Advertisement

ಚಾಮರಾಜನಗರದ ಉಮ್ಮತ್ತೂರಿನಲ್ಲಿ ಭಾರಿ ಶಬ್ದ: ಆತಂಕಕ್ಕೊಳಗಾದ ಜನರು

09:17 PM Sep 16, 2022 | Team Udayavani |

ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 3.40 ರ ಸಮಯದಲ್ಲಿ ಭಾರಿ ಶಬ್ದ ಕೇಳಿ ಬಂದ ಅನುಭವ ಜನರಿಗಾಗಿದ್ದು ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.ಈ ರೀತಿಯ ಭಾರಿ ಶಬ್ದವನ್ನು ನಾವು ಹಿಂದೆ ಕೇಳಿರಲಿಲ್ಲ. ಈ ಶಬ್ದ ಕೇಳಿಬಂದ ಅನೇಕ ಸೆಕೆಂಡ್‌ಗಳವರೆಗೂ ಶಬ್ದದ ತರಂಗ ಕೇಳಿಬರುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದರು.

Advertisement

ಈ ನಿಗೂಢ ಶಬ್ದಕ್ಕೆ ಕಾರಣವೇನು? ಎಂದು ಜನರು ಆತಂಕಗೊಂಡಿದ್ದರು. ಇದೇ ರೀತಿಯ ಶಬ್ದ ತಾಲೂಕಿನ ದಡದಹಳ್ಳಿ, ಬಸಪ್ಪನಪಾಳ್ಯ ಗ್ರಾಮಗಳಲ್ಲಿ ಮೂರು ದಿನಗಳ ಹಿಂದೆ ಕೇಳಿಬಂದಿತ್ತು.

ಈ ಬಗ್ಗೆ ಉದಯವಾಣಿ ಹಿರಿಯ ಭೂವಿಜ್ಞಾನಿ, ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ಅವರನ್ನು ಸಂಪರ್ಕಿಸಿದಾಗ, ಅವರು ಪ್ರತಿಕ್ರಿಯಿಸಿ, ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಅಪರೂಪಕ್ಕೆ ಹೆಚ್ಚಿನ ಮಳೆ ಬಿದ್ದಾಗ, ಅಂತರ್ಜಲ ಮಟ್ಟ ಹೆಚ್ಚಾಗಿ ಭೂಮಿಯಲ್ಲಿ ನೀರಿನ ಒತ್ತಡ ಜಾಸ್ತಿಯಾಗುತ್ತದೆ. ಭೂಮಿಯೊಳಗೆ ಅನೇಕ ಟೊಳ್ಳು ಜಾಗಗಳಿರುತ್ತವೆ. ಅತೀವ ಮಳೆಯಿಂದಾಗಿ ಭೂಮಿಯೊಳಗಿನ ಬಂಡೆಗಳು ಸರಿದಾಡಿದಾಗ ಈ ರೀತಿಯ ಶಬ್ದಗಳು ಕೇಳಿ ಬರುವ ಸಾಧ್ಯತೆಗಳಿವೆ ಎಂದರು.

ರಾಜ್ಯದ ಯಾವುದೇ ಭಾಗದಲ್ಲಿ ಇಂದು ಭೂಕಂಪನ ದಾಖಲಾಗಿಲ್ಲ. ಹಾಗಾಗಿ ಇದು ಭೂಕಂಪನವಲ್ಲ. ಜನರು ಆತಂಕಕ್ಕೊಳಗಾಬಾರದು ಎಂದು ಅವರು ಸ್ಪಷ್ಟಪಡಿಸಿದರು.

ಯಳಂದೂರು ವರದಿ
ಪಟ್ಟಣವೂ ಸೇರಿದಂತೆ ತಾಲೂಕಿನ ಯರಿಯೂರು, ಕಂದಹಳ್ಳಿ, ಮೆಳ್ಳಹಳ್ಳಿ, ದುಗ್ಗಹಟ್ಟಿ, ಸಮೀಪದ ಸಂತೆಮರಹಳ್ಳಿ ಗ್ರಾಮಗಳಲ್ಲಿ ಶುಕ್ರವಾರ ಸಂಜೆ 3.40 ರ ಸಮಯದಲ್ಲಿ ಗಂಟೆ ವೇಳೆ ಭಾರಿ ಶಬ್ಧವಾಗಿದ್ದು ಸಾರ್ವಜನಿಕರು ಬೆಚ್ಚಿಬಿದ್ದಿರುವ ಘಟನೆ ಜರುಗಿದೆ.

Advertisement

ಇದ್ದಕ್ಕಿಂತೆಯೇ ಕಿವಿಗಪ್ಪಳಿಸಿದ ಭಾರಿ ಶಬ್ಧದಿಂದ ಸಾರ್ವಜನಿಕರು ಕ್ಷಣ ಕಾಲ ಬೆಚ್ಚಿದ್ದಾರೆ. ಅಲ್ಲದೆ ಕೆಲವು ಮನೆಗಳಲ್ಲಿ ಫ್ಯಾನ್, ಅಡುಗೆ ಪಾತ್ರೆಗಳು, ಟಿವಿಗಳು ಅಲುಗಾಡಿರುವುದಾಗಿ ಕೆಲವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದ್ದಕ್ಕಿದಂತೆಯೇ ಭೂಮಿ ಕಂಪಿಸಿದ ಅನುಭವವಾಗಿದ್ದು ಕೆಲ ನಾಗರೀಕರು ಮನೆಯಿಂದ ಹೊರಬಂದಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಈ ಶಬ್ಧ ಎಲ್ಲಿಂದ ಬಂತು ಎಂಬುದರ ಬಗ್ಗೆ ಯಾರಿಗೂ ಖಾತ್ರಿಯಾಗಿಲ್ಲ. ಈಚೆಗೆ ಚಾಮರಾಜನಗರ ತಾಲೂಕಿನ ಕೆಲ ಗ್ರಾಮಗಳಲ್ಲಿ ಇದೆ ತೆರನಾದ ಅನುಭವವಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಗಣಿ, ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಮಾಹಿತಿ ನೀಡಬೇಕಿದೆ.

ಕೆ.ಎಂ. ನಂಜುಂಡಸ್ವಾಮಿ, ಉಪ ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚಾಮರಾಜನಗರ : ಸತತ ಮಳೆಯಿಂದ ಭೂಗರ್ಭದೊಳಗೆ ಹೆಚ್ಚು ನೀರು ಸೇರುತ್ತದೆ. ಈ ಭಾಗವೆಲ್ಲಾ ಸುವರ್ಣಾವತಿ ನದಿ ದಡದಲ್ಲಿದ್ದು ಪ್ರವಾಹದಿಂದ ಬಂದಿರುವ ನೀರು ಭೂಮಿಯೊಳೆಗೆ ಸೇರಿದೆ. ಗಾಳಿಯ ಒತ್ತಡ ಹೆಚ್ಚಾಗಿ ಹೀಗಾಗುತ್ತದೆ. ಇದೊಂದು ಭೂಗರ್ಭದ ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಇದನ್ನು ಡೈನಾಮಿಕ್ ಪ್ರೆಷರ್ ಎಂದು ಕರೆಯಲಾಗುವುದರಿಂದ ಇಂತಹ ಶಬ್ಧ ಬಂದಿರಬಹುದು ಇದು ಭೂಕಂಪವಲ್ಲ. ಸಾರ್ವಜನಿಕರು ಹೆದರುವ ಅಗತ್ಯವಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next