ಬೆಂಗಳೂರು: ಗೋವಿಂದರಾಜ ನಗರದ ಕಾರ್ಪೊರೇಷನ್ ಕಾಲೋನಿಯ ಆಯೆಷಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಧ್ವನಿವರ್ಧಕ ಬಳಸಲು ಸ್ಥಳೀಯ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪರವಾನಗಿ ನೀಡಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಈಕುರಿತು ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮಸೀದಿಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ತಡೆಯಲು ಪೊಲೀಸರಿಗೆ ನಿರ್ದೇಶಿಸ ಬೇಕು ಎಂದು ಕೋರಿ ಸ್ಥಳೀಯ ನಿವಾಸಿ ಸುಮಂಗಲಾ ಎ. ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಧ್ವನಿವರ್ಧಕ ಬಳಸಲು ಮಸೀದಿಯ ಆಡಳಿತ ಮಂಡಳಿ ಪರವಾನಗಿ ಪಡೆದಿದೆಯೇ? ಆ ಪರವಾನಗಿ ನೀಡಿದವರು ಯಾರು ಮತ್ತು ಪರವಾನಗಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಫೆ.10ರ ವಿಚಾರಣೆ ವೇಳೆ ಹೈಕೋರ್ಟ್ ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿತ್ತು. ಅದರಂತೆ, ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಾಗ ಸರ್ಕಾರದ ಪರ ವಕೀಲರು, ಧ್ವನಿ ವರ್ಧಕ ಬಳಸಲು ಮಸೀದಿಯ ಆಡಳಿತ ಮಂಡಳಿಗೆ ವಿಜಯನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ 2015ರ ಮಾ.26ರಂದು ನೀಡಿರುವ ಅನುಮತಿ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದನ್ನು ಪರಿಶೀಲಿಸಿದ ನ್ಯಾಯಪೀಠ, “ಶಬ್ದ ಮಾಲಿನ್ಯ (ನಿಯಂತ್ರಣ) ಅಧಿನಿಯಮ-2000′ ರನ್ವಯ ಉಪ ಪೊಲೀಸ್ ಆಯುಕ್ತರಿಗಿಂತ ಮೇಲಿನ ಶ್ರೇಣಿಯ ಅಧಿಕಾರಿ ಧ್ವನಿವರ್ಧಕ ಬಳಕೆಗೆ ಪರವಾನಗಿ ನೀಡಬಹುದು. ಆದರೆ, ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪರವಾನಗಿ ನೀಡಿದ್ದಾರೆ. ಅದೂ ಸಹ 2015ರ ಮಾ.26ರಂದು ಪರವಾನಗಿ ನೀಡಲಾಗಿದ್ದು, ನಿಗದಿತ ಅವಧಿಗೆ ಪರವಾನಗಿ ಎಂದು ನಮೂದಿಸಿಲ್ಲ. ಇದು ಒಂದು ರೀತಿಯಲ್ಲಿ “ಶಾಶ್ವತ ಪರವಾನಗಿ’ ನೀಡಿದಂತಾಗಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ನಿರ್ದೇಶನ ನೀಡಿತು.
ಅಲ್ಲದೇ, ಮಸೀದಿಯಲ್ಲಿ ಬಳಸಲಾಗುತ್ತಿರುವ ಧ್ವನಿವರ್ಧಕಗಳ ಶಬ್ದದ “ಡೆಸಿಬಲ್’ ಮಾಪನ ಮಾಡಿ ನ್ಯಾಯಾಲಯಕ್ಕೆ ವರದಿ ಕೊಡಲು ಒಬ್ಬ ಅಧಿಕಾರಿಯನ್ನು ನೇಮಿಸುವಂತೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿತು. ಅಂತೆಯೇ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ವರದಿ ಇದಾಗ್ಯೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಸ್ಪಷ್ಟನೆ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಆಯೆಷಾ ಮಸೀದಿಯಲ್ಲಿ ನಿತ್ಯ ಐದು ಬಾರಿ ನಮಾಜ್ ಮಾಡಲಾಗುತ್ತಿದೆ. ಈ ವೇಳೆ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ. ಅವುಗಳ ಬಳಕೆಯಿಂದ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಪ್ರಾರ್ಥನೆ ಮಾಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ, ಪ್ರಾರ್ಥನೆ ವೇಳೆ ಶಬ್ದ ಮಾಲಿನ್ಯ ಆಗುತ್ತಿರುವುದನ್ನು ಆಕ್ಷೇಪಿಸುತ್ತಿದ್ದೇವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಕುರಿತಂತೆ ಪೊಲೀಸರಿಗೆ ಮನವಿ ಮಾಡಲಾಗಿತ್ತು. ಪೊಲೀಸರು, ಮನವಿಯನ್ನು ಪರಿಶೀಲಿಸಿ ಸರ್ಕಾರವೇ ಅನುಮತಿ ನೀಡಿದೆ ಎಂದು ಹೇಳಿದ್ದರು. ಹೀಗಾಗಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು.