Advertisement

ಮರು ಟೆಂಡರ್‌ ಕರೆಯದೆ ಪುರಸಭೆಗೆ ನಷ್ಟ

04:47 PM Nov 15, 2019 | Team Udayavani |

ಎಚ್‌.ಡಿ.ಕೋಟೆ: ಪಟ್ಟಣದ ಪುರಸಭೆಯ ಆದಾಯ ಮೂಲವಾದ ವಾರದ ಸಂತೆ ಸುಂಕವಸೂಲಾತಿ ಟೆಂಡರ್‌ ಅವಧಿ ಮುಗಿದು 3-4 ತಿಂಗಳು ಕಳೆದರೂ ಮರು ಟೆಂಡರ್‌ ಪ್ರಕ್ರಿಯೆ ನಡೆಸದೆ ಪುರಸಭೆ ಆದಾಯಕ್ಕೆ ಕತ್ತರಿ ಬೀಳುತ್ತಿದ್ದರೂ ಮರುಟೆಂಡರ್‌ಗೆ ಪುರಸಭೆ ಮುಂದಾಗಿಲ್ಲ.

Advertisement

ಕಳೆದ ಸಾಲಿನಲ್ಲಿ ಮಾಸಿಕ 33 ಸಾವಿರ ರೂ. ಸಂತೆ ಪಾವತಿಸಲು ಟೆಂಡರ್‌ ತಮ್ಮದಾಗಿಸಿಕೊಂಡಿದ್ದ ಟೆಂಡರ್‌ ಅವಧಿ ಪೂರ್ಣಗೊಳ್ಳುತ್ತಿದ್ದಂತೆಯೇ ಪುರಸಭೆ ಮರು ಟೆಂಡರ್‌ಗೆ ಹರಾಜು ಬೀಡ್‌ ನಡೆಸಿದಾಗ 22 ಸಾವಿರಕ್ಕೆ ಬೀಡ್‌ ನಿಲ್ಲುತ್ತಿದ್ದಂತೆಯೇ ಕಳೆದ ಸಾಲಿಗಿಂತ 11 ಸಾವಿರ ಕಡಿಮೆ ಬೀಡ್‌ ನಡೆದಿದೆ ಎಂದು ಟೆಂಡರ್‌ ರದ್ದು ಪಡಿಸಲಾಯಿತು. ಅಲ್ಲಿಂದ ಇಲ್ಲಿಯ ತನಕ ಮತ್ತೆ ಸಂತೆ ಸುಂಕ ಹರಾಜಿಗೆ ಮರು ಟೆಂಡರ್‌ಗೆ ಪುರಸಭೆ ಮುಂದಾಗಿಲ್ಲ. ಪ್ರತಿ ಮಂಗಳವಾರ ಪಟ್ಟಣದಲ್ಲಿ ಜರುಗುವ ವಾರದ ಸಂತೆಯಲ್ಲಿ ಪುರಸಭೆ ಸಿಬ್ಬಂದಿಯೇ ಸುಂಕ ವಸೂಲಾತಿ ಮಾಡುತ್ತಿದ್ದು ಪ್ರತಿವಾರ ಸುಮಾರು 6 ಸಾವಿರ ರೂ. ತನಕ ಸುಂಕ ವಸೂಲಾತಿ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.

ವಾರದಲ್ಲಿ 6 ಸಾವಿರದಂತೆ ಲೆಕ್ಕಚಾರ ಮಾಡಿದಾಗ ಮಾಹೆಯಾನ 24 ಸಾವಿರ ಆದಾಯ ಬರುತ್ತಿದ್ದು, ಕಳೆದ ಹರಾಜಿಗೆ ಹೋಲಿಕೆ ಮಾಡಿದರೆ 9 ಸಾವಿರ ಪುರಸಭೆ ಆದಾಯಕ್ಕೆ ಪ್ರತಿ ತಿಂಗಳು ಕತ್ತರಿ ಬೀಳುತ್ತಿದೆ. ಇದನ್ನು ಮನಗಂಡ ಹಲವು ಮಂದಿ ಹಿಂದಿನ ಟೆಂಡರ್‌ ತಮ್ಮದಾಗಿಸಿಕೊಂಡಿದ್ದ ವ್ಯಕ್ತಿಯಿಂದ ಮರುಟೆಂಡರ್‌ ಹರಾಜು ಪ್ರಕ್ರಿಯೆ ನಡೆಯುವ ತನಕ ಮಾಹೆಯಾನ 30 ಸಾವಿರ ಪಾವತಿಸುವುದಾಗಿಯೂ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಹರಾಜಿನಲ್ಲಿ ಟೆಂಡರ್‌ ತಮ್ಮದಾಗಿಸಿ ಕೊಂಡ ವ್ಯಕ್ತಿಗೆ ಬಿಟ್ಟುಕೊಡಲು ಬದ್ದ ಅನ್ನುವ ಲಿಖೀತ ಹೇಳಿಕೆ ನೀಡಿದರೂ ಇದಕ್ಕೆ ಪುರಸಭೆ ಅನುಮತಿ ನೀಡಿಲ್ಲ.

ಇದರಿಂದ ಪುರಸಭೆ ಆದಾಯದಲ್ಲಿ ಪ್ರತಿ ತಿಂಗಳು 9 ಸಾವಿರಕ್ಕೂ ಹೆಚ್ಚು ಆದಾಯದಲ್ಲಿ ನಷ್ಟ ಉಂಟಾಗುತ್ತಿದೆ. ಇನ್ನಾದರೂ ಪುರಸಭೆ ಆಡಳಿತ ಮಂಡಳಿ ಮತ್ತು ಜಿಲ್ಲಾಧಿಕಾರಿಗಳು ಕೂಡಲೆ ಇತ್ತ ಗಮನಹರಿಸಿ ಮರು ಟೆಂಡರ್‌ ಆಹ್ವಾನಿಸಿ ಪುರಸಭೆ ಆದಾಯ ಹೆಚ್ಚಸುವ ದೃಷ್ಟಿಯಿಂದ ಸಂತೆ ಸುಂಕ ವಸೂಲಾತಿಯ ಮರು ಟೆಂಡರ್‌ಗೆ ಕ್ರಮವಹಿಸುವಂತೆ ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.

ಕಳೆದ ಸಾಲಿನಲ್ಲಿ 33 ಸಾವಿರ ಸಂತೆ ಸುಂಕ ವಸೂಲಾತಿಗೆ ಹರಾಜು ನಡೆದಿತ್ತು. ಈಗ ಕಳೆದ 3 ತಿಂಗಳ ಹಿಂದೆ ಆ ಅವಧಿ ಪೂರ್ಣಗೊಂಡಿದ್ದು ಮರು ಟೆಂಡರ್‌ಗಾಗಿ ಹರಾಜು ಪ್ರತಿಕ್ರಿಯೆ ನಡೆದು ಕಳೆದ ಸಾಲಿಗಿಂತ ಕಡಿಮೆ ಹರಾಜಾದ ಹಿನ್ನೆಲೆಯಲ್ಲಿ ಮತ್ತೆ ಮರುಟೆಂಡರ್‌ಗೆ ಸಿದ್ಧತೆ ನಡೆಸಲಾಗಿದೆ. ಅಲ್ಲಿಯ ತನಕ ಪುರಸಭೆ ವತಿಯಿಂದಲೇ ಸುಂಕ ವಸೂಲಾತಿ ಮಾಡುತ್ತಿದ್ದು ಅತೀ ಶೀಘ್ರದಲ್ಲಿ ಮರು ಹರಾಜು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. -ವಿಜಯಕುಮಾರ್‌, ಮುಖ್ಯಾಧಿಕಾರಿ, ಪುರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next