Advertisement

ಹಾರನಹಳ್ಳಿಯಲ್ಲಿ ಸಮಸ್ಯೆಗಳ ಸರಮಾಲೆ

02:31 PM Jul 30, 2019 | Suhan S |

ಅರಸೀಕೆರೆ: ಹಾರನಹಳ್ಳಿ ಗ್ರಾಮ ಚುನಾಯಿತ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಮಸ್ಯೆಗಳನ್ನೇ ಹೊದ್ದು ಮಲಗಿದೆ.

Advertisement

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಜನ-ಜಾನುವಾರುಗಳು ಪ್ರತಿ ನಿತ್ಯ ಹನಿ ನೀರಿಗೂ ಪರದಾಡುವ ಸನ್ನಿವೇಶ ನಿರ್ಮಾಣ ಗೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಜ್ಞವೈದ್ಯರ ಕೊರತೆ ಎದುರಾಗಿದ್ದು, ಗ್ರಾಮಸ್ಥರು ಅನಿವಾರ್ಯವಾಗಿ ನಗರದ ಖಾಸಗಿ ಅಸ್ಪತ್ರೆಗಳಿಗೆ ತೆರಳುವುದು ಅನಿವಾರ್ಯತೆ ಎದುರಾಗಿದೆ.

ಐತಿಹಾಸಿಕ ದೇಗುಲಗಳು ನಿರ್ವಹಣೆಯ ಕೊರತೆಯಿಂದಾಗಿ ಶಿಥಿಲಾವಸ್ಥೆ ತಲುಪಿದ್ದು, ಪತನದ ಅಂಚಿಗೆ ಬಂದು ನಿಂತಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

1960ರ ದಶಕದಲ್ಲಿ ತಾಲೂಕು ಕೇಂದ್ರವೆಂದು ಗುರುತಿಸಿಕೊಂಡಿದ್ದ ಈ ಗ್ರಾಮದಲ್ಲಿ ಪ್ರಸ್ತುತ 1,650 ಕ್ಕೂ ಹೆಚ್ಚು ಕುಟುಂಬಗಳಿದ್ದು 11 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಕಳೆದ ಏಳೆಂಟು ವರ್ಷಗಳಿಂದ ಮಳೆ ಕೈಕೊಟ್ಟ ಪರಿಣಾಮ ಗ್ರಾಪಂ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುತ್ತಿದ್ದ ಬಹುತೇಕ ಕೊಳವೆ ಬಾವಿಗಳು ಬತ್ತಿಹೋಗಿವೆ. ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ತಾ.ಪಂ. ಆಡಳಿತ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇಂತಹ ಪರಿಸ್ಥಿಯಲ್ಲಿ ನಾಗರಿಕರ ನೆರವಿಗೆ ಧಾವಿಸ ಬೇಕಿದ್ದ ಜಿಪಂ, ತಾಪಂ, ಗ್ರಾಪಂ ಆಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳು ಜಾಣ ಮೌನಕ್ಕೆ ಶರಣಾ ಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಇಚ್ಛಾಶಕ್ತಿಯ ಕೊರತೆ: ಗ್ರಾಪಂನಲ್ಲಿ ಆಗಾಗ ಉದ್ಭವಿ ಸುತ್ತಿರುವ ರಾಜಕೀಯ ಅನಿಶ್ಚಿತತೆಯ ವಾತಾವರಣ, ಪಿಡಿಒಗಳ ಬದಲಾವಣೆ ಹಾಗೂ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಮಸ್ಯೆಗಳು ಮತ್ತಷ್ಟು ಜಟಿಲ ವಾಗತೊಡಗಿವೆ. ಇದಕ್ಕೆ ನಿದರ್ಶನ ಎನ್ನುವಂತೆ ಪಶು ಆಸ್ಪತ್ರೆ ನಿರ್ಮಿಸಲು ಸೂಕ್ತ ಸ್ಥಳ ದೊರೆಯದ ಕಾರಣ ಸರ್ಕಾರದಿಂದ ಮಂಜೂರಾಗಿರುವ 35 ಲಕ್ಷ ರೂ. ಅನುದಾನ ಬಳಕೆಯಾಗದೆ ಕೊಳೆಯುತ್ತಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನ ವಂತೆ ಗ್ರಾಮಸ್ಥರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳು ವಂತಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಗಮನ ಹರಿಸಿ ಸಮಸ್ಯೆಗಳಿಗೆ ಸ್ಪಂದಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

 

● ರಾಮಚಂದ್ರ

Advertisement

Udayavani is now on Telegram. Click here to join our channel and stay updated with the latest news.

Next