Advertisement

ವ್ಯಾಪಾರಕ್ಕೆ ಮೆಗಾಫೋನ್‌ ಬಳಸಿದರೆ ಕ್ರಮ

11:26 AM Oct 06, 2021 | Team Udayavani |

ಬೆಂಗಳೂರು: ಇನ್ಮುಂದೆ ಮೆಗಾ ಫೋನ್‌ ಬಳಸಿ ರಸ್ತೆ- ರಸ್ತೆಯಲ್ಲಿ ತರಕಾರಿ, ಹಣ್ಣು ಮಾರಾಟವಂತಿಲ್ಲ! ಒಂದು ವೇಳೆ ಜೋರು ಧ್ವನಿಯಲ್ಲಿ ಮೆಗಾ ಫೋನ್‌ ಮೂಲಕ ಮಾರಾಟ ಮಾಡುತ್ತಿದ್ದರೆ ಅಂತಹ ವ್ಯಾಪಾರಿಗಳ ವಿರುದ್ಧ ಪೊಲೀಸರ ಕಾನೂನು ಕ್ರಮಕೈಗೊಳ್ಳಲಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಪುಲಕೇಶಿನಗರ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮೆಗಾ ಫೋನ್‌ ಬಳಸಿ ಶಬ್ಧ ಮಾಲಿನ್ಯ ಉಂಟು ಮಾಡುತ್ತಿದ್ದ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ಸುಮಾರು 15 ಮೆಗಾ ಪೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇತ್ತೀಚೆಗೆ ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಅವರ ಆನ್‌ಲೈನ್‌ ಸಾರ್ವಜನಿಕ ಸಂವಾದದಲ್ಲಿ ಮೆಗಾ ಫೋನ್‌ಗಳಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಸಾಕಷ್ಟು ಮಂದಿ ದೂರು ನೀಡಿದ್ದರು. ಅಪಾರ್ಟ್‌ಮೆಂಟ್‌, ವಸತಿ ಸಮುಚ್ಚಗಳ ಸಮೀಪದಲ್ಲಿ ತರಕಾರಿ, ಹಣ್ಣು, ಬಟ್ಟೆ ವ್ಯಾಪಾರಿಗಳು ಮೆಗಾ ಫೋನ್‌ ಮೂಲಕ ಜೋರು ಶಬ್ಧ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಅದರಿಂದ ಮನೆಯಲ್ಲಿರು ವೃದ್ಧರು, ಮಹಿಳೆಯರು, ಮಕ್ಕಳ ಆನ್‌ಲೈನ್‌ ತರಗತಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದರು.

ಇದನ್ನೂ ಓದಿ:- ಪ್ರಶಸ್ತಿಯ ಸಂತೋಷ ಹಂಚಿಕೊಂಡ ಆರೋಗ್ಯ ಸಚಿವ

ಅಲ್ಲದೆ, ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕವೂ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಕಾರ್ಯಾಚರಣೆಗೆ ಸೂಚಿಸಲಾಗಿದೆ. ಈ ಬೆನ್ನಲ್ಲೇ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೂರ್ವ ವಿಭಾಗದ ಪೊಲೀಸರು ಮಾಹಿತಿ ನೀಡಿದರು. ಪುಲಿಕೇಶಿ ನಗರ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆ ಹಣ್ಣು, ತರಕಾರಿ, ಹೂ, ಬಟ್ಟೆಗಳು ಸೇರಿ ಇತರೆ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಮೆಗಾಫೋನ್‌ಗಳ ಬಳಸಿ ಮಾರಾಟ ಮಾಡುತ್ತಿದ್ದರು.

Advertisement

ಒಂದೇ ಮನೆ ಮುಂಭಾಗ ಸುಮಾರು 15 ನಿಮಿಷಗಳ ಕಾಲ ಪ್ರಕಟಣೆ ಮಾಡುತ್ತಿದ್ದು, ಇದು ಸ್ಥಳೀಯ ನಿವಾಸಿಗಳಲ್ಲಿ ಕಿರಿಕಿರಿ ಉಂಟು ಮಾಡುತ್ತಿತ್ತು. ಹೀಗಾಗಿ ಸೋಮವಾರ ಮುಂಜಾನೆ ಬೆಳಗ್ಗೆ 6.30ರಿಂದ 8.30ರವರೆಗೆ ಪುಲಿಕೇಶಿನಗರ ಠಾಣೆಯ ವಿಶೇಷ ಪೊಲೀಸ್‌ ತಂಡ ಹಡ್ಸನ್‌ ರಸ್ತೆ, ಮಿಲ್ಲರ್ಸ್‌ ರಸ್ತೆಗಳಲ್ಲಿ ಮೆಗಾಫೋನ್‌ಗಳನ್ನು ಬಳಸಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಮೆಗಾಫೋನ್‌ ಬಳಸದಂತೆ ಸೂಚಿಸಿ, ಸುಮಾರು 15 ಮೆಗಾ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು.  ನಂತರ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಕಾರ್ಯಾಚರಣೆ ನಡೆಯಲಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next