Advertisement

ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಕಮಲ ಕಿಲ ಕಿಲ

06:12 PM Dec 31, 2021 | Team Udayavani |

ಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣಾ ಫಲಿತಾಂಶ ಗುರುವಾರ ಹೊರಬಿದ್ದಿದೆ. ಆಡಳಿತಾರೂಢ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಮೂಲಕ ನಗರಸಭೆ ಇತಿಹಾಸದಲ್ಲೇ ಬಿಜೆಪಿ ಎರಡನೇ ಬಾರಿಗೆ ಅಧಿಕಾರ ಹಿಡಿಯಲಿದೆ.

Advertisement

35 ವಾರ್ಡ್‌ಗಳ ಪೈಕಿ 18 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಬಿಜೆಪಿ ಸರಳ ಬಹುಮತ ಪಡೆದಿದ್ದು, ಕಾಂಗ್ರೆಸ್‌ 15 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಅವ ಧಿಯಲ್ಲಿ ಕಾಂಗ್ರೆಸ್‌ 20, ಬಿಜೆಪಿ 5, ಬಿಎಸ್‌ಆರ್‌ 6, ಕೆಜೆಪಿ 1 ಹಾಗೂ ಇಬ್ಬರು ಪಕ್ಷೇತರರಿದ್ದರು. ಬಹುಮತ ಹೊಂದಿದ್ದ ಕಾಂಗ್ರೆಸ್‌ ಅಧಿಕಾರ ಹಿಡಿದಿತ್ತು. ಆದರೆ, ಬದಲಾದ ಪರಿಸ್ಥಿತಿ ಹಾಗೂ ಆಡಳಿತ ವಿರೋಧಿ ಅಲೆಯಿಂದಾಗಿ ನಗರಸಭೆಯಲ್ಲಿ ಮತ್ತೂಮ್ಮೆ ಅಧಿಕಾರ
ಹಿಡಿಯುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ.

2 ವರ್ಷ ಹಿಂದೆಯೇ ನಗರಸಭೆ ಅವಧಿ ಪೂರ್ಣ ಗೊಂಡಿತ್ತು. ಆದರೆ, ಮೀಸಲಾತಿ ಮತ್ತು ವಾರ್ಡ್‌ ವಿಂಗಡಣೆ ಕಾರಣಗಳಿಂದಾಗಿ ಕೆಲವರು ಕೋರ್ಟ್‌ ಮೊರೆ ಹೋಗಿದ್ದರಿಂದ ಚುನಾವಣೆ ವಿಳಂಬವಾಗಿತ್ತು. ಕೆಲವರು ತಾವು ಬಯಸಿದ ಪಕ್ಷದಿಂದ ಟಿಕೆಟ್‌ ಸಿಗದ್ದರಿಂದ ಸ್ವತಂತವಾಗಿ ಸ್ಪ ರ್ಧಿಸಿದ್ದರಿಂದ ಚುನಾವಣಾ ಫಲಿತಾಂಶದ ಮೇಲೆ ನೇರ ಪ್ರಭಾವ ಬೀರಿತು. ಕೆಲ ವಾರ್ಡ್‌ಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ಗೆಲುವಿನ ಹಾದಿ ಸುಗಮವಾಗಿದ್ದರೂ, ಪಕ್ಷೇತರರು
ಅಡ್ಡಿಯಾದರು. ಇದರಿಂದ ಕೆಲವರಿಗೆ ನಿರೀಕ್ಷಿಸಿದಷ್ಟು ಅಂತರ ದೊರೆಯದಿದ್ದರೆ, ಇನ್ನೂ ಕೆಲವರಿಗೆ ಸೋಲಿನ ಕಹಿ ನೀಡಿತು.

ಅರಳಿದ ಕಮಲ: ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆಯೂ ಎರಡು ಕಡೆ ಪಕ್ಷೇತರರು ಗೆಲುವಿನ ನಗೆ ಬೀರಿದರು. ಅಲ್ಲದೇ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ್ದ ವಾರ್ಡ್‌ಗಳ ಪೈಕಿ 7 ವಾರ್ಡ್‌ಗಳಲ್ಲಿ ಕಮಲ ಅರಳಿದೆ. 11, 30, 31, 32, 33, 34 ಹಾಗೂ 35ನೇ ವಾರ್ಡ್‌ ನಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಚೆಲ್ಲಿದ್ದಾರೆ. ಅದರಂತೆ ಬಿಜೆಪಿ ಪ್ರಾಬಲ್ಯ ಹೊಂದಿದ್ದ 6, 8, 10ನೇ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ವಿಜಯ ಪತಾಕೆ ಹಾರಿಸಿದ್ದು, 21ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಗೆ ಗೆಲುವಿನ ಮಾಲೆ ಸಂದಿದೆ. ಇನ್ನುಳಿದಂತೆ 1, 2, 3, 4, 5 ಸೇರಿದಂತೆ ಇನ್ನಿತರೆ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ತನ್ನ ಬಿಗಿಪಟ್ಟು ಮುಂದುವರಿಸಿದೆ.

ಸಂಘಟಿತ ಹೋರಾಟ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ನೇತƒತ್ವದಲ್ಲಿ ಬಿಜೆಪಿ ನಾಯಕರು ಸಂಘಟಿತ ಹೋರಾಟ ನಡೆಸಿದ್ದರು. ಈ ಬಾರಿ ನಗರಸಭೆ ವಶಕ್ಕೆ ಪಡೆಯುವುದು ಶತಸಿದ್ಧ ಎಂಬ ಸಂದೇಶ ಸಾರಿದ್ದ ಸಚಿವರು, ಅದಕ್ಕಾಗಿ ರಣತಂತ್ರ ರೂಪಿಸಿದ್ದರು. ಅಭ್ಯರ್ಥಿಗಳ ಆಯ್ಕೆ, ಬಂಡಾಯ ಅಭ್ಯರ್ಥಿಗಳ ಮನವೊಲಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮೇಲಾಗಿ ಚುನಾವಣಾ ದಿನಾಂಕ ಘೋಷಣೆಯಿಂದ ಮತದಾನ ಮುಗಿಯುವವರೆಗೆ ಬಿಜೆಪಿ ಯುವ ಮುಖಂಡ ಅನಿಲ್‌ ಮೆಣಸಿನಕಾಯಿ ಅಬ್ಬರದ ಪ್ರಚಾರ ನಡೆಸಿದ್ದರು. ಅವರಿಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಕೂಡಾ ಸಾಥ್‌ ನೀಡಿದ್ದರಿಂದ ಹಲವು ವಾರ್ಡ್‌ಗಳಲ್ಲಿ ಫಲಿಸಿದೆ. ಇನ್ನೂ ಚುನಾವಣೆಯಲ್ಲಿ ಪ್ರಚಾರ, ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್‌ ಸಾಕಷ್ಟು ಪರಿಪಕ್ವತೆ ತೋರಿದ್ದರೂ, ಹಲವು ವಾರ್ಡ್‌ಗಳಲ್ಲಿ ಗೆಲುವು ದೊರೆಯಲಿಲ್ಲ.

Advertisement

ಫಲಿತಾಂಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು, ಕಾರ್ಯಕರ್ತರು ಶ್ರೀ ಗುರು ಬಸವ ಆಂಗ್ಲಮಾಧ್ಯಮ ಶಾಲೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ತಮ್ಮ ಅಭ್ಯರ್ಥಿ ಗೆಲುವು ಘೋಷಣೆಯಾಗುತ್ತಿದ್ದಂತೆ ಪರಸ್ಪರ ಗುಲಾಲು ಎರಚಿಕೊಂಡು, ಕುಣಿದು ಕುಪ್ಪಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next