಗೊತ್ತಿಲ್ಲ. ಬಿಕ್ಕಳಿಸುವ ಎದೆಗೆ ಅವನ ನೋಟವೊಂದೇ ಬಹುದೊಡ್ಡ ಸಾಂತ್ವನ…ಕದಡಿದೆದೆಯ ಹಿರಿ ನೋವಿಗೆ ಅವನ ನೋಟವೇ ಕಷಾಯ…ಅವನ ನೋಟದ ಹಂಬಲಕ್ಕೆ ಬಿದ್ದೆ…ಅಷ್ಟೇ ಸಾಕು ನನಗೆ! ಅವನ ಬೆರಳ ಸಂದಿಗೆ ನನ್ನ ಬೆರಳ ತುರುಕಿ ಬೆಸೆವ ಬಂಧದ ಹಂಗಿರಲಿಲ್ಲ…ಆ ಮಟ್ಟದ ವರೆಗೂ ಯೋಚಿಸಬಲ್ಲ ಪ್ರೌಢಿಮೆಯೂ ನನ್ನಲ್ಲಿರಲಿಲ್ಲವೇನೋ…
ಓದಿ : ಕುಸಿದ ಟೀಂ ಇಂಡಿಯಾಗೆ ನೆರವಾದ ರೋಹಿತ್: ಚೆಪಾಕ್ ನಲ್ಲಿ ಹಿಟ್ ಮ್ಯಾನ್ ಭರ್ಜರಿ ಶತಕ
ಅವನದು ನನ್ನದು ಪ್ರೇಮವೇ…ಇಲ್ಲ ಇಲ್ಲ ಆಕರ್ಷಣೆ…ಇಲ್ಲ…ಮೊದಲ ನೋಟದ ಪ್ರೇಮ…ಬೇಡ ಹುಡುಗಿ ಪ್ರೇಮವೆಂಬ ಹೆಸರಿಡುವುದು ಬೇಡ ನೀನು…ಗೊತ್ತಾಯಿತಾ…! ಮನದೊಳಗಿನ ಸಂಭಾಷಣೆಗಳು ಪ್ರತೀ ರಾತ್ರಿಯನ್ನ ಹೈರಾಣಾಗಿಸುತ್ತಿದ್ದವು.
ಅವನು ಸಿಗುತ್ತಿದ್ದಾಗಲೆಲ್ಲಾ ನೋಟ ಬೆಸೆಯುತ್ತಿದ್ದ…ಅವನ ಕಣ್ಣೊಳಗೆ ಅಸಂಖ್ಯಾತ ಅರ್ಥವಾಗದ ಕವಿತೆಗಳಿದ್ದವು. ಚೆಂದದ ಹುಡುಗ ಅವನು…ಅಯ್ಯೋ ಹದಿಹರೆಯಕ್ಕೆಲ್ಲವೂ ಸುಂದರವೇ ಬಿಡು ಎಂದು ನಕ್ಕಿತು ಒಳ ಮನಸ್ಸು.
ಅವನದು ಮಾತು ಕಮ್ಮಿ. ಸರಳ ಜೀವಿ…ಹೀಗೆಲ್ಲ ಅಂದುಕೊಂಡಿದ್ದೆ. ಮನೆ ಬಾಲ್ಯಕ್ಕೆ, ಹರೆಯಕ್ಕೆ ಕೊಡುತ್ತಿದ್ದ ಪೆಟ್ಟುಗಳಿಗೆ ಅವನ ನೋಟ ಮುಲಾಮು ಹಚ್ಚುತ್ತಿತ್ತು.
ಪ್ರೀತಿಯ ಅಂಕುರ ಬೆಳೆಯುತ್ತಿತ್ತಾ!? ಗೊತ್ತಿಲ್ಲ…ಅವನ ಬಗೆಗೆ ಒಂದಷ್ಟು ವಿಚಾರಗಳು ಕಿವಿಗಂಟುತ್ತಾ ಸಾಗಿದವು.
ಉನ್ನತ ಶಿಕ್ಷಣಕ್ಕಾಗಿ ಪರ ಊರು ಸೇರಿದವಳೊಳಗೂ ಅವನ ಗುಂಗಿತ್ತು. ಅವನೂ ನನ್ನ ತಿಳಿಗನಸಿನಲ್ಲಿದ್ದಾನಾ? ಎಂದು ನನ್ನೊಳಗೆ ನಾನು ಪ್ರಶ್ನಿಸುತ್ತಾ, ಸಂತೈಸಿಕೊಳ್ಳುತ್ತಿದ್ದೆ. ಅವನು ಹಿತವಾದ ಕವಿತೆಯಾಗಿ ಬಿಟ್ಟ. ನನ್ನೊಳಗೆ ಕವಿತೆಯಾಗಿಯೇ ಅವಿತುಬಿಟ್ಟ.
–ಚಂದ್ರಿಕಾ ನಾಗರಾಜ್ ಹಿರಿಯಡಕ