Advertisement

ರಾಜ್ಯಾದ್ಯಂತ ಕಮಲ ಜಾತ್ರೆ

06:25 AM Mar 01, 2018 | Team Udayavani |

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಯೋಜನೆ ರೂಪಿಸಲು ಜನರ ನಾಡಿ ಮಿಡಿತ ಅರಿಯಲು ಪರಿವರ್ತನಾ ಯಾತ್ರೆ ನಡೆಸಿದ ಬಿಜೆಪಿ ನಾಯಕರು, ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೈಗೊಂಡಿರುವ ಕಾರ್ಯಕ್ರಮಗಳ ಮೂಲಕ ರಾಜ್ಯದ ಗ್ರಾಮೀಣ ಜನರನ್ನು ತಲುಪುವ ಉದ್ದೇಶದಿಂದ ರಾಜ್ಯದಲ್ಲಿ ಕಮಲ ಜಾತ್ರೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ.

Advertisement

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಮೊಟ್ಟ ಮೊದಲ ಬಾರಿಗೆ ಕಮಲ ಜಾತ್ರೆಯನ್ನು 34 ಸ್ಥಳಗಳಲ್ಲಿ ನಡೆಸಿದಾಗ 25 ಲಕ್ಷ ಮಂದಿ ಪಾಲ್ಗೊಂಡಿದ್ದರು. ಇದು ಚುನಾವಣೆಯಲ್ಲೂ ಬಿಜೆಪಿಗೆ ಲಾಭ ತಂದುಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಫೆ.16ರಿಂದ 18ರವರೆಗೆ ಜೇವರ್ಗಿಯಲ್ಲಿ ಪ್ರಾಯೋಗಿಕವಾಗಿ ನಡೆದ ಕಮಲ ಜಾತ್ರೆಯಲ್ಲಿ 54 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ 30 ಕಡೆ ಕಮಲ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಅರವಿಂದ ಲಿಂಬಾವಳಿ,ನಿಗದಿತ ಸ್ಥಳಗಳಲ್ಲಿ ಮೂರು ದಿನ ಜಾತ್ರೆ ವಾತಾವರಣ ನಿರ್ಮಿಸಿ ಅಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನತೆಯನ್ನು ತಲುಪಿ ಅವರಲ್ಲಿ ಬಿಜೆಪಿ ಪರ ಒಲವು ಮೂಡಿಸುವುದು ಕಮಲ ಜಾತ್ರೆಯ ಉದ್ದೇಶ ಎಂದು ಹೇಳಿದರು.

ಮೊದಲ ಹಂತದಲ್ಲಿ ಮಾ.2ರಿಂದ 4ರವರೆಗೆ ಬೀದರ್‌ನ ಭಾಲ್ಕಿಯ ಚನ್ನಬಸವ ಆಶ್ರಮ ಮೈದಾನ, ಕಲಬುರಗಿ ದಕ್ಷಿಣದ ಏಷ್ಯನ್‌ ಮಾಲ್‌ ಪಕ್ಕದ ಮೈದಾನ, ಯಾದಗಿರಿಯ ಬಾಲಾಜಿ ಮಂದಿರದ ಎದುರು, ರಾಯಚೂರು-ಮಂತ್ರಾಲಯ ರಸ್ತೆಯ ಗಿಲ್ಲೆಸುಗೂರು, ಕೊಪ್ಪಳದ ಗಂಗಾವತಿಯ ಅಮರ್‌ ಭಗತ್‌ಸಿಂಗ್‌ ನಗರ, ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಶ್ರೀಹರ ಕಲ್ಯಾಣಮಂಟಪದ ಎದುರು, ಮೈಸೂರು ಜಿಲ್ಲೆ ನಂಜನಗೂಡು ಕೆಂಪೇಗೌಡ ಲೇಔಟ್‌, ತುಮಕೂರು ಗ್ರಾಮೀಣದ ಗಣಪತಿ ಕಾಲೇಜು ಹಿಂಭಾಗ ಹಾಗೂ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಕಮಲ ಜಾತ್ರೆ ಏರ್ಪಡಿಸಲಾಗಿದೆ. ಈ ಜಾತ್ರೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸುವುದಿಲ್ಲ ಎಂದು ಹೇಳಿದರು.

ಇದಾದ ಬಳಿಕ ವಾರಾಂತ್ಯದ ಮೂರು ದಿನ ಉಳಿದ ಕಡೆ ಹಂತ ಹಂತವಾಗಿ ಕಮಲ ಜಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು, ಜಾತ್ರೆ ಮೂಲಕ 15 ಲಕ್ಷಕ್ಕೂ ಹೆಚ್ಚು ಮತದಾರರನ್ನು ನೇರವಾಗಿ ಮತ್ತು ಒಂದು ಕೋಟಿಗೂ ಹೆಚ್ಚು ಮತದಾರರನ್ನು ಪರೋಕ್ಷವಾಗಿ ತಲುಪಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Advertisement

ಶಾಸಕ ಬಿ.ಎನ್‌.ವಿಜಯಕುಮಾರ್‌, ಬಿಜೆಪಿ ವಕ್ತಾರರಾದ ಡಾ.ವಾಮನ್‌ ಆಚಾರ್ಯ, ಅಶ್ವತ್ಥನಾರಾಯಣ, ಸಹವಕ್ತಾರ ಪ್ರಕಾಶ್‌, ಮಾಧ್ಯಮ ಪ್ರಮುಖ್‌ ಶಾಂತಾರಾಮ್‌ ಸುದ್ದಿಗೋಷ್ಠಿಯಲ್ಲಿದ್ದರು.

ಏನಿದು ಕಮಲ ಜಾತ್ರೆ?
ಆಟೋಟ, ಜಾದೂ, ಲೇಸರ್‌ ಶೋ ಮುಂತಾದ ಮನರಂಜನೆಗಳ ಮಾಹಿತಿಯೊಂದಿಗೆ 3 ದಿನಗಳ ಕಾಲ ಸ್ಥಳೀಯರನ್ನು ರಾಜಕೀಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಮಲ ಜಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಜನ್‌ ಧನ್‌, ಮುದ್ರಾ, ಉಜ್ವಲಾ ಮತ್ತಿತರ ಯೋಜನೆಗಳು, ರಾಜ್ಯ ಬಿಜೆಪಿ ಸರ್ಕಾರದ ಅವಧಿಯ ಭಾಗ್ಯಲಕ್ಷ್ಮೀ, ಭೂ ಚೇತನ ಮುಂತಾದ ಸಾಧನೆಗಳ ಕುರಿತು ಬೆಳಕು ಚೆಲ್ಲುವ ಎಲ್‌ಇಡಿ ಪರದೆ ಪ್ರದರ್ಶನ, ಆಹಾರ ಮಳಿಗೆ, ಮಕ್ಕಳಿಗೆ ಆಟೋಟ ಮತ್ತು ಚಾಯ್‌ಪೇ ಚರ್ಚಾ, ನಗೆಕೂಟ, ಸಂಚಾರಿ ಥಯೇಟರ್‌,ಜಾದೂ, ಸೆಲ್ಫಿ ಬೂತ್‌ಗಳು ಇರುತ್ತವೆ. ಬಿಜೆಪಿ ಪರಿಕಲ್ಪನೆಯ ಮೆಹಂದಿ ಮತ್ತು ಟ್ಯಾಟೂಗಳನ್ನು ಹಾಕಲಾಗುತ್ತದೆ. ಜನರ ಅಶೋತ್ತರಗಳನ್ನು ಸಂಗ್ರಹಿಸಲು ಕಿಯೋಸ್ಕ್ ಅಳವಡಿಸಲಾಗುತ್ತದೆ.

ಇದರ ಜತೆಗೆ ಸಾರ್ವಜನಿಕರಿಗೆ ಸಂಗೀತ ಕುರ್ಚಿ, ರಸಪ್ರಶ್ನೆ ಸ್ಪರ್ಧೆಗಳು, ರಸಮಂಜರಿ ಮತ್ತಿತರ ಕಾರ್ಯಕ್ರಮಗಳಿದ್ದು, ನಿರೂಪಕರು ಬಿಜೆಪಿ ಸಾಧನೆಗಳ ಬಗ್ಗೆಯೂ ಮಾಹಿತಿ ನೀಡುತ್ತಾರೆ. ಪ್ರತಿ ದಿನ ಸಂಜೆ ಬಳಿಕ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರ ಬದುಕು, ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಲೇಸರ್‌ ಶೋ ಪ್ರದರ್ಶನವಿರುತ್ತದೆ. ರಾಷ್ಟ್ರೀಯ ಏಕತೆಯ ಪರಿಕಲ್ಪನೆಯ ಮಲ್ಲಕಂಬ ಪ್ರದರ್ಶನದ ಮೂಲಕ ಜಾತ್ರೆಗೆ ತೆರೆ ಬೀಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next