ರಾಯಚೂರು: ಕಳೆದ ಒಂದು ವರ್ಷದಿಂದ ಈಶಾನ್ಯ ಸಾರಿಗೆ ನಿಗಮ ನಷ್ಟದಲ್ಲೇ ಸಾಗುತ್ತಿದ್ದು, ಒಂದರ ಮೇಲೊಂದರಂತೆ ನಷ್ಟ ಬರೆ ಬೀಳುತ್ತಲೇ ಇದೆ. ಸಾರಿಗೆ ನೌಕರರ ಮುಷ್ಕರದಿಂದ ಚೇತರಿಕೆ ಕಾಣುವ ಮುನ್ನವೇ ಮತ್ತೆ ಕರ್ಫ್ಯೂ ಮಂಕು ಕವಿದಿದೆ.
ನಿತ್ಯ 50 ಲಕ್ಷಕ್ಕಿಂತ ಅಧಿ ಕ ಲಾಭದ ಮುಖ ನೋಡುತ್ತಿದ್ದ ರಾಯಚೂರು ಸಾರಿಗೆ ನಿಗಮಕ್ಕೀಗ ನಿತ್ಯ ಲಕ್ಷ ಆದಾಯ ಬಂದರೂ ಹೆಚ್ಚು ಎನ್ನುವಂತಾಗಿದೆ. ಜಿಲ್ಲೆಯಲ್ಲಿ 7 ಡಿಪೋಗಳಿದ್ದು, 600ಕ್ಕೂ ಅಧಿ ಕ ಬಸ್‌ಗಳಿವೆ. ಈಗ ಮಾತ್ರ ಅಬ್ಬಬ್ಟಾ ಎಂದರೆ 100ಕ್ಕಿಂತ ಕಡಿಮೆ ಬಸ್‌ಗಳ ಓಡಿಸಲಾಗುತ್ತಿದೆ. ಇದರಿಂದ ನಿಗಮಕ್ಕೆ ಬರುತ್ತಿದ್ದ ಆದಾಯದಲ್ಲಿ ಶೇ.90ರಷ್ಟು ಕೊಕ್ಕೆ ಬಿದ್ದಿದೆ.
ಮೇಲಿಂದ ಮೇಲೆ ಆಘಾತ: ಸಾರಿಗೆ ಅಗತ್ಯ ಸೇವೆಗಳಲ್ಲಿ ಒಂದಾಗಿದೆ. ಆದರೆ, ನಾನಾ ಕಾರಣಗಳಿಂದ ಸಾರಿಗೆ ನಿಗಮಕ್ಕೆ ಮೇಲಿಂದ ಮೇಲೆ ಆಘಾತಗಳು ಎದುರಾಗುತ್ತಿವೆ. ಕಳೆದ ವರ್ಷ ಲಾಕ್ ಡೌನ್ ಜಾರಿಗೊಳ್ಳುತ್ತಿದ್ದಂತೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಶುರುವಾಯಿತು. ಹಲವು ತಿಂಗಳು ಬಸ್‌ಗಳು ರಸ್ತೆಗೆ ಇಳಿಯದ ಕಾರಣ ನಷ್ಟದ ಪ್ರಮಾಣ ಶತಕೋಟಿ ದಾಟಿ ಹೋಗಿತ್ತು.
ಲಾಕ್‌ಡೌನ್ ತಿಳಿಯಾಗಿ ಮೊದಲಿನಂತೆ ಎಲ್ಲೆಡೆ ಬಸ್ ಸಂಚಾರ ಶುರುವಾಗುತ್ತಿದ್ದಂತೆ ಡಿಸೆಂಬರ್ ನಲ್ಲಿ ಸಾರಿಗೆ ನೌಕರರ ಮುಷ್ಕರ ನಡೆಯಿತು. ಆದರೆ, ಅಲ್ಲಿಗಾಗಲೇ ಪೂರ್ಣ ಪ್ರಮಾಣದ ಸೇವೆ ಶುರುವಾಗಿರಲಿಲ್ಲ. ಕಳೆದ ಕೆಲ ತಿಂಗಳಿಂದ ಹಳ್ಳಿಗಳಿಗೂ ಬಸ್ ಓಡಾಟ ಶುರುವಾಗಿ ಜನ ಸಂಚಾರ ಮೊದಲಿನಂತೆ ಆಗಿದೆ ಎನ್ನುವಷ್ಟರಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿ ಮತ್ತೆ ಸಂಕಷ್ಟ ಶುರುವಾಯಿತು.
ಈ ವೇಳೆ ಶ್ರೀಶೈಲಕ್ಕೆ ನೀಡುತ್ತಿದ್ದ ವಿಶೇಷ ಸೇವೆಯೂ ಕಲ್ಪಿಸಲಾಗದ್ದಕ್ಕೆ ನಿಗಮಕ್ಕೆ ಕೋಟ್ಯಂತರ ರೂ. ನಷ್ಟವಾಯಿತು. ಈಗ ಸರ್ಕಾರ ಮತ್ತೆ ವೀಕೆಂಡ್, ಆಫ್ ಡೆ ಕರ್ಫ್ಯೂಗಳನ್ನು ಜಾರಿ ಮಾಡಿದ್ದು, ಸಾರಿಗೆ ಆದಾಯದ ಮೇಲೆ ಮತ್ತೆ ಬರೆ ಬಿದ್ದಂತಾಗಿದೆ.