Advertisement

ಸುಳ್ಳಿನ ಕೆಸರಿನಲ್ಲಿ ಅರಳಿರುವ ಕಮಲಕ್ಕೆ ಜನರಿಂದ ತಕ್ಕ ಪಾಠ: ಎಚ್‌. ಆಂಜನೇಯ

03:00 PM May 20, 2022 | Team Udayavani |

ಹೊಳಲ್ಕೆರೆ: ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಬೆಂಗಳೂರಿನಲ್ಲಿ ಚಳಿ, ಮಳೆ, ಗಾಳಿ, ಬಿಸಿಲು ಎನ್ನದೆ ಧರಣಿ ನಡೆಸುತ್ತಿದ್ದಾರೆ. ಧರಣಿ ಸ್ಥಳಕ್ಕೆ ಹೋಗಿ ಸ್ವಾಮೀಜಿಯವರ ಮನವೊಲಿಸುವ ಕಾರ್ಯವನ್ನು ಸರ್ಕಾರ ಮಾಡಿಲ್ಲ. ಈ ಮೂಲಕ ಮಠಾಧೀಶರಿಗೆ ಬಿಜೆಪಿ ನಾಯಕರು ಅವಮಾನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎಚ್‌. ಆಂಜನೇಯ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

Advertisement

ಬಾಯಿ ಬಿಟ್ಟರೆ ಧರ್ಮ, ಮಠಾಧೀಶರನ್ನು ಗೌರವಿಸುವ ಪಕ್ಷ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಮುಖಂಡರಿಗೆ ಹಿಂದೂ ಧರ್ಮದ ಮಠಾಧೀಶರ ಮೇಲೆ ಗೌರವ ಇಲ್ಲವೆಂಬುದು ವಾಲ್ಮೀಕಿ ಶ್ರೀಗಳ ಧರಣಿ ನೂರು ದಿನ ಪೂರೈಸಿರುವುದೇ ಸಾಕ್ಷಿಯಾಗಿದೆ. ಇದರಿಂದ ಆಕ್ರೋಶಗೊಂಡಿರುವ ನಾಯಕ ಸಮುದಾಯ ರಾಜ್ಯಾದ್ಯಂತ ಮೇ 20ರಂದು ಬೃಹತ್‌ ಪ್ರತಿಭಟನೆಗೆ ಕರೆ ನೀಡಿದೆ. ಈ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲ ಇದ್ದು, ಶುಕ್ರವಾರ ಶ್ರೀಗಳು ನಡೆಸುತ್ತಿರುವ ಧರಣಿ ಸ್ಥಳಕ್ಕೆ ತೆರಳಿ ಅವರ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲ ನೀಡಲಾಗುವುದು. ಅಗತ್ಯ ಇದ್ದಲ್ಲಿ ಶ್ರೀಗಳ ಸೂಚನೆ ಮೇರೆಗೆ ಹೋರಾಟ ರೂಪಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಪ್ರತಿಭಟನೆ ಬಳಿಕವೂ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಹೆಚ್ಚಳಕ್ಕೆ ಕ್ರಮ ಕೈಗೊಳ್ಳದಿದ್ದರೆ ಸುಳ್ಳಿನ ಕೆಸರಿನಲ್ಲಿ ಅರಳಿರುವ ಕಮಲಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸಾಲು ಸಾಲು ಸುಳ್ಳು ಭರವಸೆ ನೀಡಿ ಬಹುಮತ ಗಳಿಸುವಲ್ಲಿ ವಿಫಲಗೊಂಡು ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಮೀಸಲಾತಿ ಹೆಚ್ಚಳ, ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ, ರಾಜಕೀಯದಲ್ಲಿ ಉನ್ನತ ಸ್ಥಾನಮಾನ, ಬಿ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಆಸೆ ತೋರಿಸಿ ಅಧಿಕಾರಕ್ಕೆ ಬಂದು ನಾಯಕ ಸಮುದಾಯವನ್ನು ಕಡೆಗಣಿಸಲಾಗಿದೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಎಸ್‌ಟಿ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಲಾಗುವುದು. ಬೇಕಿದ್ದರೆ ಈಗಲೇ ರಕ್ತದಲ್ಲಿ ಬರೆದು ಕೊಡುತ್ತೇವೆ ಎಂದು ಬಿಜೆಪಿ ಮುಖಂಡರು ಬಹಿರಂಗವಾಗಿ ಹೇಳಿಕೆ ಮೂಲಕ ನಾಯಕ ಸಮುದಾಯವನ್ನು ನಂಬಿಸಿದ್ದರು.

ಇದರ ಪರಿಣಾಮ ಬಿಜೆಪಿ ರಾಜ್ಯದಲ್ಲಿ ವಾಲ್ಮೀಕಿ ನಾಯಕ, ಪರಿಶಿಷ್ಟರು ಸೇರಿದಂತೆ ಅನೇಕ ಸಮುದಾಯಗಳ ಮತ ಗಳಿಸಿ ಹೆಚ್ಚು ಸ್ಥಾನ ಪಡೆದುಕೊಂಡಿತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಉಪಮುಖ್ಯಮಂತ್ರಿ ಕನಸು ಕಂಡಿದ್ದ ಬಿ. ಶ್ರೀರಾಮುಲು ಭ್ರಮನಿರಸನಗೊಂಡಿದ್ದಾರೆ. ಮಂತ್ರಿ ಆಗಿ ಉಳಿದರೆ ಸಾಕು ಎನ್ನುವ ಪರಿಸ್ಥಿತಿಯಲ್ಲಿದ್ದಾರೆ ಎಂದು ಆಂಜನೇಯ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next