Advertisement

ದೀಪಾವಳಿ ಹಬ್ಬದಲ್ಲಿ ಟನ್‌ಗಟ್ಟಲೇ ತ್ಯಾಜ್ಯ ಸಂಗ್ರಹ

04:08 PM Nov 09, 2018 | Team Udayavani |

ಕೊಪ್ಪಳ: ಎರಡು ದಿನದ ಹಬ್ಬಕ್ಕಾಗಿ ನಗರದಲ್ಲಿ ಟನ್‌ಗಟ್ಟಲೇ ತ್ಯಾಜ್ಯ ಸಂಗ್ರಹವಾಗಿದೆ. ಬಾಳೆದಿಂಡು, ಅಡಕೆ ಸೇರಿದಂತೆ ಚಂಡುಹೂವುಗಳನ್ನು ವ್ಯಾಪಾರಿಗಳು ಎಲ್ಲೆಂದರಲ್ಲಿ ಬಿಸಾಡಿ ತೆರಳಿದ್ದು, ಗುರುವಾರ ನಗರಸಭೆಯಿಂದ ತ್ಯಾಜ್ಯ ವಿಲೇವಾರಿಗೆ ಹರಸಾಹಸ ಮಾಡಬೇಕಾಯಿತು. ಇಂತಹ ಸಂದರ್ಭದಲ್ಲಿ ನಗರಸಭೆಯಿಂದ ವ್ಯಾಪಾರಿಗಳಿಗೆ ಖಡಕ್‌ ಸೂಚನೆ ನೀಡುವುದು ಅವಶ್ಯವಾಗಿದೆ.

Advertisement

ಹೌದು. ಕೊಪ್ಪಳವನ್ನು ಸುಂದರ ನಗರವನ್ನು ಮಾಡುತ್ತೇವೆ ಎನ್ನುವ ಮಾತಿನ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ದೀಪಾವಳಿ ಹಬ್ಬ ಕೇವಲ ಎರಡು ದಿನ ಮಾತ್ರ ನಡೆದಿದೆ. ಆದರೆ ಎಲ್ಲಿ ನೋಡಿದರಲ್ಲಿ ಕಸದ ರಾಶಿಯೇ ಕಣ್ಣಿಗೆ ಗೋಚರವಾಗುತ್ತಿದೆ. ಬಾಳೆ ಎಲೆ, ಬಾಳೆ ದಿಂಡು, ಹೂವಿನ ಕೊಂಬೆ ಸೇರಿದಂತೆ ಪ್ಲಾಸ್ಟಿಕ್‌ ಹಾಳೆಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಇದು ನಗರದ ಸೌಂಧರ್ಯವನ್ನೇ ಹಾಳು ಮಾಡಿದೆ.

ದೀಪಾವಳಿ ಪ್ರಯುಕ್ತ ವ್ಯಾಪಾರ ವಹಿವಾಹಿಟಿಗೆ ಬರುವ ವ್ಯಾಪಾರಿಗಳು ತಂದ ಮಾಲು ಸಕಾಲಕ್ಕೆ ವಹಿವಾಟು ನಡೆಯದ ಹಿನ್ನೆಲೆಯಲ್ಲಿ ವ್ಯಾಪಾರ ಮಾಡಿದ ಸ್ಥಳದಲ್ಲೇ ಬಿಟ್ಟು ತೆರಳುತ್ತಿದ್ದಾರೆ. ಇನ್ನೂ ಹಬ್ಬ ಆಚರಣೆ ಮಾಡುವ ಜನರು ಮನೆ, ಅಂಗಡಿ ಮುಂಗಟ್ಟಿ ಮುಂದಿಟ್ಟ ಬಾಳೆ ದಿಂಡು ಹಾಗೂ ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ಬೆಳಕಿಗೆ ಬರುತ್ತಿದೆ.

ಕಾರ್ಮಿಕರಿಗೆ ಪುರುಸೊತ್ತಿಲ್ಲ: ಹಬ್ಬ ಆರಂಭವಾದ ದಿನದಿಂದ ನಗರಸಭೆಗೆ ತಲೆ ಬಿಸಿ ಶುರುವಾಗಿದೆ. ದಿನವೂ ಎಲ್ಲೆಂದರಲ್ಲಿ ಬಿಸಾಡಿದ ಕಸವನ್ನು ಮಿನಿ ಟಿಪ್ಪರ್‌ಗಳಲ್ಲಿ ಘನ ತ್ಯಾಜ್ಯ ಘಟಕಕ್ಕೆ ಸಾಗಾಟ ಮಾಡಲಾಗುತ್ತಿದೆ.

ಅದರಲ್ಲೂ ಜವಾಹರ ರಸ್ತೆ, ಮಾರ್ಕೆಟ್‌, ಸಾರ್ವಜನಿಕ ಮೈದಾನ, ಕೇಂದ್ರಿಯ ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜೆಸಿಬಿ ಮೂಲಕ ಕಸದ ವಿಲೇವಾರಿ ನಡೆದಿತ್ತು. ಕಾರ್ಮಿಕರಿಗೆ ಹಬ್ಬ ಮಾಡಲೂ ಪುರುಸೊತ್ತಿಲ್ಲದಂತಹ ಪರಿಸ್ಥಿತಿ ಎದುರಾಗಿತ್ತು.

Advertisement

ವ್ಯಾಪಾರಿಗಳಿಗೆ ಸೂಚನೆ ಅವಶ್ಯ: ಹಬ್ಬದಂತಹ ಸಂದರ್ಭದಲ್ಲಿ ನಗರಸಭೆಯು ವ್ಯಾಪಾರಿಗಳಿಗೆ, ವ್ಯಾಪಾರ ನಡೆಸುವ ಜನರಿಗೆ ಕಸ ಎಲ್ಲೆಂದರಲ್ಲಿ ಬಿಸಾಡುವ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಅಲ್ಲದೇ, ಆಟೋ ಮೂಲಕ ಧ್ವನಿವರ್ಧಕದಲ್ಲಿ ಜಾಗೃತಿ ಮೂಡಿಸಿ ಕಸ ಎಲ್ಲೆಂದರಲ್ಲಿ ಬಿಸಾಡಿದರೆ ದಂಡದ ಬಗ್ಗೆ ಖಡಕ್‌ ಸೂಚನೆ ನೀಡುವುದು ಅವಶ್ಯವಾಗಿದೆ. ಆದರೆ ಈ ಬಾರಿ ಅಷ್ಟೊಂದು ಪ್ರಮಾಣದಲ್ಲಿ ನಗರಸಭೆ ತನ್ನ ಕೆಲಸ ಮಾಡಿಲ್ಲ. ಆದರೂ ಕಸ ವಿಲೇವಾರಿ ಪ್ರಕ್ರಿಯೆ ಮಾತ್ರ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next