Advertisement

ನೂರಾ ನಲವತ್ತು ವರ್ಷದ ಶಾಲೆಯಲ್ಲಿ ಸಮಸ್ಯೆಗಳು ನೂರೆಂಟು!

05:05 PM May 26, 2018 | Team Udayavani |

ಮಹಾಲಿಂಗಪುರ: ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಪಟ್ಟಣದ ಪ್ರಪ್ರಥಮ ಶಾಲೆಯಾಗಿದೆ. 1876ರಲ್ಲಿ ಪ್ರಾರಂಭವಾದ ಶಾಲೆಗೆ ಈಗ ಬರೋಬ್ಬರಿ 142ವರ್ಷಗಳ ಸಂಭ್ರಮ. ಆದರೇ ಇಂದಿಗೂ ಶಾಲೆಯು ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ದುಃಖದ ಸಂಗತಿ.

Advertisement

ಬೀಳುವ ಹಂತದಲ್ಲಿ ಕೊಠಡಿಗಳು: ಐತಿಹಾಸಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಗಳು ನಡೆಯುತ್ತಿವೆ. ಶಾಲೆಗೆ ಅವಶ್ಯಕವಿರುವ 9 ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಪ್ರತಿ ವರ್ಷ ಈ ಶಾಲೆಯಲ್ಲಿ ಸರಾಸರಿ 300ರಿಂದ 400 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನಿತ್ಯ ತರಗತಿಗಳು ನಡೆಯುವ ಹಳೆಯ ಹಂಚಿನ 7 ಕೊಠಡಿಗಳಲ್ಲಿ 6 ಕೊಠಡಿಗಳು ಅಲ್ಪ ಮಳೆಗೆ ಸೋರುತ್ತವೆ. ಚಾವಣಿ ಹಂಚುಗಳು ಹಾಳಾಗಿವೆ. ಕೊಠಡಿಗಳಲ್ಲಿ ಮಳೆ ನೀರಿಗೆ ಬುಟ್ಟಿಗಳನ್ನು ಇಟ್ಟು, ಪಕ್ಕದಲ್ಲೇ ವಿದ್ಯಾರ್ಥಿಗಳು ಕುಳಿತು ಕಲಿಯುವಂತಾಗಿದೆ.

ಸಿಮೆಂಟ್‌ ಕಟ್ಟಡದ ಕೊಠಡಿಗಳಲ್ಲಿ 3 ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಚಾವಣಿಯಲ್ಲಿ ಮಳೆ ನೀರು ನಿಲ್ಲುತ್ತಿದ್ದರು ನೀರು ಹರಿದು ಹೋಗದೇ, ಗೋಡೆಗಳಲ್ಲಿ ನೀರು ಇಂಗಿ, ಗೋಡೆಗಳು ಬಿರುಕು ಬಿಟ್ಟಿವೆ. ಕೆಲ ಭಾಗದ ಗೋಡೆಗಳಲ್ಲಿ ಮರಗಳು ಬೆಳೆಯುತ್ತಿರುವುದರಿಂದ ಗೋಡೆಗಳು ಮತ್ತಷ್ಟು ಬೀಳುವ ಹಂತ ತಲುಪಿವೆ. ಮಳೆ ನೀರಿಗೆ ಕೊಠಡಿಗಳ ಕಿಟಕಿಗಳು ನೀರಿಗೆ ನೆನೆದು ಹಾಳಾಗಿ ಹೋಗಿವೆ. ಒಳಗಡೆ ಸ್ಲ್ಯಾಬ್ ಬಿಚ್ಚಿ ಬೀಳುತ್ತಿದ್ದರು ಸಹ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಇತ್ತ ಗಮನ ಹರಿಸಿಲ್ಲ.

ಶತಮಾನ ಕಂಡ ಶಾಲೆಯಲ್ಲಿ ಇಲ್ಲಿಯವರೆಗೆ ಕುಡಿಯುವ ನೀರಿನ ಸ್ವಂತ ಕೊಳವೆ ಬಾವಿ ಇಲ್ಲ. ಪುರಸಭೆ ನಳದ ನೀರಿನ ಸಂಪರ್ಕ ಪಡೆಯಲಾಗಿದೆ ಎನ್ನುತ್ತಾರೆ ಶಾಲೆಯ ಶಿಕ್ಷಕರು.

ಶಾಲೆಯು ಪಟ್ಟಣದ ಡಬಲ್‌ ರಸ್ತೆಯ ಪಕ್ಕ ಮತ್ತು ಮಂಗಳವಾರದ ಸಂತೆ ಸ್ಥಳಕ್ಕೆ ಹತ್ತಿರವಿರುವುದರಿಂದ ಮಂಗಳವಾರ ಸಂತೆ, ಜಾತ್ರೆ, ಉತ್ಸವಗಳ ಗದ್ದಲದ ಜೊತೆಗೆ ವಿದ್ಯಾರ್ಥಿಗಳಿಗೆ ಆಟಕ್ಕೆ ಸೂಕ್ತ ಜಾಗದ ಕೊರತೆ ಇದೆ. ಇರುವ ತುಂಡು ಜಾಗದಲ್ಲಿ ಅಲ್ಪ ಮಳೆಯಾದರೂ ಮೈದಾನವು ಕೆಸರು ಗದ್ದೆಯಂತಾಗುತ್ತಿದೆ.

Advertisement

ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಕೆಲವರು ನಿವೃತ್ತಿಯಾಗಿದ್ದಾರೆ. ಅಂಥ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶತಮಾನ ಕಂಡ ಶಾಲೆಯು ಯಾರ ಮತ್ತು ಯಾವ ಗಣನೆಗೆ ಬಾರದೆ ಬದಲಾವಣೆ ಕಾಣದೆ ನಿತ್ಯ ಹಲವು ಸಮಸ್ಯೆಗಳ ಸಂತೆಯಲ್ಲೇ ಇಂದಿಗೂ ಜ್ಞಾನಾರ್ಜನೆ ಕಾಯಕ ಮುಂದುವರಿಸಿದೆ.

ಶಾಲೆಯ ಹಳೆಯ ಕಟ್ಟಡದ ಕೊಠಡಿಗಳ ಹಂಚುಗಳ ಚಾವಣಿ ದುರಸ್ತಿ ಮತ್ತು ಸಿಮೆಂಟ್‌ ಕಟ್ಟಡದ ಶಿಥಿಲಾವಸ್ಥೆಯ ಕೊಠಡಿಗಳ ದುರಸ್ತಿಗಾಗಿ ಶಿಕ್ಷಣ ಇಲಾಖೆಗೆ, ಜಿಲ್ಲಾ ಪಂಚಾಯತ್‌ ಸಿಇಒ ಅವರಿಗೆ, ಪುರಸಭೆಗೆ ಮನವಿ ಸಲ್ಲಿಸಲಾಗಿದೆ.
ಎಸ್‌.ಜಿ.ಜುಟ್ನಟ್ಟಿ
ಪ್ರಭಾರಿ ಮುಖ್ಯಶಿಕ್ಷಕರು.

ತಾಲೂಕಿನಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಮಾಹಿತಿ ಸಂಗ್ರಹಿಸಿ, ಮೇಜರ್‌ ರಿಪೇರಿ ಕೆಲಸ ಮಾಡಿಸುತ್ತಿದ್ದೇವೆ. ವರ್ಗಾವಣೆ ಮತ್ತು ಬಡ್ತಿ ಪ್ರಕ್ರಿಯೆಗಳು ಮುಗಿದ ನಂತರ ಖಾಲಿ ಉಳಿಯುವ ಶಿಕ್ಷಕ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿ ಶಿಕ್ಷಕರ ಕೊರತೆಯನ್ನು ನೀಗಿಸುತ್ತೇವೆ. 
ವಿಠ್ಠಲ ದೇವಣಗಾಂವ,
ಬಿಇಒ, ಮುಧೋಳ.

Advertisement

Udayavani is now on Telegram. Click here to join our channel and stay updated with the latest news.

Next