ತುಮಕೂರು: ಶೈಕ್ಷಣಿಕ ನಗರದಲ್ಲಿ ಬೀದಿನಾಯಿಗಳ ಕಾಟ ದಿನೆದಿನೇ ತೀವ್ರವಾಗುತ್ತಿದೆ. ಈ ನಾಯಿಗಳಿಂದ ರಕ್ಷಣೆ ನೀಡುವವರು ಯಾರು ಎನ್ನುವ ಪ್ರಶ್ನೆ ತುಮಕೂರು ನಗರದ ನಾಗರಿಕರನ್ನು ಕಾಡುತ್ತಿದೆ. ಕೆಲವು ಬಡಾವಣೆಗಳಲ್ಲಿ ನಾಯಿಗಳಿಗೆ ಹೆದರಿ ಜನ ಓಡಾಡುವುದೇ ಕಷ್ಟವಾಗಿದೆ. ಜನವರಿಯಿಂದ ಮೇ ತಿಂಗಳವರೆಗೆ 2547 ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ.
ಹಿಂದೊಮ್ಮೆ ತುಮಕೂರಿನಲ್ಲೂ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಇದನ್ನೆಲ್ಲಾ ನೋಡಿದರೆ ತುಮಕೂರು ನಾಗರೀಕರಿಗೆ ನಾಯಿಗಳೆಂದರೆ ಬೆಚ್ಚಿಬೀಳುವ ಪರಿಸ್ಥಿತಿ ಎದುರಾಗಿದೆ. ನಗರದ ಯಾವ ರಸ್ತೆಗೆ ಹೋದರೂ ನಾಯಿಗಳ ಹಿಂಡೇ ಕಾಣುತ್ತವೆ. ಇವುಗಳಿಂದಾಗಿ ಜನರು ನೆಮ್ಮದಿಯಿಂದ ಹೋಗಲು ಭಯಪಡುವಂತಾಗಿದೆ. ಆದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ನಾಯಿಗಳ ಕಡಿವಾಣಕ್ಕೆ ಕ್ರಮಕೈಗೊಂಡಿಲ್ಲ.
ಸಮಸ್ಯೆಗಳ ಸರಮಾಲೆ: ಸ್ಮಾರ್ಟ್‌ಸಿಟಿ ನಗರವಾಗಿ ಬೆಳವಣಿಗೆಯಾಗುತ್ತಿರುವ ತುಮಕೂರಿನಲ್ಲಿ ರಸ್ತೆ, ನೀರು, ಕಸದ ಸಮಸ್ಯೆ ಜೊತೆಗೆ ಬೀದಿನಾಯಿಗಳ ಕಾಟವೂ ಜನರಿಗೆ ತಲೆನೋವಾಗಿದೆ.
ಹಿಂಡು ಹಿಂಡಾಗಿ ಬರುವ ಈ ನಾಯಿಗಳು ಹಲವು ಮಕ್ಕಳಿಗೆ ಈಗಾಗಲೇ ಕಚ್ಚಿ ಗಾಯಮಾಡಿವೆ. ಶಾಲೆಗಳಿಗೆ ಹೋಗುವ ಮಕ್ಕಳು ಸುರಕ್ಷಿತವಾಗಿ ಮನೆಗೆ ಬರುವವರೆಗೂ ಪೋಷಕರಿಗೆ ಸಮಾಧಾನ ವಿರುವುದಿಲ್ಲ. ಬಂದ ನಂತರ ನಿಟ್ಟುಸಿರು ಬಿಡು ವಂತಾಗಿದೆ. ಹೀಗೆ ನಗರದ ನಾಗರಿಕರು ಒಂದಲ್ಲಾ ಒಂದು ರೀತಿಯ ಸಂಕಷ್ಟ ಅನುಭವಿಸುತ್ತಾ ಪಾಲಿಕೆ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಲೇ ಇದ್ದಾರೆ.
ಆದರೆ ಮಹಾನಗರ ಪಾಲಿಕೆಯಲ್ಲಿರುವವರು ನಾಯಿ ಗಳನ್ನು ಹಿಡಿಯಲು ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಅಧಿಕವಾಗಿವೆ. ಇಷ್ಟೆಲ್ಲ ಆಗುತ್ತಿದ್ದರೂ, ಮಹಾನಗರ ಪಾಲಿಕೆಯ ಜನ ಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ನಾಗರಿಕರು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
● ಚಿ.ನಿ.ಪುರುಷೋತ್ತಮ್